Commonwealth Games: ಭಾರತಕ್ಕೆ ಡಬಲ್ ಧಮಾಕಾ; ಪದಕ ಗೆದ್ದ ಕನ್ನಡತಿ ಶಿಲ್ಪಾ; Video

2026ರ ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ ಶಾಟ್‌ಪುಟ್ F-57 ವಿಭಾಗದಲ್ಲಿ ಭಾರತದ ಪ್ಯಾರಾ ಅಥ್ಲೀಟ್, ಕನ್ನಡತಿ ಶಿಲ್ಪಾ ಕೆ. ಶೈಲಾ ಅವರು ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:
Kannadathi Shilpa K S won medal at Commonwealth Games
ಕಾಮನ್‌ವೆಲ್ತ್ ಗೇಮ್ಸ್‌ನಲ್ಲಿ ಪದಕ ಗೆದ್ದ ಕನ್ನಡತಿ ಶಿಲ್ಪಾOnline Desk
Updated on

ಗ್ಲಾಸ್ಗೋ (ಸ್ಕಾಟ್‌ಲ್ಯಾಂಡ್‌): 2026ರ ಕಾಮನ್‌ವೆಲ್ತ್ ಗೇಮ್ಸ್‌ನ ಮಹಿಳೆಯರ ಶಾಟ್‌ಪುಟ್ F-57 ವಿಭಾಗದಲ್ಲಿ ಭಾರತದ ಪ್ಯಾರಾ ಅಥ್ಲೀಟ್, ಕನ್ನಡತಿ ಶಿಲ್ಪಾ ಕೆ. ಶೈಲಾ ಅವರು ಕಂಚಿನ ಪದಕ ಗೆದ್ದು ಐತಿಹಾಸಿಕ ಸಾಧನೆ ಮಾಡಿದ್ದಾರೆ. ಇನ್ನು, ಕಾಮನ್‌ವೆಲ್ತ್ ಗೇಮ್ಸ್‌ಗೆ ಕರ್ನಾಟಕದಿಂದ ಆಯ್ಕೆಯಾಗಿದ್ದ ಏಕೈಕ ಪ್ಯಾರಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಶಿಲ್ಪಾ ಅವರು ಪದಕ ಗೆಲುವು ಮೂಲಕ ದಾಖಲೆ ಮಾಡಿದ್ದಾರೆ. ಆ ಕುರಿತ ವರದಿ ಇಲ್ಲಿದೆ:

ಮುಂದುವರೆದು, ಶಿಲ್ಪಾ ಅವರು 7.26 ಮೀಟರ್ ದೂರಕ್ಕೆ ಗುಂಡು ಎಸೆಯುವ ಮೂಲಕ ತಮ್ಮ ವೈಯಕ್ತಿಕ ಅತ್ಯುತ್ತಮ ಪ್ರದರ್ಶನದೊಂದಿಗೆ ಆರಂಭದಲ್ಲಿ ಶಿಲ್ಪಾ ಅವರು 4ನೇ ಸ್ಥಾನ ಪಡೆದಿದ್ದರು. ಆದರೆ, ಮೂರನೇ ಸ್ಥಾನದಲ್ಲಿದ್ದ ನೈಜೀರಿಯಾದ ಕ್ರೀಡಾಪಟು ಯುಚಾರಿಯಾ ಇಯಾಜಿ ಅವರ ಎಸೆತವು ಫೌಲ್ ಎಂದು ಭಾರತ ತಂಡ ಪ್ರತಿಭಟಿಸಿದ ಹಿನ್ನೆಲೆಯಲ್ಲಿ, ನೈಜೀರಿಯಾ ಅಥ್ಲೀಟ್ ಅನರ್ಹಗೊಂಡರು. ತದನಂತರ ಶಿಲ್ಪಾ ಅವರು ಮೂರನೇ ಸ್ಥಾನದೊಂದಿಗೆ ಕಂಚಿನ ಪದಕಕ್ಕೆ ಮುತ್ತಿಟ್ಟರು.

