ಭ್ರಷ್ಟರ ವಿರುದ್ಧ ಲೋಕಾಯುಕ್ತ ಸಮರ

ರಾಜ್ಯದ 6 ಕಡೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.
ಲೋಕಾಯುಕ್ತ ಕಚೇರಿ
ಲೋಕಾಯುಕ್ತ ಕಚೇರಿ

ಬೆಂಗಳೂರು: ರಾಜ್ಯದ 6 ಕಡೆಗಳಲ್ಲಿ ಇಂದು ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು, ಸರ್ಕಾರಿ ಅಧಿಕಾರಿಗಳ ನಿವಾಸ ಹಾಗೂ ಕಚೇರಿಗಳ ಮೇಲೆ ದಾಳಿ ನಡೆಸಿ, ಕೋಟ್ಯಾಂತರ ರೂಪಾಯಿ ಮೌಲ್ಯದ ಆಸ್ತಿಪಾಸ್ತಿ ಪತ್ತೆಹಚ್ಚಿದ್ದಾರೆ.

ಕೊಪ್ಪಳ, ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳ, ಬೀದರ್, ಮಂಡ್ಯ, ಶಿವಮೊಗ್ಗ ಹಾಗೂ ಹಾಸನ ಜಿಲ್ಲೆಗಳ ಭ್ರಷ್ಟ ಅಧಿಕಾರಿಗಳ ವಿರುದ್ಧ ಲೋಕಾಯುಕ್ತ ಅಧಿಕಾರಿಗಳು ಸಮರ ಸಾರಿದ್ದಾರೆ.

ಬೀದರ್ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯ ಆಪ್ತ ಕಾರ್ಯದರ್ಶಿ ಅಶೋಕ್ ಮಹಾಲಿಂಗ ಖಂಡಾಳ್ ಅವರ ಮನೆ ಮೇಲೆ ಇಂದು ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದರು. ಲೋಕಾಯುಕ್ತ ಎಸ್‌ಪಿ ಎಂ.ಬಿ.ಪಾಟೀಲ್ ನೇತೃತ್ವದ ತಂಡ, ಬೀದರ್‌ನ ಪ್ರತಾಪನಗರ ಸಮೀಪವಿರುವ ಅವರ ಮೂರಂತಸ್ಥಿನ ಕಟ್ಟಡ, ಭಾಲ್ಕಿ ತಾಲೂಕಿನ ಸಿದ್ದೇಶ್ವರ ಗ್ರಾಮ ಹಾಗೂ ಖಂಡಾಳ್‌ನಲ್ಲಿರುವ ಮನೆ ಸೇರಿದಂತೆ 6 ಕಡೆಗಳಲ್ಲಿ ದಾಳಿ ನಡೆಸಿ, ದಾಖಲೆಗಳನ್ನು ವಶಪಡಿಸಿಕೊಂಡಿದ್ದಾರೆ.

ಇನ್ನೂ ಕೊಪ್ಪಳದಲ್ಲಿ ಲೋಕಾಯುಕ್ತ ಡಿವೈಎಸ್‌ಪಿ ವಿಜಯ್‌ಕುಮಾರ್ ನೇತೃತ್ವದ ತಂಡ, ಕೊಪ್ಪಳ ತಾಲೂಕಿನ ಆರ್‌ಟಿಒ ಅಧಿಕಾರಿ ಪಾಂಡುರಂಗ ಶೆಟ್ಟಿ ಅವರ ಮನೆ ಮೇಲೆ ದಾಳಿ ನಡೆಸಿ, ಆಸ್ತಿ ಕುರಿತ ದಾಖಲೆಗಳ ಪರಿಶೀಲನೆ ಮಾಡಿತು.

ಹಾಸನದ ಆಹಾರ ನಿರೀಕ್ಷಕ ದೊರೆಸ್ವಾಮಿಯ ನಿವಾಸದ ಮೇಲೆ ಲೋಕಾಯುಕ್ತ ಎಸ್ಪಿ ವೇದಮೂರ್ತಿ ಮತ್ತು ಸಿಬ್ಬಂದಿ ತಂಡ ದಾಳಿ ನಡೆಸಿತು. ಈ ವೇಳೆ ದೊರೆಸ್ವಾಮಿ ಮನೆಯಲ್ಲಿ 20 ಸಾವಿರ ನಗದು ಹಣವನ್ನು ಪೊಲೀಸರು ವಶಪಡಿಸಿಕೊಂಡು, ದಾಖಲೆಗಳ ಪರಿಶೀಲನೆ ಮಾಡಿದರು.

ಮಂಡ್ಯದಲ್ಲಿ ಶ್ರೀರಂಗಪಟ್ಟಣದ ಕಸಬ ಹೋಬಳಿಯ ಕಂದಾಯ ಇನ್ಸ್‌ಪೆಕ್ಟರ್ ದೊಡ್ಡಯ್ಯ ಆವರ ಮೈಸೂರಿನ ಬೋಗಾದಿಯಲ್ಲಿರುವ ನಿವಾಸ ಮತ್ತು ಕಚೇರಿಯ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದರು. ಲೋಕಾಯುಕ್ತ ಎಸ್.ಪಿ.ನಾರಾಯಣ ಸ್ವಾಮಿ ಅವರ ನೇತೃತ್ವದ ತಂಡ, ಆಸ್ತಿಪಾಸ್ತಿಯ ಕುರಿತು ದಾಖಲೆಗಳನ್ನು ವಶಪಡಿಸಿಕೊಂಡಿದೆ.

ದಕ್ಷಿಣಕನ್ನಡ ಜಿಲ್ಲೆಯ ಬಂಟ್ವಾಳ ತಾಲೂಕಿನ ಲೋಕೋಪಯೋಗಿ ಇಲಾಖೆಯ ಇಂಜಿನಿಯರ್ ಅರುಣ್ ಪ್ರಕಾಶ್ ಅವರ ಮೊಡಂಕಾಪು ನಿವಾಸದ ಮೇಲೆ ದಾಳಿ ನಡೆಸಿದರು. ದಾಳಿ ಬಳಿಕ ಅರುಣ್ ಹಾಗೂ ಅವರ ಪತ್ನಿಯನ್ನು ಮಂಗಳೂರಿನ ಲೋಕಾಯುಕ್ತ ಕಚೇರಿಗೆ ಕರೆ ತಂದು ವಿಚಾರಣೆ ನಡೆಸಿದರು.

ಇನ್ನು ಶಿವಮೊಗ್ಗದಲ್ಲೂ ಲೋಕಾಯುಕ್ತ ಅಧಿಕಾರಿಗಳು, ಭದ್ರಾವತಿ ಪೇಪರ್ ಮಿಲ್ಸ್‌ನ ಮ್ಯಾನೇಜರ್ ಅವರ ಮನೆಗೆ ದಾಳಿ ನಡೆಸಿ, ಅಪಾರ ಪ್ರಮಾಣದ ಆಸ್ತಿ ಹೊಂದಿರುವ ದಾಖಲೆಗಳನ್ನು ಕಲೆ ಹಾಕಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com