Lionel Messi: 21 ವರ್ಷಗಳ ಬಳಿಕ ತವರಿನಲ್ಲೇ ಫುಟ್ಬಾಲ್​ ದಿಗ್ಗಜ ಲಿಯೋನೆಲ್ ಮೆಸ್ಸಿ ಭಾವುಕ ವಿದಾಯ; ಹೇಗಿತ್ತು ನೋಡಿ ಅಂತಿಮ ಪಂದ್ಯ; Video

ಎರಡು ದಶಕಗಳಿಗೂ ಹೆಚ್ಚು ಕಾಲ ಅರ್ಜೆಂಟೀನಾದ ಫುಟ್‌ಬಾಲ್‌ ಲೋಕದಲ್ಲಿ ಅಜೇಯರಾಗಿ ಮೆರೆದ ಈ ಮಹಾನ್ ಆಟಗಾರನಿಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಕಿವಿಗಡಚಿಕ್ಕುವ ರೀತಿಯಲ್ಲಿ ಅಂತಿಮ ವಿದಾಯ ಗೌರವ ಸಲ್ಲಿಸಿದರು.
Argentina's Lionel Messi
ಲಿಯೋನೆಲ್ ಮೆಸ್ಸಿ
Updated on: 

ಬ್ಯೂನಸ್ ಐರಿಸ್: ಅರ್ಜೆಂಟೀನಾ ತಂಡದೊಂದಿಗಿನ ತಮ್ಮ ಅಧಿಕೃತ ವಿದಾಯವನ್ನು ಲಿಯೋನೆಲ್ ಮೆಸ್ಸಿ ಸ್ಮರಣೀಯ ಪ್ರದರ್ಶನವನ್ನಾಗಿಸಿದ್ದಾರೆ. ನಿನ್ನೆ ಮಂಗಳವಾರ ಬ್ಯೂನಸ್ ಐರಿಸ್‌ನ ಸ್ಮಾರಕ ಕ್ರೀಡಾಂಗಣದಲ್ಲಿ ನಡೆದ ಅಂತಾರಾಷ್ಟ್ರೀಯ ಸ್ನೇಹಪೂರ್ವಕ ಪಂದ್ಯದಲ್ಲಿ ಬೆನಿನ್ ವಿರುದ್ಧ ಅರ್ಜೆಂಟೀನಾ 3-0 ಗೋಲುಗಳಿಂದ ಗೆಲುವು ಸಾಧಿಸಿತು.

ಈ ಪಂದ್ಯದಲ್ಲಿ ಮೆಸ್ಸಿ ಒಂದು ಪೆನಾಲ್ಟಿ ಗೋಲು ಗಳಿಸುವುದರ ಜೊತೆಗೆ ಎರಡು ಗೋಲು ಗಳಿಸಲು ಸಹಾಯ ಮಾಡಿದರು. ಎರಡು ದಶಕಗಳಿಗೂ ಹೆಚ್ಚು ಕಾಲ ಅರ್ಜೆಂಟೀನಾದ ಫುಟ್‌ಬಾಲ್‌ ಲೋಕದಲ್ಲಿ ಅಜೇಯರಾಗಿ ಮೆರೆದ ಈ ಮಹಾನ್ ಆಟಗಾರನಿಗೆ ಕ್ರೀಡಾಂಗಣದಲ್ಲಿ ನೆರೆದಿದ್ದ ಅಭಿಮಾನಿಗಳು ಕಿವಿಗಡಚಿಕ್ಕುವ ರೀತಿಯಲ್ಲಿ ಅಂತಿಮ ವಿದಾಯ ಗೌರವ ಸಲ್ಲಿಸಿದರು.

