ಬನದ ವಾಗ್ದೇವಿ

ಬೆಂಗಳೂರಿನ ಶಿಕ್ಷಣ ಸಂಸ್ಥೆಯೊಂದು ಗಿಡಮರಗಳ ನಡುವೆಯೇ ಮಕ್ಕಳಿಗೆ ಪಾಠ ಮಾಡುವ ವಿನೂತನ ಪ್ರಯತ್ನದ ಯಶಸ್ಸು ಕಂಡಿದೆ.
ಬನದ ವಾಗ್ದೇವಿ

ಬೆಂಗಳೂರಿನ ಶಾಲೆಗಳಲ್ಲಿ ಆಟದ ಮೈದಾನ ಕಾಣಸಿಗುವುದೇ ವಿರಳ. ಈ ಮಹಾನಗರದ ಶಿಕ್ಷಣ ಸಂಸ್ಥೆಯೊಂದು ಗಿಡಮರಗಳ ನಡುವೆಯೇ ಮಕ್ಕಳಿಗೆ ಪಾಠ ಮಾಡುವ ವಿನೂತನ ಪ್ರಯತ್ನ ಮಾಡಿ ಯಶಸ್ಸು ಕಂಡಿದೆ.

ಇಲ್ಲಿ ಮಕ್ಕಳಿದ್ದಾರೆ, ಅವರ ಸುತ್ತಲೂ ಅರಳಿದ ಹೂಗಳಿವೆ. ಮಕ್ಕಳ ಓಡಾಟ ಹಾಗೂ ಮುದ್ದುಮಾತಿಗೆ ತಲೆದೂಗುವ ಪುಷ್ಪರಾಶಿ. ಅಲ್ಲೀಗ ಹೂಗಳು, ಹೂ ಬಳ್ಳಿಗಳು. ಅವುಗಳಿಗೆ ಮುತ್ತಿಕ್ಕುವ ದುಂಬಿಗಳು, ಜೇನುಗಳು.

ಚಳಿಗಾಲ ಬಂತೆಂದರೆ ವಾಗ್ದೇವಿ ಮೈ ತುಂಬಾ ಹೂವು ಮುಡಿದು ಕಂಗೊಳಿಸುತ್ತಾಳೆ. ಬೆಂಗಳೂರಿನ ಮಾರತ್ಹಳ್ಳಿಯಲ್ಲಿದೆ ವಾಗ್ದೇವಿ ವಿಲಾಸ ಶಿಕ್ಷಣ ಸಂಸ್ಥೆ. ಹತ್ತು ಎಕರೆಯಷ್ಟು ವಿಶಾಲ ಶಾಲಾ ಆವರಣದಲ್ಲೀಗ ತರಹೇವಾರಿ ಪುಷ್ಪಗಳು ಅರಳಿ ನಿಂತಿವೆ. ನಿತ್ಯವೂ ನೂರಾರು ವಿದ್ಯಾರ್ಥಿಗಳು, ಸಾರ್ವಜನಿಕರು ಈ ಶಾಲೆಗೆ ಹೂ ಬಳ್ಳಿಗಳನ್ನು ನೋಡಲೆಂದೇ ಬರುತ್ತಿದ್ದಾರೆ.

ಮಕ್ಕಳಿಗೆ ಪುಷ್ಪಗಳ ಜಾತಿ, ಪ್ರಭೇದಗಳ ಪರಿಚಯ ಮಾಡಲೆಂದೇ ಸಂಸ್ಥೆ ಇಂಥ ಪ್ರಯೋಗ ಮಾಡಿ ಯಶಸ್ವಿಯಾಗಿದೆ. ಸಸ್ಯ, ಹೂವು, ಬಳ್ಳಿಗಳ ಪಾಠ ಬಂದಾಗ ವಿದ್ಯಾರ್ಥಿಗಳನ್ನು 'ಫಲಪುಷ್ಪ ಉದ್ಯಾನ'ಕ್ಕೆ ಕರೆದೊಯ್ದು ಬೋಧನೆ ಮಾಡಲಾಗುತ್ತದೆ. ದೊಡ್ಡಪತ್ರೆ, ಒಂದೆಲಗ, ತುಳಸಿ ಮತ್ತಿತರ ಔಷಧೀಯ ಗಿಡಗಳನ್ನೂ ಬೆಳೆಸಲಾಗಿದೆ.

