ಮತಾಂತರ: ಸಂಸತ್‌ನಲ್ಲಿ ಗದ್ದಲ, ಸರ್ಕಾರದ ವಿವರಣೆ ಕೇಳಿದ ವಿಪಕ್ಷ

ಉತ್ತರ ಪ್ರದೇಶದಲ್ಲಿ ಸೋಮವಾರ ಸುಮಾರು 200ರಷ್ಟು ಮಂದಿ ಸಾಮೂಹಿಕ ಮತಾಂತರಗೊಂಡಿರುವ ಬಗ್ಗೆ ಬುಧವಾರ...
ಮತಾಂತರ
ಮತಾಂತರ
Updated on

ಆಗ್ರಾ: ಉತ್ತರ ಪ್ರದೇಶದಲ್ಲಿ ಸೋಮವಾರ ಸುಮಾರು 200ರಷ್ಟು ಮಂದಿ ಸಾಮೂಹಿಕ ಮತಾಂತರಗೊಂಡಿರುವ ಬಗ್ಗೆ ಬುಧವಾರ ಸಂಸತ್‌ನಲ್ಲಿ ವಿಪಕ್ಷಗಳು ಗದ್ದಲವೆಬ್ಬಿಸಿ, ಸರ್ಕಾರ ವಿವರಣೆ ನೀಡುವಂತೆ ಆಗ್ರಹಿಸಿವೆ.

ಆಡಳಿತಾರೂಢ ಬಿಜೆಪಿ ಪಕ್ಷದ ಸಂಘಟನೆಯಾದ ರಾಷ್ಟ್ರೀಯ ಸ್ವಯಂ ಸೇವಕ್ ಸಂಘ (ಆರೆಸ್ಸೆಸ್ಸ್) ಆಗ್ರಾದಲ್ಲಿ 57 ಮುಸ್ಲಿಂ ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಿತ್ತು. ಮಾತ್ರವಲ್ಲದೆ ಅಲೀಗಢದಲ್ಲಿಯೂ ಇದೇ ರೀತಿಯ ಕಾರ್ಯಕ್ರಮವನ್ನು ಹಮ್ಮಿಕೊಳ್ಳುವುದಾಗಿ ಹೇಳಿತ್ತು. ಈ ಬಗ್ಗೆ ರಾಜ್ಯಸಭೆಯಲ್ಲಿ ಪ್ರತಿಪಕ್ಷದ ಸಂಸದರು ಬಿಜೆಪಿಯನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಸಂಸತ್‌ನಲ್ಲಿ ಈ ವಿಷಯ ಭಾರೀ ಚರ್ಚೆಗೀಡಾಗಿದ್ದು, ದೇಶದಲ್ಲಿ ಯಾರೊಬ್ಬರೂ ಸಂವಿಧಾನದ ಕಟ್ಟಳೆಯನ್ನು ಮೀರಬಾರದು ಎಂದು ಕಾಂಗ್ರೆಸ್ ನೇತಾರ ಆನಂದ ಶರ್ಮಾ ಹೇಳಿದ್ದಾರೆ.

ಚಿಂದಿ ಆಯುವವರ ಕಾಲನಿಯಿಂದ 57 ಮುಸ್ಲಿಂ ಕುಟುಂಬಗಳನ್ನು ಆಯ್ಕೆ ಮಾಡಿ, ಅವರನ್ನು ಮತಾಂತರಗೊಳಿಸಲಾಗಿದೆ ಎಂದು ಗ್ರಾಮಸ್ಥರು ದೂರಿದ್ದು, ಈ  ಬಗ್ಗೆ ಎಫ್‌ಐಆರ್  ದಾಖಲಿಸಲಾಗಿದೆ.

ನಮಗೆ ಪಡಿತರ ಚೀಟಿ, ಆಧಾರ ಕಾರ್ಡ್ ನೀಡುವುದಾಗಿ ಹೇಳಿದ್ದರು. ಬಡವರಾದ ನಾವು ಏನು ಮಾಡಲಿ? ಎಂದು ಮತಾಂತರಗೊಂಡ ವ್ಯಕ್ತಿಯೊಬ್ಬರು ಹೇಳಿದ್ದಾರೆ.

ಆಗ್ರಾದಲ್ಲಿ ಬಜರಂಗ ದಳ ಮತ್ತು ಧರಂ ಜಾಗ್ರನ್ ಸಮನ್ವಯ್ ವಿಭಾಗ್ ಮುಸ್ಲಿಂ ಕುಟುಂಬಗಳನ್ನು ಹಿಂದೂ ಧರ್ಮಕ್ಕೆ ಮತಾಂತರ ಮಾಡಿತ್ತು. 'ಮರಳಿ ಮನೆಗೆ' ಎಂದು ಈ  ಕಾರ್ಯಕ್ರಮಕ್ಕೆ ಹೆಸರಿಡಲಾಗಿತ್ತು. ಈ ಕುಟುಂಬಗಳು 30 ವರ್ಷಗಳ ಹಿಂದೆ ಹಿಂದೂ ಧರ್ಮದಲ್ಲಿದವರಾಗಿದ್ದರು. ಆದ್ದರಿಂದ ಇವರನ್ನು ಮತ್ತೆ ತಮ್ಮ ಧರ್ಮಕ್ಕೆ ಕರೆತರುತ್ತಿದ್ದೇವೆ ಎಂದು ಆರೆಸ್ಸೆಸ್ಸ್ ಹೇಳಿಕೊಂಡಿತ್ತು.

