
ದೋಹಾ: 2 ಬಾರಿ ಒಲಿಂಪಿಕ್ ಪದಕ ವಿಜೇತ ಜಾವೆಲಿನ್ ಥ್ರೋ ಪಟು ನೀರಜ್ ಚೋಪ್ರಾ ಅವರು ಹೊಸ ದಾಖಲೆಯೊಂದನ್ನು ಬರೆದಿದ್ದು, ತಮ್ಮ ವೃತ್ತಿ ಬದುಕಿನಲ್ಲಿ ಮೊದಲ ಬಾರಿಗೆ 90 ಮೀ. ದೂರ ದಾಟಿದ್ದಾರೆ.
ಶುಕ್ರವಾರ ರಾತ್ರಿ ಇಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ನೀರಜ್, ತಮ್ಮ 3ನೇ ಯತ್ನದಲ್ಲಿ 90.23 ಮೀ. ದೂರಕ್ಕೆ ಜಾವೆಲಿನ್ ಎಸೆದು, ರಾಷ್ಟ್ರೀಯ ದಾಖಲೆ ಬರೆದಿದ್ದಾರೆ.
ನೀರಜ್ ಬಹಳ ಸಮಯದಿಂದ 90 ಮೀಟರ್ ಎಸೆಯಲು ಪ್ರಯತ್ನಿಸುತ್ತಿದ್ದರು. ಆದರೆ, ಯಶ ಕಂಡಿರಲಿಲ್ಲ. ದೋಹಾ ಡೈಮಂಡ್ ಲೀಗ್‌ನಲ್ಲಿ ನೀರಜ್ ಅವರ ಈ ಕನಸು ನನಸಾಗಿದೆ. ಇದು ನೀರಜ್ ಅವರ ವೃತ್ತಿಜೀವನದ ಅತ್ಯುತ್ತಮ ಸಾಧನೆಯಾಗಿದೆ.
ದೋಹಾದಲ್ಲಿ ನಡೆದ ಡೈಮಂಡ್ ಲೀಗ್‌ನಲ್ಲಿ ಜರ್ಮನಿಯ ಜೂಲಿಯನ್ ವೆಬರ್ ಪ್ರಥಮ ಸ್ಥಾನ ಪಡೆದರು. ಐದನೇ ಪ್ರಯತ್ನದಲ್ಲಿ ಅವರು 91.06 ಮೀ ಎಸೆತವನ್ನು ಎಸೆದರು. ನೀರಜ್ ಈ ಟೂರ್ನಿಯಲ್ಲಿ ಅಮೋಘ ಆರಂಭವನ್ನು ಪಡೆದರು. ಅಲ್ಲದೆ, ತಮ್ಮ ಮೊದಲ ಪ್ರಯತ್ನದಲ್ಲೇ 88.44 ಮೀಟರ್ ದೂರ ಎಸೆದು ಮಿಂಚಿದರು.
ಒಲಿಂಪಿಕ್ಸ್‌ನಲ್ಲಿ ಡಬಲ್ ಪದಕ ಗೆದ್ದಿರುವ ನೀರಜ್ ಚೋಪ್ರಾ ಅವರು ಜಾವೆಲಿನ್ ಎಸೆತದಲ್ಲಿ 90 ಮೀಟರ್‌ಗೂ ದೂರ ಎಸೆಯುವ ಆಸೆಯನ್ನು ಹೊಂದಿದ್ದರು. ಆದರೆ ಇದರು ಸಾಕಾರವಾಗಿರಲಿಲ್ಲ. ಶುಕ್ರವಾರ ಈ ಆಸೆ ಕೈ ಗೂಡುತ್ತಿದ್ದಂತೆ ಈ ಸಾಧನೆ ಮಾಡಿದ ಏಷ್ಯಾದ ಮೂರನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾದರು.
ಇದಕ್ಕೂ ಮೊದಲು ಪಾಕಿಸ್ತಾನದ ಅರ್ಷದ್ ನದೀಮ್ (92.97) ಮತ್ತು ಚೈನೀಸ್ ತೈಪೆಯ ಚಾವೊ ಸನ್ ಚೆಂಗ್ (91.36) ಈ ಸಾಧೆನ ಮಾಡಿದ್ದರು. ಈಗ ಈ ಸಾಲಿಗೆ ನೀರಜ್ ಚೋಪ್ರಾ ಸೇರಿಕೊಂಡಿದ್ದಾರೆ. ಇನ್ನು ನೀರಜ್ ಚೋಪ್ರಾ 90 ಮೀಟರ್ ಮಾರ್ಕ್ ದಾಟಿದ ವಿಶ್ವದ 25ನೇ ಆಟಗಾರ ಎಂಬ ಹಿರಿಮೆಗೆ ಪಾತ್ರರಾಗಿದ್ದಾರೆ.
