
ನವದೆಹಲಿ: ಆಪರೇಷನ್ ಸಿಂಧೂರದ ನಂತರ ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಗಳು ಹದಗೆಟ್ಟಿದ್ದು, ಏಷ್ಯಾಕಪ್ 2025 (Asia Cup 2025) ಟೂರ್ನಿಗಾಗಿ ಭಾರತಕ್ಕೆ ಹೋಗಲ್ಲ ಎಂದು ಪಾಕಿಸ್ತಾನ ತಂಡ ಘೋಷಣೆ ಮಾಡಿದ್ದು, ಇತ್ತ ಬಾಂಗ್ಲಾದೇಶ ತಂಡಕ್ಕೆ ಬಂಪರ್ ಅವಕಾಶ ಸಿಗುವ ಸಾಧ್ಯತೆ ಇದೆ.
ಆಪರೇಷನ್ ಸಿಂಧೂರ ಬಳಿಕ ಭಾರತ ಹಾಗೂ ಪಾಕಿಸ್ತಾನ (India- Pakistan) ನಡುವಿನ ಎಲ್ಲಾ ರೀತಿಯ ಸಂಬಂಧಗಳಿಗೆ ಸಧ್ಯಕ್ಕೆ ಪೂರ್ಣ ವಿರಾಮ ಹಾಕಲಾಗಿದ್ದು, ಇದರ ಪರಿಣಾಮ ಕೇವಲ ಕ್ರಿಕೆಟ್ ಮಾತ್ರವಲ್ಲ ಇತರೆ ಕ್ರೀಡೆಗಳ ಮೇಲೂ ಆಗುತ್ತಿದೆ. ಭಾರತ ಹಾಗೂ ಪಾಕಿಸ್ತಾನ ನಡುವಿನ ಪಂದ್ಯಗಳು ಇದೀಗ ಭಾರತದ ಹೊರಗೂ ನಡೆಯುವ ಸಾಧ್ಯತೆಗಳಿಲ್ಲ ಎನ್ನಲಾಗುತ್ತಿದೆ.
ಇದಕ್ಕೆ ಇಂಬು ನೀಡುವಂತೆ 2025ರ ಪುರುಷರ ಹಾಕಿ ಏಷ್ಯಾಕಪ್‌ನಲ್ಲಿ ತಾನು ಭಾಗವಹಿಸುವುದಿಲ್ಲ ಎಂದು ಪಾಕಿಸ್ತಾನ ಘೋಷಣೆ ಮಾಡಿದ್ದು, ಭಾರತ ಸರ್ಕಾರ ವೀಸಾ ನೀಡಲು ಸಿದ್ಧವಿದ್ದರೂ, ಪಾಕಿಸ್ತಾನದ ಹಾಕಿ ಫೆಡರೇಷನ್ ಭದ್ರತಾ ಕಾರಣಗಳಿಂದ ನಿರಾಕರಿಸಿದೆ.
ಇದೇ ಆಗಸ್ಟ್ 29 ರಿಂದ ಬಿಹಾರದ ರಾಜ್‌ಗಿರ್‌ನಲ್ಲಿ ಆರಂಭವಾಗಲಿರುವ 2025 ರ ಪುರುಷರ ಹಾಕಿ ಏಷ್ಯಾಕಪ್ (Hockey Asia Cup 2025) ಪಂದ್ಯಾವಳಿಯಲ್ಲಿ ಪಾಕಿಸ್ತಾನ ತಂಡ ಭಾಗವಹಿಸುತ್ತಿಲ್ಲ ಎಂದು ಪಾಕ್ ತಂಡದ ಮೂಲಗಳು ಮಾಹಿತಿ ನೀಡಿವೆ.