ಭಾರತಕ್ಕೆ ಡಬಲ್ ಧಮಾಕಾ!

ಇದೇ ಸ್ಪರ್ಧೆಯಲ್ಲಿ ಭಾರತದ ಮತ್ತೊಬ್ಬ ಪ್ಯಾರಾ ಅಥ್ಲೀಟ್ ಶರ್ಮಿಳಾ ಧಂಕರ್ ಅವರು 9.81 ಮೀಟರ್ ಎಸೆದು ಚಿನ್ನದ ಪದಕ ಮುಡಿಗೇರಿಸಿಕೊಂಡಿದ್ದಾರೆ. ಆ ಮೂಲಕ ಭಾರತ ಈ ವಿಭಾಗದಲ್ಲಿ ಒಂದೇ ಬಾರಿಗೆ ಎರಡು ಪದಕಗಳನ್ನು ತನ್ನದಾಗಿಸಿಕೊಂಡಿದೆ.

ಶಿಲ್ಪಾ ಯಾರು?

ಮೈಸೂರು ಜಿಲ್ಲೆಯ ಕೆ.ಆರ್. ನಗರ ತಾಲ್ಲೂಕಿನ ಕಂಚುಗಾರಕೊಪ್ಪಲು ಗ್ರಾಮದ ಬಡ ರೈತ ಕುಟುಂಬದ ಶೈಲಾ ಮತ್ತು ಶಾಂತಾ ದಂಪತಿಯ ಪುತ್ರಿಯಾಗಿರುವ ಕೆ. ಎಸ್. ಶಿಲ್ಪಾ 4ನೇ ವಯಸ್ಸಿನಲ್ಲಿ ಸಂಭವಿಸಿದ ಭೀಕರ ಲಾರಿ ಅಪಘಾತದಲ್ಲಿ ತಮ್ಮ ಎಡಗಾಲನ್ನು ಕಳೆದುಕೊಂಡಿದ್ದರು.

ಕಷ್ಟಗಳ ನಡುವೆಯೇ ಸ್ನಾತಕೋತ್ತರ ಪದವಿ ಹಾಗೂ ಬಿ.ಎಡ್ ಮುಗಿಸಿ ಶಾಲಾ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಇವರು, ತಮ್ಮ 29 ನೇ ವಯಸ್ಸಿನಲ್ಲಿ ಸ್ನೇಹಿತೆ ಗೀತಾ ಅವರು ಕುಳಿತುಕೊಳ್ಳುವ ವಾಲಿಬಾಲ್ ಪರಿಚಯಿಸಿದ ಕ್ರೀಡೆಯತ್ತ ತಮ್ಮ ಗಮನ ನೆಟ್ಟರು. ಅದರಂತೆ, ಪ್ಯಾರಾ ಕ್ರೀಡೆಗಳ ಮೇಲಿನ ಆಸಕ್ತಿಯಿಂದ ತಮ್ಮ ಶಿಕ್ಷಕ ವೃತ್ತಿಗೆ ಗುಡ್ ಬೈ ಹೇಳಿದರು. ಈ ಮೂಲಕ ಪೂರ್ಣಾವಧಿ ಕ್ರೀಡಾಪಟುವಾಗಿ ಹೊರಹೊಮ್ಮಿದರು. ಅದರಂತೆ, ತಮ್ಮ ನಾಯಕತ್ವದಲ್ಲಿ ಕರ್ನಾಟಕದ ಮಹಿಳಾ ಸಿಟ್ಟಿಂಗ್ ವಾಲಿಬಾಲ್ ತಂಡಕ್ಕೆ 4 ಬಾರಿ ರಾಷ್ಟ್ರೀಯ ಪ್ರಶಸ್ತಿ ತಂದು ಕೊಟ್ಟರು.

