
ನವದೆಹಲಿ: ಮುಂಬೈ ದಾಳಿಯ ಆರೋಪಿ ಉಗ್ರ ಝಕಿವುರ್ ರೆಹಮಾನ್ ಲಖ್ವಿಗೆ ಪಾಕಿಸ್ತಾನ ಉಗ್ರ ನಿಗ್ರಹ ಕೋರ್ಟ್ ಜಾಮೀನು ನೀಡಿರುವುದಕ್ಕೆ ಭಾರತ ತೀವ್ರ ವಿರೋಧ ವ್ಯಕ್ತಪಡಿಸಿದ್ದು, ಈ ಸಂಬಂಧ ಭಾರತ ಶುಕ್ರವಾರ ಕಠಿಣ ಸಂದೇಶ ರವಾನಿಸಿದೆ.
ಉಗ್ರ ನಿಗ್ರಹ ಕೋರ್ಟ್ ಆದೇಶದ ಬಗ್ಗೆ ತೀವ್ರ ಆಕ್ರೋಶ ವ್ಯಕ್ತಪಡಿಸಿರುವ ಭಾರತ, ಈ ಕೂಡಲೇ ಜಾಮೀನು ಆದೇಶವನ್ನು ರದ್ದು ಮಾಡಬೇಕು ಎಂದು ಒತ್ತಾಯಿಸಿದೆ.
ವಿಶ್ವಸಂಸ್ಥೆಯ ಭದ್ರತಾ ಮಂಡಳಿ ಲಖ್ವಿಯನ್ನು ಅಂತಾರಾಷ್ಟ್ರೀಯ ಉಗ್ರ ಎಂದು ಘೋಷಿಸಿದೆ. ಇಂಥಹ ವ್ಯಕ್ತಿಗೆ ಜಾಮೀನು ನೀಡಿರುವುದು ದುರದೃಷ್ಟಕರ. ಒಬ್ಬ ಉಗ್ರನಿಗೆ ಜಾಮೀನು ನೀಡಿರುವ ಪಾಕ್ ಕೋರ್ಟ್‌ನ ಆದೇಶವನ್ನು ಒಪ್ಪುವುದಕ್ಕೆ ಸಾಧ್ಯವಿಲ್ಲ ಎಂದು ವಿದೇಶಾಂಗ ಸಚಿವಾಲಯದ ವಕ್ತಾರ ಸೈಯದ್ ಅಕ್ಬರುದ್ದೀನ್ ಅವರು ತೀಕ್ಷ್ಣವಾಗಿ ಪ್ರತಿಕ್ರಿಯಿಸಿದ್ದಾರೆ.
ಪೇಶಾವರದ ಸೈನಿಕ ಶಾಲೆಯ ಮುಗ್ಧ ಮಕ್ಕಳ ಮೇಲೆ ದಾಳಿ ನಡೆಸಿದ ಎರಡೇ ದಿನದಲ್ಲಿ ಉಗ್ರ ಲಖ್ವಿಗೆ ಜಾಮೀನು ಮಂಜೂರು ಮಾಡಲಾಗಿದೆ. ಇದರಿಂದ ಹೇಯ ಕೃತ್ಯ ಎಸಗುವ ಉಗ್ರರಿಗೆ ಮತ್ತಷ್ಟು ಕುಮ್ಮಕ್ಕು ಸಿಕ್ಕಂತಾಗುತ್ತದೆ ಎಂದು ಅಕ್ಬರುದ್ದೀನ್ ಹೇಳಿದ್ದಾರೆ. ಅಲ್ಲದೆ ಲಖ್ವಿ ಜಾಮೀನು ರದ್ದುಪಡಿಸಲು ಪಾಕ್ ಸರ್ಕಾರ ತುರ್ತು ಕ್ರಮಗಳನ್ನು ತೆಗೆದುಕೊಳ್ಳಬೇಕು ಮತ್ತು ಉಗ್ರರ ವಿಚಾರದಲ್ಲಿ ರಾಜಿ ಮಾಡಿಕೊಳ್ಳುವುದಿಲ್ಲ ಎಂಬುದನ್ನು ಅರ್ಥಮಾಡಿಕೊಳ್ಳಬೇಕು ಎಂದು ಕಟುವಾಗಿ ಹೇಳಿದ್ದಾರೆ.
ಸಾಕ್ಷ್ಯಾಧಾರಗಳ ಕೊರತೆ ಹಿನ್ನೆಲೆಯಲ್ಲಿ ಪಾಕಿಸ್ತಾನದ ಉಗ್ರ ನಿಗ್ರಹ ಕೋರ್ಟ್ ನಿನ್ನೆ ಮುಂಬೈ ದಾಳಿಯ ಆರೋಪಿಗೆ ಜಾಮೀನು ಮಂಜೂರು ಮಾಡಿತ್ತು.
Advertisement