

ಮ್ಯಾಡ್ರಿಡ್: ಫುಟ್ಬಾಲ್ ಪಂದ್ಯವೊಂದರ ವೇಳೆ ಇಬ್ಬರು ಆಟಗಾರರು ಪರಸ್ಪರ ಢಿಕ್ಕಿಯಾದ ಪರಿಣಾಮ ಓರ್ವ ಆಟಗಾರ ಮೈದಾನದಲ್ಲೇ ಸಾವನ್ನಪ್ಪಿರುವ ಘಟನೆ ಸ್ಪೇನ್ ನಲ್ಲಿ ನಡೆದಿದೆ.
ಸ್ಪೇನ್‌ನ ಎರಡನೇ ಡಿವಿಷನ್ ಫುಟ್ಬಾಲ್ ಪಂದ್ಯದಲ್ಲಿ ಗೋಲ್‌ಕೀಪರ್ ಜೊತೆಗಿನ ಭೀಕರ ಡಿಕ್ಕಿಯಿಂದ ಗಂಭೀರವಾಗಿ ಗಾಯಗೊಂಡಿದ್ದ ಟೆನೆರಿಫ್ ತಂಡದ ಸ್ಟ್ರೈಕರ್ ಜೀಸಸ್ ಡಿ ಮಿಗುಯೆಲ್ (30) ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಮಂಗಳವಾರ ಬೆಳಗ್ಗೆ ಆಟಗಾರ ಮೃತಪಟ್ಟಿರುವುದನ್ನು ಅವರ ಕ್ಲಬ್ ಅಧಿಕೃತ ಹೇಳಿಕೆಯಲ್ಲಿ ದೃಢಪಡಿಸಿದೆ.
'2026ರ ನವೆಂಬರ್ 3ರ ಮಂಗಳವಾರ ಬೆಳಗ್ಗೆ 8 ಗಂಟೆಗೆ ಜೀಸಸ್ ಡಿ ಮಿಗುಯೆಲ್ ಅಲಮೇಡಾ ಅವರ ನಿಧನದ ದುಃಖದ ಸುದ್ದಿಯನ್ನು ತಿಳಿಸುತ್ತಿದ್ದೇವೆ. ಈ ನೋವನ್ನು ಕಡಿಮೆ ಮಾಡುವ ಯಾವುದೇ ಮಾತುಗಳಿಲ್ಲ. ಈ ದೊಡ್ಡ ದುಃಖವನ್ನು ತಗ್ಗಿಸಲು ಯಾವುದರಿಂದಲೂ ಸಾಧ್ಯವಿಲ್ಲ. ಅವರ ಕುಟುಂಬ, ಆಪ್ತರು ಹಾಗೂ ಟೆನೆರಿಫ್ ಅಭಿಮಾನಿಗಳ ನೋವಿನಲ್ಲಿ ನಾವೂ ಭಾಗಿಯಾಗಿದ್ದೇವೆ' ಎಂದು ಕ್ಲಬ್ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ.
ಪಂದ್ಯದ ವೇಳೆ 30 ವರ್ಷದ ಡಿ ಮಿಗುಯೆಲ್, ಈಕ್ವಟೋರಿಯಲ್ ಗಿನಿಯಾದ ಅಂತಾರಾಷ್ಟ್ರೀಯ ಆಟಗಾರ ಹಾಗೂ ಎಫ್‌ಸಿ ಅಂಡೋರಾ ತಂಡದ ಗೋಲ್‌ಕೀಪರ್ ಜೀಸಸ್ ಒವೊನೊ ಅವರೊಂದಿಗೆ ಮುಖಾಮುಖಿ ಡಿಕ್ಕಿಗೆ ಒಳಗಾಗಿದ್ದರು. ಎದುರಾಳಿ ತಂಡದ ದಾಳಿಯನ್ನು ತಡೆಯಲು ಗೋಲ್‌ಕೀಪರ್ ತನ್ನ ಗೋಲುಪೆಟ್ಟಿಗೆಯಿಂದ ಹೊರಗೆ ಓಡಿ ಬಂದಿದ್ದಾಗ ಮೈದಾನದ ಮಧ್ಯಭಾಗದಲ್ಲಿ ಈ ಘಟನೆ ಸಂಭವಿಸಿತ್ತು.
ಪಂದ್ಯದ ಅಂತಿಮ ಹಂತದಲ್ಲಿ ಈ ಭೀಕರ ಅಪಘಾತ ಸಂಭವಿಸಿತ್ತು. ಘಟನೆಯ ಬಳಿಕ ಪಂದ್ಯವನ್ನು ಅರ್ಧದಲ್ಲೇ ಸ್ಥಗಿತಗೊಳಿಸಲಾಗಿತ್ತು.
ಸ್ಪೇನ್‌ನ ಮಾಧ್ಯಮಗಳ ವರದಿಗಳ ಪ್ರಕಾರ, ಗಾಯಗೊಂಡಿದ್ದ ಡಿ ಮಿಗುಯೆಲ್ ಅವರನ್ನು ಆಂಬ್ಯುಲೆನ್ಸ್‌ನಲ್ಲಿ ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗಮಧ್ಯೆ ಹೃದಯ ಸ್ತಂಭನ ಸಂಭವಿಸಿತ್ತು. ತಕ್ಷಣವೇ ಅವರಿಗೆ ಪುನಶ್ಚೇತನ ಚಿಕಿತ್ಸೆ (ಸಿಪಿಆರ್) ನೀಡಿ ಜೀವ ಉಳಿಸುವ ಪ್ರಯತ್ನ ಮಾಡಲಾಗಿತ್ತು. ಆದರೆ, ಬಳಿಕ ಅವರು ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.