ಕ್ರೀಡಾಂಗಣದಲ್ಲಿ ನೆಲೆಸಿದ್ದ 85,000 ಅಭಿಮಾನಿಗಳ ಸಮ್ಮುಖದಲ್ಲಿ 21 ವರ್ಷಗಳ ಅಂತಾರಾಷ್ಟ್ರೀಯ ವೃತ್ತಿಜೀವನಕ್ಕೆ ಲಿಯೋನೆಲ್ ಮೆಸ್ಸಿ ತೆರೆ ಎಳೆದರು. ಈ ಅವಧಿಯಲ್ಲಿ ಅವರು 126 ಗೋಲುಗಳನ್ನು ಗಳಿಸಿದ್ದು, 2022ರ ವಿಶ್ವಕಪ್ ಗೆಲುವು ಹಾಗೂ ಎರಡು ಕೋಪಾ ಅಮೆರಿಕಾ ಪ್ರಶಸ್ತಿಗಳನ್ನು ಅರ್ಜೆಂಟೀನಾ ಪರವಾಗಿ ಗೆದ್ದಿದ್ದಾರೆ.

Argentina's Lionel Messi
ಅಂತಾರಾಷ್ಟ್ರೀಯ ಫುಟ್‌ಬಾಲ್‌ಗೆ ನಿವೃತ್ತಿ ಘೋಷಿಸಿದ ಲಿಯೋನೆಲ್ ಮೆಸ್ಸಿ

ಗೆಲುವನ್ನು ಮುನ್ನಡೆಸಿದ ಮೆಸ್ಸಿ

ಮೆಸ್ಸಿ ತೆಗೆದುಕೊಂಡ ಕಾರ್ನರ್ ಕಿಕ್‌ಗೆ ಅರ್ಜೆಂಟೀನಾ ಡಿಫೆಂಡರ್ ನಿಕೊಲಾಸ್ ಒಟಮೆಂಡಿ ಚೆಂಡನ್ನು ಗೋಲಾಗಿ ಪರಿವರ್ತಿಸುವ ಮೂಲಕ 48ನೇ ನಿಮಿಷದಲ್ಲಿ ತಂಡಕ್ಕೆ ಮುನ್ನಡೆ ತಂದುಕೊಟ್ಟರು. ಬಳಿಕ 61ನೇ ನಿಮಿಷದಲ್ಲಿ ಮೆಸ್ಸಿ ಯುವ ಪ್ರತಿಭೆ ನಿಕೊಲಾಸ್ ಪಾಝ್‌ಗೆ ಗೋಲು ಗಳಿಸಲು ನೆರವಾದರು. ಪಾಝ್ ಎಡಗಾಲಿನಿಂದ ಅದ್ಭುತವಾಗಿ ಚೆಂಡನ್ನು ಗೋಲು ಪೆಟ್ಟಿಗೆಗೆ ಸೇರಿಸುವ ಮೂಲಕ ಮೆಸ್ಸಿಗೆ ಗೌರವ ಸಲ್ಲಿಸಿದರು.

ಇದಾದ ಹತ್ತು ನಿಮಿಷಗಳ ಬಳಿಕ ಮೆಸ್ಸಿ ಎಡಗಾಲಿನಿಂದ ಪೆನಾಲ್ಟಿ ಕಿಕ್ ಹೊಡೆದು ಚೆಂಡನ್ನು ಗೋಲುಪೆಟ್ಟಿಗೆಯ ಮೇಲ್ಭಾಗದ ಮೂಲೆಗೆ ಸೇರಿಸಿದರು. ಇದರೊಂದಿಗೆ ಅರ್ಜೆಂಟೀನಾ ಪರ ಸಾರ್ವಕಾಲಿಕ ಅತಿ ಹೆಚ್ಚು ಗೋಲು ಗಳಿಸಿದ ಆಟಗಾರನಾಗಿ ತಮ್ಮ ದಾಖಲೆ ಮೊತ್ತವನ್ನು ಮತ್ತಷ್ಟು ಹೆಚ್ಚಿಸಿದರು.