ಸಂಸ್ಥೆ ಅಧ್ಯಕ್ಷಕೆ.ಹರೀಶ್ ಇಸ್ರೋದಲ್ಲಿ ವಿಜ್ಞಾನಿಯಾಗಿದ್ದವರು. ಪರಿಸರದ ಬಗ್ಗೆ ಕಳಕಳಿ ಹೊಂದಿದವರು. ಕೆಲ ತಿಂಗಳ ಹಿಂದೆ ದೂರದ ಒರಿಸ್ಸಾದಿಂದ ಮರಳು ಕಲಾವಿದ ಪಟ್ನಾಯಕ್ ಅವರನ್ನೇ ಕರೆಸಿ ಭೂಮಿತಾಯಿಯನ್ನು ಶಾಲೆಯಲ್ಲಿ ಸ್ಥಾಪಿಸಿದ್ದರು. ಒಂದಲ್ಲಾ ಒಂದು ಪ್ರಯೋಗದಲ್ಲಿ ಅವರು ನಿರತರು.

ಪಾರಿಜಾತ, ಗುಲಾಬಿ, ದಾಸವಾಳ, ಬೋಗನ್ ವಿಲ್ಲಾ, ನಂದಿ ಬಟ್ಟಲು, ಗಣಗಲೆ, ದೇವಗಣಗಲೆ, ಲಾಂತಾನಾ ಕ್ಯಾಮೆರಾ, ನೀರಿಯಮ್ ಒಲೆಂಡರ್, ಎಲ್ಲೊ ಬೆಲ್, ಸಂಪಿಗೆ, ಗಂಟೆ ಹೂವು ಸೇರಿದಂತೆ 150ಕ್ಕೂ ಹೆಚ್ಚು ವಿಧದ ಬಣ್ಣದ ಹೂವಿನ ಗಿಡಗಳು ಸಮೃದ್ಧವಾಗಿ ಬೆಳೆದಿವೆ. ಅರಳಿ, ಬಿಲ್ವ, ಬನ್ನಿ, ಗಸಗಸೆ, ಬೇವು, ಹಲಸು, ಪನ್ನೇರಳೆ, ಬೆಣ್ಣೆ ಹಣ್ಣು, ಹೊಂಗೆ, ಬಿದಿರು, ಶ್ರೀಗಂಧ, ಹೂವರಸಿ, ಹುಣಸೆ, ಸೀಬೆ, ದಾಳಿಂಬೆ, ಗೋಲ್ಡ್ಲೀಫ್, ಆಕಾಶಮಲ್ಲಿಗೆ, ಅಂಜೂರ, ಅಡಿಕೆ, ಸಪೋಟ ಇನ್ನೂ 300 ಬಗೆಯ ಗಿಡ, ಬಳ್ಳಿ, ಫಲಪುಷ್ಪಗಳು ಇಲ್ಲಿವೆ. ಈ ಆವರಣ ವೃಕ್ಷಗಳ ಎನ್ಸೈಕ್ಲೊಪಿಡಿಯಾ ಅಂದರೂ ತಪ್ಪಲ್ಲ.

