
ನವದೆಹಲಿ: 2012ರಲ್ಲಿ ಕೇರಳದ ಕರಾವಳಿಯಲ್ಲಿ ಭಾರತದ ಮೀನುಗಾರರನ್ನು ಗುಂಡಿಕ್ಕಿ ಹತ್ಯೆಗೈದ ಆರೋಪಿ ಮಸ್ಸಿಮಿಲಿಯಾನೋ ಲಟ್ಟೋರ್ ಅವರು ಸಲ್ಲಿಸಿದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿಸಿದೆ.
ಲಟ್ಟೋರ್ ಹೃದಯದ ಶಸ್ತ್ರಚಿಕಿತ್ಸೆಗೆ ಒಳಗಾಗಬೇಕಾಗಿ ಬಂದಿರುವುದರಿಂದ ಇಟಲಿಯಲ್ಲಿ ಇನ್ನೆರಡು ತಿಂಗಳು ತಂಗಲು ಅನುಮತಿ ನೀಡುವಂತೆ ಹಾಗೂ ಇನ್ನೊಬ್ಬ ನಾವಿಕ ಸಲ್ವಟ್ಟೋರ್ ಗಿರೋನ್ ಅವರಿಗೆ ಕ್ರಿಸ್‌ಮಸ್‌ಗಾಗಿ ತಾಯ್ನಾಡಿಗೆ ಹೋಗಲು ಅನುಮತಿ ನೀಡಬೇಕೆಂದು ಸುಪ್ರೀಂ ಕೋರ್ಟ್‌ಗೆ ಮನವಿ ಸಲ್ಲಿಸಿದ್ದರು.
ಮಂಗಳವಾರ ಅರ್ಜಿಯ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್ ನ್ಯಾಯಾಧೀಶ ಹೆಚ್.ಎಲ್ ದತ್ತು, ಕಾನೂನು ಎಲ್ಲರಿಗೂ ಸಮಾನ ಹಾಗೂ ಈ ಕಾನೂನನ್ನು ಎಲ್ಲರೂ ಪಾಲಿಸಬೇಕು ಎಂದು ಹೇಳಿದ್ದಾರೆ.
2014 ಸೆಪ್ಟೆಂಬರ್‌ನಲ್ಲಿ ಲಟ್ಟೋರ್ ಅವರಿಗೆ ಬ್ರೈನ್ ಸ್ಟ್ರೋಕ್ ಸಂಭವಿಸಿದ ಕಾರಣ ಇಟೆಲಿಗೆ ಹೋಗಿ 4 ತಿಂಗಳ ಕಾಲ ಚಿಕಿತ್ಸೆ ಪಡೆಯುವಂತೆ ದತ್ತು ಅವರ ನ್ಯಾಯಪೀಠ ಅನುಮತಿ ನೀಡಿತ್ತು. ಲಟ್ಟೋರ್ ಜನವರಿ 16ರಂದು ವಾಪಸ್ ಭಾರತಕ್ಕೆ ಬರಬೇಕಾಗಿತ್ತು. ಆದರೆ ಲಟ್ಟೋರ್ ಇನ್ನಷ್ಟು ಇಟಲಿಯಲ್ಲಿ ತಂಗಲು ಇನ್ನಷ್ಟು ಕಾಲಾವಕಾಶ ಬೇಕೆಂದು ಕೇಳಿಕೊಂಡಿದ್ದಾರೆ.
ಲಟ್ಟೋರ್ ಅವರ ಪರವಾಗಿ ವಾದಿಸಿದ ಸೋಲಿ ಸೊರಬ್ಜೀ, ಲಟ್ಟೋರ್ ಗೆ ಜನವರಿ 8ಕ್ಕೆ ಹೃದಯದ ಶಸ್ತ್ರಚಿಕಿತ್ಸೆ ಇದೆ, ಆದ್ದರಿಂದ ಹೆಚ್ಚಿನ ಕಾಲಾವಕಾಶ ನೀಡಬೇಕೆಂದು ಕೋರ್ಟ್‌ಗೆ ಮನವಿ ಮಾಡಿದ್ದರು.
ಇದಕ್ಕೆ ಪ್ರತಿಕ್ರಿಯಿಸಿದ ದತ್ತು, ಅವರನ್ನು ಆದಷ್ಟು ಬೇಗ ಭಾರತಕ್ಕೆ ಕರೆ ತನ್ನಿ ಎಂದು ಹೇಳಿದ್ದು ಮನವಿಯನ್ನು ತಿರಸ್ಕರಿಸಿದ್ದಾರೆ.
Advertisement