“ಒಲೆ, ಒಲೆ, ಮೆಸ್ಸಿ” ಎಂದು ಅಭಿಮಾನಿಗಳು ತಮ್ಮ ನೆಚ್ಚಿನ ಆಟಗಾರನ ಗೌರವಾರ್ಥ ಘೋಷಣೆ ಕೂಗಿದರು.

Argentina's Lionel Messi
'ಅರ್ಜೆಂಟೀನಾಕ್ಕೆ ಲಿಯೋನೆಲ್ ಮೆಸ್ಸಿ ಹೇಗೋ, ಭಾರತಕ್ಕೆ ವಿರಾಟ್ ಕೊಹ್ಲಿ-ರೋಹಿತ್ ಶರ್ಮಾ ಹಾಗೆ': ಮೊಹಮ್ಮದ್ ಕೈಫ್

ಉತ್ತರಾಧಿಕಾರಿಗೆ ದಾರಿ ಮಾಡಿಕೊಟ್ಟ ಮೆಸ್ಸಿ, ಸ್ಮರಣೀಯ ವಿದಾಯ

39ರ ವಯಸ್ಸಿನಲ್ಲೂ ಅತ್ಯುತ್ತಮ ಮಟ್ಟದಲ್ಲಿ ಆಡುತ್ತಿರುವ ಮೆಸ್ಸಿ, ಆಗಸ್ಟ್ 31ರಂದು ಅರ್ಜೆಂಟೀನಾ ತಂಡದೊಂದಿಗಿನ ತಮ್ಮ ಪಯಣ ಅಂತ್ಯಗೊಳ್ಳಲಿದೆ ಎಂದು ಘೋಷಿಸಿದ್ದರು.

ಅರ್ಜೆಂಟೀನಾ ಪರ ತಮ್ಮ 208ನೇ ಹಾಗೂ ಅಂತಿಮ ಪಂದ್ಯವನ್ನು ಮೆಸ್ಸಿ ಅದ್ಧೂರಿ ಪಟಾಕಿ ಪ್ರದರ್ಶನದ ನಡುವೆ ಆಡಿದರು. ಈ ಪಂದ್ಯಕ್ಕಾಗಿ ವಿಶೇಷ ವಿನ್ಯಾಸದ ಅರ್ಜೆಂಟೀನಾ ಜೆರ್ಸಿಯನ್ನು ಧರಿಸಿದ್ದರು. ಸಾಮಾನ್ಯ ಜೆರ್ಸಿಗಿಂತ ಅಗಲವಾದ ಲಂಬ ಪಟ್ಟೆಗಳು, ದೊಡ್ಡ ಸೂರ್ಯ ಚಿಹ್ನೆ ಹಾಗೂ ಹಿಂಭಾಗದಲ್ಲಿ ಚಿನ್ನದ ಬಣ್ಣದ 10ನೇ ಸಂಖ್ಯೆಯನ್ನು ಹೊಂದಿದ್ದ ಜೆರ್ಸಿ ಗಮನ ಸೆಳೆಯಿತು.

ಹಿಂಭಾಗದ ವಿನ್ಯಾಸದಲ್ಲಿ ಮೇಕೆಯ ಕೊಂಬುಗಳ ಚಿತ್ರವೂ ಇತ್ತು. ಇದು ‘GOAT’ ಎಂಬ ಪದಕ್ಕೆ ಸೂಚನೆಯಾಗಿದ್ದು, ಮೇಕೆ ಹಾಗೂ ‘ಸಾರ್ವಕಾಲಿಕ ಶ್ರೇಷ್ಠ ಆಟಗಾರ’ ಎಂಬ ಮೆಸ್ಸಿಯ ಸ್ಥಾನಮಾನ ಎರಡನ್ನೂ ಪ್ರತಿನಿಧಿಸುತ್ತದೆ.

