

ಏಷ್ಯನ್ ಗೇಮ್ಸ್ 2026ರಲ್ಲಿ ಭಾರತದ ಮಹಿಳಾ ಆರ್ಚರಿ ತಂಡ ಭರ್ಜರಿ ಸಾಧನೆ ಮಾಡಿದೆ. ಚೀನಾವನ್ನು 238-234 ಅಂಕಗಳಿಂದ ಮಣಿಸಿದ ಜ್ಯೋತಿ ಸುರೇಖಾ ವೆನ್ನಮ್, ಚಿಕಿತಾ ತನಿಪರ್ತಿ, ಪ್ರೀತಿಕಾ ಪ್ರದೀಪ್ ಒಳಗೊಂಡ ಭಾರತ ತಂಡ ಚಿನ್ನದ ಪದಕಕ್ಕೆ ಮುತ್ತಿಕ್ಕಿದೆ.
ಈ ಗೆಲುವಿನೊಂದಿಗೆ ಭಾರತ ತಂಡ ವಿಶ್ವದಾಖಲೆ ಮಾಡಿದ್ದು, ಸತತ ಎರಡನೇ ಏಷ್ಯನ್ ಗೇಮ್ಸ್‌ನಲ್ಲಿ ಮಹಿಳಾ ಆರ್ಚರಿ ತಂಡ ಚಿನ್ನವನ್ನು ಉಳಿಸಿಕೊಂಡಿದೆ.
ಜ್ಯೋತಿ ಸುರೇಖಾ ವೆನ್ನಮ್, ಚಿಕಿತಾ ತನಿಪರ್ತಿ, ಪ್ರೀತಿಕಾ ಪ್ರದೀಪ್ ಒಳಗೊಂಡ ಭಾರತ ತಂಡವು ಫೈನಲ್‌ನಲ್ಲಿ ಪ್ರಾಬಲ್ಯ ಮೆರೆಯಿತು. ಚಿನ್ನದ ಪದಕದ ಪಂದ್ಯದಲ್ಲಿ ಚೀನಾವನ್ನು 238-234 ಅಂಕಗಳಿಂದ ಸೋಲಿಸಿ ಅಗ್ರಸ್ಥಾನಕ್ಕೇರಿತು.
ಈ ಸಾಧನೆಯೊಂದಿಗೆ ಭಾರತ ತಂಡವು ಕೊರಿಯಾ ಹೆಸರಿನಲ್ಲಿದ್ದ ವಿಶ್ವದಾಖಲೆಯ ಸ್ಕೋರ್ ಅನ್ನು ಸರಿಗಟ್ಟಿತು.
ವುನಿಯರ್, ಯು ವಾಂಗ್ ಮತ್ತು ಫಾಂಗ್ಯಾವೋ ವೀ ಒಳಗೊಂಡ ಚೀನಾ ತಂಡ ಬೆಳ್ಳಿ ಪದಕಕ್ಕೆ ತೃಪ್ತಿಪಟ್ಟಿತು.
ಇದಕ್ಕೂ ಮುನ್ನ ಸೆಮಿಫೈನಲ್‌ನಲ್ಲಿ ಭಾರತ ತಂಡ ದಕ್ಷಿಣ ಕೊರಿಯಾವನ್ನು 234-233 ಅಂಕಗಳಿಂದ ಸೋಲಿಸಿ ಫೈನಲ್ ಪ್ರವೇಶಿಸಿತ್ತು. ಈ ಪಂದ್ಯ ಒಕಝಾಕಿ ಚುವೊ ಸೊಗೊ ಪಾರ್ಕ್‌ನಲ್ಲಿ ನಡೆಯಿತು.
ಪಾರ್ಕ್ ಜಂಗ್ಯುನ್, ಪಾರ್ಕ್ ಯೆರಿನ್ ಮತ್ತು ಕಾಂಗ್ ಯಿಯೋನ್ಸಿಯೊ ಒಳಗೊಂಡ ದಕ್ಷಿಣ ಕೊರಿಯಾ ತಂಡ ಚೈನೀಸ್ ತೈಪೆಯನ್ನು ಮಣಿಸಿ ಕಂಚಿನ ಪದಕ ಗೆದ್ದುಕೊಂಡಿತು.
ಭಾರತದ ಮಹಿಳಾ ಆರ್ಚರಿ ತಂಡವು 2023ರ ಹ್ಯಾಂಗ್‌ಝೌ ಏಷ್ಯನ್ ಗೇಮ್ಸ್‌ನಲ್ಲೂ ಚಿನ್ನದ ಪದಕ ಗೆದ್ದಿತ್ತು. ಇದೀಗ 2026ರ ಏಷ್ಯನ್ ಗೇಮ್ಸ್‌ನಲ್ಲೂ ಚಿನ್ನ ಗೆದ್ದು ಪ್ರಶಸ್ತಿಯನ್ನು ಉಳಿಸಿಕೊಂಡಿದೆ.