ವೀಸಾ ಕೊಟ್ಟರೂ ಬರಲ್ಲ ಎಂದ ಪಾಕಿಗಳು
ಭಾರತ ಸರ್ಕಾರ ಪಾಕಿಸ್ತಾನಿ ಆಟಗಾರರಿಗೆ ವೀಸಾ ನೀಡಲು ಸಿದ್ಧವಾಗಿದೆ. ಆದರೆ ಪಾಕಿಸ್ತಾನ ಹಾಕಿ ಫೆಡರೇಶನ್ ಭದ್ರತಾ ಕಾಳಜಿಯನ್ನು ಉಲ್ಲೇಖಿಸಿ ಭಾರತಕ್ಕೆ ಪ್ರಯಾಣಿಸಲು ನಿರಾಕರಿಸಿದೆ. 2025 ರ ಹಾಕಿ ಏಷ್ಯಾಕಪ್‌ನಲ್ಲಿ ಒಟ್ಟು 8 ತಂಡಗಳು ಭಾಗವಹಿಸುತ್ತಿದ್ದು, ಭಾರತವು ಆತಿಥೇಯ ತಂಡವಾಗಿ ಅರ್ಹತೆ ಪಡೆದಿದೆ. ಭಾರತವನ್ನು ಹೊರತುಪಡಿಸಿ, ಚೀನಾ, ಜಪಾನ್, ಮಲೇಷ್ಯಾ, ದಕ್ಷಿಣ ಕೊರಿಯಾ, ಓಮನ್ ಮತ್ತು ಚೈನೀಸ್ ತೈಪೆ ತಂಡಗಳು ಈ ಪಂದ್ಯಾವಳಿಯಲ್ಲಿ ಭಾಗವಹಿಸಲಿವೆ.
ಬಾಂಗ್ಲಾದೇಶಕ್ಕೆ ಬಂಪರ್
ಇನ್ನು ಪ್ರಸ್ತುತ ಪಾಕಿಸ್ತಾನ ಟೂರ್ನಿಯಲ್ಲಿ ತಾನು ಭಾಗವಹಿಸುತ್ತಿಲ್ಲ ಎಂದು ಘೋಷಣೆ ಮಾಡಿದ್ದು, ನೆರೆಯ ಬಾಂಗ್ಲಾದೇಶಕ್ಕೆ ಬಂಪರ್ ಸಿಕ್ಕಂತಾಗಿದೆ. ಒಂದು ವೇಳೆ ಪಾಕಿಸ್ತಾನ ಟೂರ್ನಿಯಲ್ಲಿ ಭಾಗವಹಿಸಲು ಭಾರತಕ್ಕೆ ಬರದಿದ್ದರೆ, ಬಾಂಗ್ಲಾದೇಶ ತಂಡವೂ ಅವರ ಸ್ಥಾನದಲ್ಲಿ ಆಡಬಹುದು.
ಟೂರ್ನಿಯಿಂದ ಪಾಕಿಸ್ತಾನ ಹೊರಗುಳಿಯುತ್ತಿರುವುದರಿಂದ ಬದಲಿ ಆಯ್ಕೆಯನ್ನು ಹುಡುಕಲು ಶುರು ಮಾಡಿರುವ ಆಯೋಜಕರು ಪಾಕಿಸ್ತಾನದ ಬದಲಿಗೆ ಬಾಂಗ್ಲಾದೇಶ ತಂಡವನ್ನು ಆಡಲು ಸಂಪರ್ಕಿಸಿದ್ದಾರೆ ಎಂದು ವರದಿಯಾಗಿದೆ. ಹೀಗಾಗಿ ಪಾಕಿಸ್ತಾನ ಬದಲಿಗೆ ಬಾಂಗ್ಲಾದೇಶ ತಂಡವನ್ನು ಪರ್ಯಾಯವಾಗಿ ಪರಿಗಣಿಸಲಾಗುತ್ತಿದೆ ಎಂದು ಮೂಲಗಳು ತಿಳಿಸಿವೆ.
ಪಾಕಿಸ್ತಾನ ಬರದಿದ್ದರೆ ಬಾಂಗ್ಲಾದೇಶವನ್ನು ಭಾಗವಹಿಸಲು ಈಗಾಗಲೇ ಆಹ್ವಾನಿಸಲಾಗಿದೆ, ಆದರೆ ದೃಢೀಕರಣಕ್ಕಾಗಿ ನಾವು ಇನ್ನೂ ಎರಡು ದಿನ ಕಾಯಬೇಕಾಗುತ್ತದೆ. ಮುಂದಿನ 48 ಗಂಟೆಗಳಲ್ಲಿ ಪರಿಸ್ಥಿತಿ ಸಂಪೂರ್ಣವಾಗಿ ಸ್ಪಷ್ಟವಾಗುತ್ತದೆ ಎಂದು ಪಿಟಿಐ ಸುದ್ದಿಸಂಸ್ಥೆ ವರದಿ ಮಾಡಿದೆ.
Advertisement