ಪಂದ್ಯ ಆರಂಭವಾದ 10 ನಿಮಿಷಗಳ ಬಳಿಕ ರೆಫರಿ ಆಟವನ್ನು ಕೆಲಕಾಲ ನಿಲ್ಲಿಸಿ ಅರ್ಜೆಂಟೀನಾ ನಾಯಕನಿಗೆ ಗೌರವ ಸಲ್ಲಿಸಿದರು. ಎದುರಾಳಿ ತಂಡದ ಆಟಗಾರರು ಹಾಗೂ ಮೆಸ್ಸಿಯ ಸಹ ಆಟಗಾರರು ಅವರ ಬಳಿಗೆ ತೆರಳಿ ಅಭಿನಂದಿಸಿದರು. ಅಭಿಮಾನಿಗಳು ಎದ್ದು ನಿಂತು ಗೌರವ ಸಲ್ಲಿಸಿದರು. ಮೆಸ್ಸಿ ಕೈ ಎತ್ತುವ ಮೂಲಕ ಅಭಿಮಾನಿಗಳ ಗೌರವಕ್ಕೆ ಪ್ರತಿಕ್ರಿಯಿಸಿದರು.

ನೋವಿನಿಂದ ವಿಶ್ವಕಪ್ ವೈಭವದವರೆಗೆ ಮೆಸ್ಸಿ ಪಯಣ

ದಿಗ್ಗಜ ಆಟಗಾರ ಡಿಯಾಗೊ ಮರಡೋನಾರ ಉತ್ತರಾಧಿಕಾರಿಯಾಗಿ ಕಾಣಿಸಿಕೊಂಡ ಮೆಸ್ಸಿ 2005ರಲ್ಲಿ ಅರ್ಜೆಂಟೀನಾ ಹಿರಿಯರ ರಾಷ್ಟ್ರೀಯ ತಂಡಕ್ಕೆ ಪದಾರ್ಪಣೆ ಮಾಡಿದರು. 2022ರವರೆಗೆ ಅವರ ಪಯಣ ನಿರಾಸೆ ಹಾಗೂ ಹೃದಯವಿದ್ರಾವಕ ಸೋಲುಗಳಿಂದ ಕೂಡಿತ್ತು. ಅಂತಿಮವಾಗಿ 2022ರಲ್ಲಿ ಅವರು ವಿಶ್ವಕಪ್ ಎತ್ತಿಹಿಡಿದರು. ಈ ಗೆಲುವು ಫುಟ್‌ಬಾಲ್‌ನ ಶ್ರೇಷ್ಠ ಆಟಗಾರರ ಸಾಲಿನಲ್ಲಿ ಅವರ ಸ್ಥಾನವನ್ನು ಭದ್ರಪಡಿಸುವುದರ ಜೊತೆಗೆ ಅರ್ಜೆಂಟೀನಾದ ರಾಷ್ಟ್ರೀಯ ಹೀರೋ ಎಂಬ ಸ್ಥಾನಮಾನವನ್ನೂ ಮತ್ತಷ್ಟು ಗಟ್ಟಿಗೊಳಿಸಿತು.

ತಮ್ಮ ಪುತ್ರರಾದ ಥಿಯಾಗೊ, ಮಾಟಿಯೊ ಮತ್ತು ಸಿರೊ ಅವರೊಂದಿಗೆ ಮೈದಾನಕ್ಕೆ ಬಂದಿದ್ದ ಮೆಸ್ಸಿ, 1982ರ ಫಾಕ್‌ಲ್ಯಾಂಡ್ಸ್ ಯುದ್ಧದ ಹಿರಿಯ ಯೋಧರೊಬ್ಬರು ಹಾಡಿದ ಅರ್ಜೆಂಟೀನಾ ರಾಷ್ಟ್ರೀಯ ಗೀತೆ ಮೊಳಗುತ್ತಿದ್ದ ವೇಳೆ ಭಾವುಕರಾದರು. ಗೋಲ್‌ಕೀಪರ್ ಎಮಿಲಿಯಾನೊ ಮಾರ್ಟಿನೆಜ್ ಅವರ ಭುಜದ ಮೇಲೆ ಕೈಯಿಟ್ಟು ಮೆಸ್ಸಿಗೆ ಸಾಂತ್ವನ ಹೇಳಿದರು.

