
ಬೀಜಿಂಗ್: ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಇಂದು ಭಾರತ ತಂಡ ಪಾಕಿಸ್ತಾನ ತಂಡವನ್ನು ಭರ್ಜರಿಯಾಗಿ ಮಣಿಸಿ ಅಜೇಯವಾಗಿ ಟೂರ್ನಿಯ ಸೆಮೀಸ್ ಗೆ ಲಗ್ಗೆ ಇರಿಸಿದೆ.
ಹೌದು.. ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಯಲ್ಲಿ ಈಗಾಗಲೇ ಸೆಮಿಫೈನಲ್‌ಗೆ ಸ್ಥಾನ ಕಾದಿರಿಸಿದ್ದ ಭಾರತ ಹಾಕಿ ತಂಡ ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನ ತಂಡವನ್ನು ಸೋಲಿಸುವ ಮೂಲಕ ತನ್ನ ಅಜೇಯ ಓಟವನ್ನು ಮುಂದುವರಿಸಿದೆ.
ಶನಿವಾರ ಚೀನಾದ ಮೊಕಿಯಲ್ಲಿ ನಡೆದ ಪಂದ್ಯದಲ್ಲಿ ಭಾರತ 2–1 ಗೋಲುಗಳಿಂದ ಪಾಕಿಸ್ತಾನ ತಂಡವನ್ನು ಸದೆಬಡಿಯಿತು. ಈ ಪಂದ್ಯದಲ್ಲಿ ಭಾರತದ ಹಾಕಿ ತಂಡದ ನಾಯಕ ಹರ್ಮನ್‌ಪ್ರೀತ್ ಸಿಂಗ್ ಎರಡು ಗೋಲುಗಳನ್ನು ಹೊಡೆದು ತಂಡದ ಗೆಲುವಿಗೆ ಕಾರಣರಾದರು.
ಈ ಗೆಲುವಿನ ಮೂಲಕ ಭಾರತ ತಂಡ ಸತತ ಐದನೇ ಜಯ ದಾಖಲಿಸಿತು. ಇದರೊಂದಿಗೆ ಭಾರತ ಹಾಕಿ ತಂಡ ಅಜೇಯ ತಂಡವಾಗಿ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ. ಈ ಟೂರ್ನಿಯಲ್ಲಿ ಭಾರತ ತಂಡ ಒಂದೇ ಒಂದು ಪಂದ್ಯವನ್ನು ಸೋತಿಲ್ಲ.
ಪೆನಾಲ್ಟಿ ಕಾರ್ನರ್ ಮೂಲಕ 2 ಗೋಲು ಗಳಿಸಿದ ಭಾರತದ ನಾಯಕ ಹರ್ಮನ್‌ಪ್ರೀತ್ ಸಿಂಗ್ ತಂಡದ ಗೆಲುವಿನ ಹೀರೋ ಎನಿಸಿಕೊಂಡರೆ, ಆರಂಭದಲ್ಲೇ ಗೋಲು ದಾಖಲಿಸಿ ಭಾರತಕ್ಕೆ ತಿರುಗೇಟು ನೀಡಿದ್ದ ಪಾಕಿಸ್ತಾನ ಅಂತಿಮವಾಗಿ ಪಂದ್ಯವನ್ನು 2-1 ಅಂತರದಿಂದ ಕಳೆದುಕೊಂಡಿತು.
ಆರು ತಂಡಗಳಿರುವ ಕಣದಲ್ಲಿ ಭಾರತ ಆಡಿರುವ ಐದು ಪಂದ್ಯಗಳನ್ನು ಹೆಚ್ಚಿನ ಪ್ರಯಾಸವಿಲ್ಲದೇ ಗೆದ್ದುಕೊಂಡಿದೆ. ಪಾಯಿಂಟ್ಸ್ ಪಟ್ಟಿಯಲ್ಲಿ ಭಾರತ ಮೊದಲ ಸ್ಥಾನದಲ್ಲಿದೆ.
Advertisement