ಇದೆ ವೇಳೆ 2023 ರಲ್ಲಿ, ಕರ್ನಾಟಕ ದೈಹಿಕ ವಿಕಲಚೇತನರ ಕ್ರೀಡಾ ಸಂಘದ ಜಂಟಿ ಕಾರ್ಯದರ್ಶಿ ರಾಘವೇಂದ್ರ ಎಸ್‌ಜಿ, ಶಿಲ್ಪಾ ಎಸೆತ ಸ್ಪರ್ಧೆಗಳಿಗೆ ಸೂಕ್ತಳಾಗಿದ್ದಾಳೆಂದು ಗಮನಿಸಿ, ಶಾಟ್‌ಪುಟ್ ಮತ್ತು ಡಿಸ್ಕಸ್ ಎಸೆತವನ್ನು ತೆಗೆದುಕೊಳ್ಳುವಂತೆ ಪ್ರೋತ್ಸಾಹಿಸಿದರು. ಅವರ ಪ್ರೋತ್ಸಾಹದಂತೆ ಶಾಟ್‌ಪುಟ್ ತಗದೆಕೊಂಡರು ಕೂಡ ಎರಡೂ ಸ್ಪರ್ಧೆಗಳಲ್ಲಿ ಉತ್ತಮ ಪ್ರದರ್ಶನ ನೀಡುತ್ತಿದ್ದರು.

ಅದರಂತೆ, 2024 ರಲ್ಲಿ ಥೈಲ್ಯಾಂಡ್‌ನಲ್ಲಿ ನಡೆದ ಅಂತರರಾಷ್ಟ್ರೀಯ ಪಂದ್ಯಾವಳಿಯಲ್ಲಿ ಬೆಳ್ಳಿ ಮತ್ತು ಕಂಚಿನ ಪದಕಗಳನ್ನು ಗೆದ್ದ ಇವರು, 2025 ರಲ್ಲಿ, ಅವರು ನವದೆಹಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದರು. ಜೊತೆಗೆ ಇದೆ ವರ್ಷ ದುಬೈನಲ್ಲಿ ನಡೆದ ಫಝಾ ಅಂತರರಾಷ್ಟ್ರೀಯ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನಲ್ಲಿ ಕಂಚಿನ ಪದಕ ಗೆದ್ದರು, ಇದು 2026 ರ ಕಾಮನ್‌ವೆಲ್ತ್ ಕ್ರೀಡಾಕೂಟಕ್ಕೆ ಅರ್ಹತೆ ಪಡೆಯಲು ಸಹಾಯ ಮಾಡಿತು. ಒಟ್ಟಾರೆಯಾಗಿ, ಯಾವುದೇ ದೊಡ್ಡ ಕಾರ್ಪೊರೇಟ್ ಪ್ರಾಯೋಜಕತ್ವ ಇಲ್ಲದಿದ್ದರೂ ಕೃತಕ ಕಾಲನ್ನು ಬಳಸಿಕೊಂಡೇ ತರಬೇತಿ ಪಡೆಯುತ್ತಿದ್ದ ಇವರು, ಬೆಂಗಳೂರಿನ ಭಾರತೀಯ ಕ್ರೀಡಾ ಪ್ರಾಧಿಕಾರದಲ್ಲಿ ಈಶನ್ ಎಸ್.ಡಿ. ಮತ್ತು ರಾಘವೇಂದ್ರ ಅವರ ಮಾರ್ಗದರ್ಶನದಲ್ಲಿ ಕಠಿಣ ಅಭ್ಯಾಸ ನಡೆಸಿದ್ದರು.

Kannadathi Shilpa K S won medal at Commonwealth Games
ಇತಿಹಾಸ ಸೃಷ್ಟಿ: ವಿಶ್ವ ಜೂನಿಯರ್ ಸ್ಕ್ವಾಷ್ ಚಾಂಪಿಯನ್ ಗರಿ ಮುಡಿಗೇರಿಸಿಕೊಂಡ ಅನಹತ್ ಸಿಂಗ್; PM ಮೋದಿ ಅಭಿನಂದನೆ!

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com