ಅಭಿಮಾನಿಗಳ ಅಪಾರ ಪ್ರೀತಿ, ಭಾವುಕ ಗೌರವ

“ಇದು ವಿದಾಯವಲ್ಲ, ಇದು ‘ಶಾಶ್ವತ ವಿದಾಯ’, ನಾಯಕ” ಎಂಬ ಸಂದೇಶವನ್ನು ರೆಬೆಕಾ ಏರಿಯಾಸ್ ಮತ್ತು ಡೇನಿಯಲ್ ಲೆಮಾ ಅವರು ಮೆಸ್ಸಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಿದ್ದ ಟೋಪಿಯ ಮೇಲೆ ಬರೆಸಿದ್ದರು. ಟೋಪಿಯ ಅಂಚಿನಲ್ಲಿ ಮೆಸ್ಸಿ ಆಡಿದ ಆರು ವಿಶ್ವಕಪ್‌ಗಳಿಗೆ ಸಂಬಂಧಿಸಿದಂತೆ ಅವರ ವಿವಿಧ ಚಿತ್ರಗಳನ್ನು ಬಿಡಿಸಲಾಗಿತ್ತು. ತಮ್ಮ ನೆಚ್ಚಿನ ಆಟಗಾರನ ಅಂತಿಮ ಪ್ರದರ್ಶನವನ್ನು ಕಣ್ತುಂಬಿಕೊಳ್ಳಲು ಈ ಯುವ ಜೋಡಿ ತಮ್ಮ ತವರು ಟುಕುಮಾನ್‌ನಿಂದ 1,000 ಕಿಲೋಮೀಟರ್‌ಗೂ ಹೆಚ್ಚು ದೂರ ಪ್ರಯಾಣಿಸಿ ಬಂದಿತ್ತು.

ಇದು ಅಪರೂಪದ ಕ್ಷಣ ಎಂದು ನಾವು ನಂಬುತ್ತೇವೆ. ಇಲ್ಲಿಗೆ ಬಂದು, ಇಷ್ಟು ದೂರ ಪ್ರಯಾಣಿಸಿ ಬಂದಿರುವುದು ಎಲ್ಲವೂ ಸಾರ್ಥಕವಾಗಿದೆ. ಇಂತಹ ಕ್ಷಣ ಮತ್ತೊಬ್ಬ ಆಟಗಾರನೊಂದಿಗೆ ಮತ್ತೆ ಸಂಭವಿಸದೇ ಇರಬಹುದು ಎಂದು ಏರಿಯಾಸ್ ಹೇಳಿದರು.

ಕಳೆದ ವಿಶ್ವಕಪ್‌ನಲ್ಲಿ ಮೆಸ್ಸಿ ಮತ್ತೊಂದು ಪ್ರಶಸ್ತಿಗೆ ಬಹಳ ಹತ್ತಿರ ಬಂದಿದ್ದರು. ಆದರೆ ಫೈನಲ್‌ನಲ್ಲಿ ಸ್ಪೇನ್ ವಿರುದ್ಧ 1-0 ಗೋಲುಗಳಿಂದ ಸೋಲನುಭವಿಸಿ ಪ್ರಶಸ್ತಿಯಿಂದ ವಂಚಿತರಾದರು. ಆದರೂ ಪಂದ್ಯಾವಳಿಯಲ್ಲಿ ಅವರ ಅದ್ಭುತ ಪ್ರದರ್ಶನಕ್ಕೆ ಈ ಸೋಲು ಯಾವುದೇ ರೀತಿಯಲ್ಲೂ ಕಳಂಕ ತರಲಿಲ್ಲ. ಅವರು ಎಂಟು ಗೋಲುಗಳನ್ನು ಗಳಿಸಿ ನಾಲ್ಕು ಗೋಲುಗಳಿಗೆ ನೆರವಾಗಿದ್ದರು.

