
ಕ್ಲಿಯರ್‌ವಾಟರ್: ಪ್ರಸಿದ್ಧ WWE ಕುಸ್ತಿಪಟು ಹಲ್ಕ್ ಹೊಗನ್ ನಿಧನರಾಗಿದ್ದಾರೆ. ಅವರಿಗೆ 71 ವರ್ಷ ವಯಸ್ಸಾಗಿತ್ತು ಎಂದು ಪ್ಲೋರಿಡಾ ಪೊಲೀಸರು ತಿಳಿಸಿದ್ದಾರೆ.
ಇಂದು ಬೆಳಗ್ಗೆ ಅವರಿಗೆ ಹೃದಯಾಘಾತವಾಗಿದ್ದು, ಆಸ್ಪತ್ರೆಯೊಂದರಲ್ಲಿ ಅವರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ಫೇಸ್ ಬುಕ್ ನಲ್ಲಿ ಹೇಳಿಕೆ ನೀಡಿದ್ದಾರೆ. ಹೊಗನ್, ಅವರ ನಿಜವಾದ ಹೆಸರು ಟೆರ್ರಿ ಬೊಲಿಯಾ. WWE ನ ಸುದೀರ್ಘ ಇತಿಹಾಸದಲ್ಲಿ ಅತ್ಯಂತ ದೊಡ್ಡ ಹೆಸರಿನ ಕುಸ್ತಿಪಟು.
1980 ಮತ್ತು 1990 ರ ದಶಕದ ಆರಂಭದಲ್ಲಿ ವೃತ್ತಿಪರ ಕುಸ್ತಿಯಲ್ಲಿ ಗುರುತಿಸಬಹುದಾದ ಅತ್ಯಂತ ಪ್ರಸಿದ್ಧ ಕುಸ್ತಿಪಟು ಆಗಿದ್ದರು. ಹ್ಯಾಂಡಲ್‌ಬಾರ್ ಮೀಸೆ, ಹಳದಿ ಬಣ್ಣದ ಕನ್ನಡಕ, ತಲೆಗೆ ಸುತ್ತುತ್ತಿದ್ದ ಬಂದಾನಗಳಿಂದ ಮನೆಮಾತಾಗಿದ್ದರು.
ಆರು ಬಾರಿ WWE ಚಾಂಪಿಯನ್ ಆಗಿದ್ದ ಇವರು ಚಲನಚಿತ್ರಗಳು, ಟಿವಿ ಕಾರ್ಯಕ್ರಮಗಳು ಮತ್ತು ಜಾಹೀರಾತುಗಳಲ್ಲಿ ನಟಿಸಿದ್ದರು. ಕುಸ್ತಿ ಅಷ್ಟೊಂದು ಜನಪ್ರಿಯವಾಗದ ಸಮಯದಲ್ಲಿ ವಿಚಿತ್ರ ವರ್ತನೆ, ನಾಟಕೀಯ ರೀತಿಯ ಅಭಿನಯ ಲಕ್ಷಾಂತರ ಹೊಸ ಅಭಿಮಾನಿಗಳನ್ನು, ವಿಶೇಷವಾಗಿ ಮಕ್ಕಳು ಮತ್ತು ಕುಟುಂಬಗಳನ್ನು ಸೆಳೆಯುವಲ್ಲಿ ಹಲ್ಕ್ ಹೊಗನ್ ಯಶಸ್ವಿಯಾಗಿದ್ದರು.
ಇತ್ತೀಚಿನ ವರ್ಷಗಳಲ್ಲಿ, ಹೊಗನ್ ರಾಜಕೀಯಕ್ಕೂ ಕಾಲಿಟ್ಟಿದ್ದರು. ಕಳೆದ ವರ್ಷ 2024 ರ ರಿಪಬ್ಲಿಕನ್ ರಾಷ್ಟ್ರೀಯ ಸಮಾವೇಶದಲ್ಲಿ ಡೊನಾಲ್ಡ್ ಟ್ರಂಪ್ ಪರ ಪ್ರಚಾರ ಕೂಡಾ ಮಾಡಿದ್ದರು.
Advertisement