

ಬ್ಯಾಂಕಾಕ್: ಥಾಯ್ಲೆಂಡ್‌ನಲ್ಲಿ ಮಂಗಳವಾರ ನಡೆದ ಸ್ಥಳೀಯ ಫುಟ್ಬಾಲ್ ಪಂದ್ಯದ ವೇಳೆ ಸಿಡಿಲು ಬಡಿದು 24 ವರ್ಷದ ಆಟಗಾರ ಸೋಫ್ವಾನ್ ಅವಾಯೆ ಮೃತಪಟ್ಟಿರುವ ದಾರುಣ ಘಟನೆ ನಡೆದಿದೆ.
ದಕ್ಷಿಣ ಥಾಯ್ಲೆಂಡ್‌ನಲ್ಲಿ ನಡೆದ ಈ ಪಂದ್ಯದಲ್ಲಿ ಸಿಡಿಲು ಬಡಿದ ಪರಿಣಾಮ ಇತರ 12 ಆಟಗಾರರೂ ಗಾಯಗೊಂಡಿದ್ದಾರೆ. ಘಟನೆಯಿಂದ ಮೈದಾನದಲ್ಲಿದ್ದವರು ಬೆಚ್ಚಿಬಿದ್ದಿದ್ದಾರೆ. ಮಳೆಯ ನಡುವೆಯೇ ಆಟಗಾರರು ಫುಟ್ಬಾಲ್ ಆಡುತ್ತಿದ್ದ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಇದೇ ವೇಳೆ ಏಕಾಏಕಿ ಮೈದಾನಕ್ಕೆ ಸಿಡಿಲು ಬಡಿದಿದ್ದು, ಭಾರೀ ಸ್ಫೋಟದಂತಹ ಶಬ್ದ ಕೇಳಿಸಿದ್ದು, ಸಿಡಿಲು ಬಡಿದ ತಕ್ಷಣ ಅವಾಯೆ ಮೈದಾನದಲ್ಲಿ ಕುಸಿದು ಬಿದ್ದಿದ್ದಾರೆ. ಅವರು ಯಾವುದೇ ಚಲನೆಯಿಲ್ಲದೆ ಬಿದ್ದಿರುವುದನ್ನು ಕಂಡ ಸಹ ಆಟಗಾರರು ತಕ್ಷಣ ಅವರತ್ತ ಧಾವಿಸಿದ್ದಾರೆ. ಈ ವೇಳೆ ಆಟಗಾರ ದುರಂತ ಸಾವಿಗೀಡಾಗಿರುವುದು ತಿಳಿದುಬಂದಿದೆ.
ಮೂಲಗಳ ಪ್ರಕಾರ, ವಿಂಗರ್ ಆಗಿ ಆಡುತ್ತಿದ್ದ ಅವಾಯೆ ಅವರಿಗೆ ಗಂಭೀರ ಗಾಯಗಳಾಗಿದ್ದವು. ತುರ್ತು ವೈದ್ಯಕೀಯ ತಂಡಗಳು ಅವರನ್ನು ಉಳಿಸಲು ಸಾಕಷ್ಟು ಪ್ರಯತ್ನಿಸಿದರೂ, ತೀವ್ರ ಗಾಯಗಳಿಂದಾಗಿ ಅವರು ಮೃತಪಟ್ಟಿದ್ದಾರೆ.
ಈ ಬಗ್ಗೆ ಸ್ಥಳೀಯ ಸುದ್ದಿ ಮಾಧ್ಯಮ ದಿ ಇಂಡಿಪೆಂಡೆಂಟ್ ವರದಿ ಮಾಡಿದ್ದು, ಈ ಘಟನೆ ಗೋಲೊಕ್ ಎಫ್‌ಎ ಕಪ್ ಟೂರ್ನಿಯಲ್ಲಿ ನಡೆದಿದೆ. ಇದು ಹವ್ಯಾಸಿ ಹಾಗೂ ಥಾಯ್-ಮಲೇಷ್ಯನ್ ತಂಡಗಳು ಭಾಗವಹಿಸುವ ಸ್ಥಳೀಯ ಫುಟ್ಬಾಲ್ ಟೂರ್ನಿಯಾಗಿದೆ.