ಶಾಲೆಯಲ್ಲಿ ವಾರಕ್ಕೆ ಎರಡು ತರಗತಿಯನ್ನು ಗಿಡ, ಮರಗಳ ನಡುವೆಯೇ ಕಳೆಯಲು ಅವಕಾಶ ಕಲ್ಪಿಸಲಾಗುತ್ತದೆ. ಆ ಸಂದರ್ಭದಲ್ಲಿ ಸಸ್ಯಶಾಸ್ತ್ರ ಶಿಕ್ಷಕರು ಮಕ್ಕಳಿಗೆ ಹೂವಿನ ರಚನೆ, ಪರಿಮಳ, ಕೀಟಗಳ ದಾಳಿ, ಬಳ್ಳಿ-ಗಿಡದ ರಚನೆ, ಗಿಡಗಳ ಬೆಳವಣಿಗೆ, ಹೂವುಗಳಾಗುವ ಸಮಯ ಮುಂತಾದ ವಿಷಯಗಳ ಕುರಿತು ವೈಜ್ಞಾನಿಕವಾಗಿ ಮಾಹಿತಿ ನೀಡುತ್ತಾರೆ. ಇದರಿಂದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವೂ ಆಗುತ್ತದೆ. ಮಳೆಕೊಯ್ಲು ಅಳವಡಿಸಿಕೊಂಡಿರುವ ಶಾಲೆ, ಜಲ ಸಂರಕ್ಷಣೆಯ ಮಹತ್ವವನ್ನೂ ಮಕ್ಕಳಿಗೆ ತಿಳಿಸಿಕೊಡುತ್ತದೆ.

' ಹೂವುಗಳನ್ನು ಕಂಡು ಇಲ್ಲಿಗೆ ವಿವಿಧ ಚಿಟ್ಟೆ ಹಾಗೂ ದುಂಬಿಗಳು ಆಗಮಿಸುತ್ತಿವೆ. ಇಲ್ಲಿ  ಅರಳಿದ ಹೂವಿನ ಸುವಾಸನೆ ಸೆಳೆತಕ್ಕೆ ಸಿಕ್ಕು ಈ ಮಹಾನಗರಕ್ಕೆ ಆ ದುಂಬಿಗಳು ಎಲ್ಲಿಂದ ಬಂದವೋ ಗೊತ್ತಿಲ್ಲ. ಮಕ್ಕಳಿಗೆ ಹೂವಿನ ಜತೆ ಹೂವುಗಳನ್ನು ಆಕರ್ಷಿಸುವ ಇತರೆ ಜೀವಿಗಳ ಕುರಿತು ಕೂಡ ಮಕ್ಕಳಿಗೆ ಸರಳವಾಗಿ ತಿಳಿಸಿಕೊಡಲೂ ಇದು ನೆರವಾಗಿದೆ. ವರ್ತೂರಿನಲ್ಲಿರುವ ಸಂಸ್ಥೆ ಆವರಣದಲ್ಲೂ ಇಂಥ ಉದ್ಯಾನವಿದೆ' ಎನ್ನುತ್ತಾರೆ ಪ್ರಾಂಶುಪಾಲರಾದ ಶ್ರೀದೇವಿ.
ಶಾಲೆಯ ದೂರವಾಣಿ: 9686577171.

ಸದಾ ಹಸಿರಿನಿಂದ ತುಂಬಿರುವ, ಹೂವು, ಕಾಯಿ, ಹಣ್ಣುಗಳಿಂದ ತುಂಬಿರುವ ಗಿಡ-ಮರಗಳನ್ನು ನೋಡಿದಾಗ ತುಂಬಾ ಆನಂದವಾಗುತ್ತದೆ. ಸಸ್ಯಶಾಸ್ತ್ರಕ್ಕೆ ಸಂಬಂಧಿಸಿದಂತೆ ನಮ್ಮ ಶಾಲಾ ಆವರಣವೇ ನಮಗೆ ಪ್ರಾಕ್ಟಿಕಲ್ ಅನುಭವ ನೀಡುತ್ತಿದೆ.
- ನಚಿಕೇತ, ಎಂಟನೇ ತರಗತಿ ವಿದ್ಯಾರ್ಥಿ

- ಕಿರಣ್ ಹೆಗಡೆ ಮೆಣಸಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com