ನೀರಜ್ ಚೋಪ್ರಾ ಈ ಲೀಗ್‌ನಲ್ಲಿ 90 ಮೀಟರ್ ಮಾರ್ಕ್ ದಾಟುವಲ್ಲಿ ಸಫಲರಾದರೂ ಸಹ ಬಂಗಾರದ ಸಾಧನೆಯನ್ನು ಮಿಸ್ ಮಾಡಿಕೊಂಡಿದ್ದಾರೆ. ನೀರಜ್ ಚೋಪ್ರಾ ಡೈಮಂಡ್ ಲೀಗ್‌ನಲ್ಲಿ ಬೆಳ್ಳಿ ಸಾಧನೆ ಮಾಡಿದ್ದಾರೆ. ಜರ್ಮನಿಯ ಜೂಲಿಯನ್ ವೆಬರ್ 91.06 ಮೀಟರ್ ದೂರಕ್ಕೆ ಜಾವೆಲಿನ್ ಎಸೆದು ಅಮೋಘ ಸಾಧನೆ ಮಾಡಿದರು. ಈ ಮೂಲಕ ಇವರು ಬಂಗಾರ ಪಡೆದಿದ್ದಾರೆ. ಈ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮತ್ತೊಬ್ಬ ಭಾರತೀಯ ಜಾವೆಲಿನ್ ಥ್ರೋ ಸ್ಪರ್ಧಿ ಕಿಶೋರ್ 78.60 ಮೀಟರ್ ದೂರ ಜಾವೆಲಿನ್ ಎಸೆದರು.
ಈ ಋತುವಿನ ಮೊದಲ ಸ್ಪರ್ಧೆಯಲ್ಲೇ ದಾಖಲೆ ಬರೆದಿರುವ ನೀರಜ್, ಸೆಪ್ಟೆಂಬರ್‌ನಲ್ಲಿ ಟೋಕಿಯೋದಲ್ಲಿ ನಡೆಯಲಿರುವ ಅಥ್ಲೆಟಿಕ್ಸ್ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ವಿಶ್ವ ಚಾಂಪಿಯನ್ ಪಟ್ಟ ಉಳಿಸಿಕೊಳ್ಳಲು ಹೋರಾಡಲಿದ್ದಾರೆ.
ನೀರಜ್ ಚೋಪ್ರಾ ಸಾಧನೆ: ಪ್ರಧಾನಿ ಮೋದಿ ಸೇರಿ ಗಣ್ಯರಿಂದ ಶುಭಾಶಯ
ಡೈಮಂಡ್ ಲೀಗ್ ಕೂಟದಲ್ಲಿ ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿರುವುದಕ್ಕೆ ನೀರಜ್ ಚೋಪ್ರಾ ಅವರಿಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಅಭಿನಂದನೆಗಳನ್ನು ತಿಳಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಮಾಡಿರುವ ಮೋದಿಯವರು, ಡೈಮಂಡ್ ಲೀಗ್ ಕೂಟದಲ್ಲಿ ಜಾವೆಲಿನ್ ಅನ್ನು 90.23 ಮೀಟರ್ ದೂರ ಎಸೆದು, ವೈಯಕ್ತಿಕ ಶ್ರೇಷ್ಠ ಸಾಧನೆ ಮಾಡಿರುವ ನೀರಜ್ ಚೋಪ್ರಾ ಅವರಿಗೆ ಅಭಿನಂದನೆಗಳು. ಇದು ಅವರ ನಿರಂತರ ಸಮರ್ಪಣೆ, ಶಿಸ್ತು ಮತ್ತು ಉತ್ಸಾಹದ ಫಲಿತಾಂಶವಾಗಿದೆ. ಅವರ ಸಾಧನೆಗೆ ದೇಶ ಹೆಮ್ಮೆಪಡುತ್ತದೆ ಎಂದು ಹೇಳಿದ್ದಾರೆ.
Advertisement