ಅದೇ ವೇಳೆ 25 ನೇ ತಾರೀಖಿಗೆ ಅಲಿಗಢ್‌ನಲ್ಲಿ ಕ್ರಿಶ್ಚಿಯನ್ ಮತ್ತು ಮುಸ್ಲಿಂರನ್ನು ಆದಿತ್ಯನಾಥ್ ಅವರ ಆಶೀರ್ವಾದದೊಂದಿಗೆ ಮತಾಂತರ ಮಾಡಲಾಗುವುದು ಎಂದು ರಾಜೇಶ್ವರ್ ಸಿಂಗ್ ಹೇಳಿದ್ದರು.

ಆರೆಸ್ಸೆಸ್ಸ್‌ನ ಈ ಹೇಳಿಕೆಯ ಬಗ್ಗೆ ಸಂಸತ್‌ನಲ್ಲಿ ವಿಪಕ್ಷಗಳು ಟೀಕಾ ಪ್ರಹಾರ ಮಾಡಿವೆ. ಕೆಲವು ದಿನಗಳ ಹಿಂದೆಯಷ್ಟೇ ಕೇಂದ್ರ ಸಚಿವೆ ನಿರಂಜನ್ ಜ್ಯೋತಿ ವಿವಾದಾತ್ಮಕ ಹೇಳಿಕೆ ಸದನದಲ್ಲಿ ಕೋಲಾಹಲ ಸೃಷ್ಟಿಸಿತ್ತು.

ಜಾತ್ಯಾತೀತ ವ್ಯವಸ್ಥೆಯನ್ನು ಕಾಪಾಡಲು ನಾವೆಲ್ಲರೂ ಬದ್ಧರಾಗಿದ್ದೇವೆ. ಆಗ್ರಾದಲ್ಲಿ ಎಫ್‌ಐಆರ್ ದಾಖಲಾಗಿದ್ದು, ಈ ವಿಷಯದಲ್ಲಿ ರಾಜಕೀಯಕ್ಕಾಗಿ ಗುಂಪೊಂದರ ಹೆಸರನ್ನು ಉಲ್ಲೇಖಿಸುವುದು ತಪ್ಪು. ಇಲ್ಲಿ ಆರೆಸ್ಸೆಸ್ ಹೆಸರನ್ನು ಕೈಬಿಡಬೇಕು ಎಂದು ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವೀ ಹೇಳಿದ್ದಾರೆ.

ಇದಕ್ಕೆ ಪ್ರತಿಕ್ರಿಯಿಸಿದ ಕಾಂಗ್ರೆಸ್ ನೇತಾರ ದಿಗ್ವಿಜಯ್ ಸಿಂಗ್, ಇದು ರಾಜಕೀಯ ಪಕ್ಷದ ಗುಂಪೊಂದರ ಪ್ರಶ್ನೆಯಲ್ಲ. ಮತಾಂತರ ಮಾಡುವುದು ತಪ್ಪು, ಈ ಹೊತ್ತಲ್ಲಿ ಸರ್ಕಾರ ಏನು ಮಾಡುತ್ತಿದೆ? ಎಂಬುದು ನಮ್ಮ ಪ್ರಶ್ನೆ ಎಂದಿದ್ದಾರೆ.

ಇದೊಂದು ಗಂಭೀರ ಪ್ರಕರಣವಾಗಿದ್ದು, ಉತ್ತರ ಪ್ರದೇಶದಲ್ಲಿರುವ ಸಮಾಜವಾದಿ ಪಕ್ಷದ ಸರ್ಕಾರ ಇದನ್ನು ಗಂಭೀರವಾಗಿಯೇ ಪರಿಗಣಿಸಬೇಕಾಗಿದೆ ಎಂದು ಬಿಎಸ್ಪಿ ನೇತಾರೆ ಮಾಯಾವತಿ ಹೇಳಿದ್ದಾರೆ.

ಏತನ್ಮಧ್ಯೆ,  ಬಲವಂತವಾಗಿ ಮತಾಂತರ ಮಾಡುವುದನ್ನು ನಮ್ಮ ಸರ್ಕಾರ ಸಹಿಸುವುದಿಲ್ಲ ಎಂದು ಸಮಾಜವಾದಿ ಪಕ್ಷದ ವಕ್ತಾರ ಹೇಳಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X
Google Preferred source

Advertisement

X
Kannada Prabha
www.kannadaprabha.com