ಮೆಸ್ಸಿಯ ಕೊಡುಗೆ ಎಷ್ಟೊಂದು ಮಹತ್ವದ್ದಾಗಿತ್ತೆಂದರೆ ಅವರು ಮತ್ತೊಮ್ಮೆ ಬ್ಯಾಲನ್ ಡಿ'ಓರ್ ಪ್ರಶಸ್ತಿಯ ಚರ್ಚೆಯಲ್ಲಿ ಸ್ಥಾನ ಪಡೆದಿದ್ದಾರೆ. ತಮ್ಮ ನಂತರ ಪ್ರಶಸ್ತಿ ಗೆಲ್ಲುವ ಪ್ರಮುಖ ಸ್ಪರ್ಧಿಗಳೆಂದು ಪರಿಗಣಿಸಲ್ಪಟ್ಟಿರುವ ಸ್ಪೇನ್‌ನ ಲಮಿನ್ ಯಮಾಲ್ ಮತ್ತು ಫ್ರಾನ್ಸ್‌ನ ಕೈಲಿಯನ್ ಎಂಬಾಪೆ ಅವರೊಂದಿಗೆ ಅವರು ಸ್ಪರ್ಧೆಯಲ್ಲಿದ್ದಾರೆ. ಬ್ಯಾಲನ್ ಡಿ'ಓರ್ ಪ್ರಶಸ್ತಿಯನ್ನು ಎಂಟು ಬಾರಿ ಗೆದ್ದಿರುವ ಏಕೈಕ ಫುಟ್‌ಬಾಲ್ ಆಟಗಾರ ಮೆಸ್ಸಿ.

ಮೆಸ್ಸಿಗೆ ಗೌರವ ಡಾಕ್ಟರೇಟ್

ಕ್ರೀಡಾಂಗಣದಲ್ಲಿ ವಿದಾಯ ಪಂದ್ಯ ಆಡುವುದಕ್ಕೂ ಮುನ್ನ ಮೆಸ್ಸಿ ಸಾರ್ವಜನಿಕ ಸಂಸ್ಥೆಯಾದ ಬ್ಯೂನಸ್ ಐರಿಸ್ ವಿಶ್ವವಿದ್ಯಾಲಯದಿಂದ (UBA) ಗೌರವ ಡಾಕ್ಟರೇಟ್ ಸ್ವೀಕರಿಸಿದರು.

ಎಸೆಐಜಾ ಉಪನಗರದಲ್ಲಿರುವ ಅರ್ಜೆಂಟೀನಾ ರಾಷ್ಟ್ರೀಯ ತಂಡದ ತರಬೇತಿ ಸಂಕೀರ್ಣದಲ್ಲಿ ವಿಶ್ವವಿದ್ಯಾಲಯವು ಈ ಗೌರವವನ್ನು ಪ್ರದಾನ ಮಾಡಿತು. ರಾಷ್ಟ್ರೀಯ ತಂಡದೊಂದಿಗಿನ ಅವರ ಸಾಧನೆ ಹಾಗೂ ಮೈದಾನದ ಒಳಗೆ ಮತ್ತು ಹೊರಗೆ ಅವರ ಪ್ರಭಾವವನ್ನು ಗುರುತಿಸಿ ಮೆಸ್ಸಿಗೆ ಪ್ರಮಾಣಪತ್ರ ಮತ್ತು ಪದಕ ನೀಡಿ ಗೌರವಿಸಲಾಯಿತು.

X
Kannada Prabha
www.kannadaprabha.com