ಅವಾಯೆ ಪ್ರತಿನಿಧಿಸುತ್ತಿದ್ದ ಸ್ಯಾಮ್‌ಕಾಲ್ಟ್ಸ್ ತಂಡ ಮತ್ತು ಅಬು ಎಕ್ಸ್ ನಾಂಗ್ ಸಿರಿನ್ ನಡುವೆ ಪಂದ್ಯ ನಡೆಯುತ್ತಿತ್ತು. ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಡುತ್ತಿದ್ದಂತೆ, ವಿವಿಧೆಡೆಯಿಂದ ಸಂತಾಪಗಳು ವ್ಯಕ್ತವಾಗಿವೆ. ಇದೇ ವೇಳೆ ಇಂತಹ ಹವಾಮಾನ ಪರಿಸ್ಥಿತಿಯಲ್ಲೂ ಪಂದ್ಯ ನಡೆಸಿದ್ದಕ್ಕೆ ಕೆಲವರು ಪ್ರಶ್ನೆಗಳನ್ನು ಎತ್ತಿದ್ದಾರೆ.
“ಆಟಗಾರನನ್ನು ಉಳಿಸಲು ತುರ್ತು ವೈದ್ಯಕೀಯ ತಂಡವು ಎಲ್ಲ ರೀತಿಯ ಪ್ರಯತ್ನಗಳನ್ನು ಮಾಡಿತು. ಆದರೆ ಘಟನೆಯಲ್ಲಿ ಉಂಟಾದ ಗಂಭೀರ ಗಾಯಗಳಿಂದಾಗಿ ಅವರು ಮೃತಪಟ್ಟರು,” ಎಂದು ಪೊಲೀಸ್ ಮುಖ್ಯಸ್ಥ ಥುನ್ ಸಿರಿಖುಂಟ್ ಹೇಳಿದ್ದಾರೆ. ಮಲೇಷ್ಯಾದ ಸುದ್ದಿ ಸಂಸ್ಥೆ ಬರ್ನಾಮಾ ಅವರನ್ನು ಉಲ್ಲೇಖಿಸಿ ಈ ಮಾಹಿತಿ ನೀಡಿದೆ.
ಅವಾಯೆ ಅವರ ದುರಂತ ಸಾವಿಗೆ ಥಾಯ್ಲೆಂಡ್ ಫುಟ್ಬಾಲ್ ಅಸೋಸಿಯೇಷನ್ ಕೂಡ ಮಂಗಳವಾರ ಸಂತಾಪ ಸೂಚಿಸಿದೆ.
“ಈ ದುಃಖದ ಸಂದರ್ಭದಲ್ಲಿ ಅವರ ಕುಟುಂಬ, ಘಟನೆಗೆ ಸಂಬಂಧಿಸಿದವರು ಹಾಗೂ ಫುಟ್ಬಾಲ್ ಕ್ಲಬ್‌ನೊಂದಿಗೆ ನಾವು ದುಃಖದಲ್ಲಿ ಭಾಗಿಯಾಗುತ್ತೇವೆ. ಅವರಿಗೆ ನಮ್ಮ ಹೃತ್ಪೂರ್ವಕ ಸಂತಾಪಗಳನ್ನು ಸಲ್ಲಿಸುತ್ತೇವೆ,” ಎಂದು ಫುಟ್ಬಾಲ್ ಅಸೋಸಿಯೇಷನ್ ಹೇಳಿದೆ.
ಇದೇ ಮೊದಲೇನಲ್ಲ
ಇನ್ನು ಥಾಯ್ಲೆಂಡ್‌ನಲ್ಲಿ ಸಿಡಿಲು ಬಡಿದು ಸಂಭವಿಸುವ ಸಾವುಗಳು ಸಾಕಷ್ಟು ಸಾಮಾನ್ಯವಾಗಿವೆ ಎಂದು ಸುದ್ದಿ ಸಂಸ್ಥೆ ಗಮನ ಸೆಳೆದಿದೆ. ರೋಗ ನಿಯಂತ್ರಣ ಇಲಾಖೆಯ ಅಂಕಿಅಂಶಗಳನ್ನು ಉಲ್ಲೇಖಿಸಿರುವ ವರದಿ, 2020ರಿಂದ 2024ರ ಅವಧಿಯಲ್ಲಿ ದೇಶಾದ್ಯಂತ ಕನಿಷ್ಠ 283 ಮಂದಿ ಸಿಡಿಲಿಗೆ ಬಲಿಯಾಗಿದ್ದಾರೆ ಎಂದು ತಿಳಿಸಿದೆ. ಅವರಲ್ಲಿ ಹಲವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.