
ಬೆಂಗಳೂರು: ನ್ಯಾಯಾಂಗ ವ್ಯವಸ್ಥೆಯಲ್ಲಿ ಎಲ್ಲಿಯವರೆಗೆ ಅಂತಃಸಾಕ್ಷಿಗಿಂತ ಸಾಕ್ಷಿ ಮುಖ್ಯವಾಗುತ್ತದೆಯೋ ಅಲ್ಲಿಯ ತನಕ ಅತ್ಯಾಚಾರ, ಲೈಂಗಿಕ ದೌರ್ಜನ್ಯದಂಥ ಪ್ರಕರಣ ತಡೆಗಟ್ಟಲು ಸಾಧ್ಯವಿಲ್ಲ ಎಂದು ಮಾಜಿ ಸಚಿವ ಮತ್ತು ಅತ್ಯಾಚಾರ ತಡೆ ಕಾನೂನು ಅಧ್ಯಯನ ಸಮಿತಿ ಅಧ್ಯಕ್ಷ ಎಂ.ಸಿ ನಾಣಯ್ಯ ಅಭಿಪ್ರಾಯಪಟ್ಟಿದ್ದಾರೆ.
ಸುದ್ದಿಗಾರರ ಜತೆ ಮಾತನಾಡಿದ ಅವರು, ಈ ರೀತಿಯ ಘಟನೆಗಳಿಗೆ ಕಾರಣರಾದವರಿಗೆ ಗಲ್ಲು ಶಿಕ್ಷೆ ನೀಡುವುದು ಅಥವಾ ಪುರುಷತ್ವ ಹರಣದ ಬಗ್ಗೆ ಶಿಫಾರಸು ಮಾಡುವ ಬಗ್ಗೆ ಮುಂದಿನ ಸಭೆಯಲ್ಲಿ ನಿರ್ಧರಿಸಲಾಗುವುದು ಎಂದರು.
ದೇಶದ ನ್ಯಾಯದಾನ ಪ್ರಕ್ರಿಯೆಯಲ್ಲಿ ಕೆಲವು ಲೋಪವಿದೆ. ಅತ್ಯಾಚಾರ, ದೌರ್ಜನ್ಯಕ್ಕೊಳಗಾದವರು ಮೊದಲು ಪೊಲೀಸರಿಗೆ ದೂರು ನೀಡಬೇಕು. ಅದರ ಆಧಾರದ ಮೇಲೆ ಅವರು ಎಫ್‌ಐಆರ್ ದಾಖಲಿಸಬೇಕು. ಆನಂತರ ಅದು ನ್ಯಾಯಾಲಯಕ್ಕೆ ಹೋಗಬೇಕು. ವಾದ-ಪ್ರತಿವಾದ ನಡೆಯಬೇಕು. ಆದರೆ, ಘಟನೆ ನಡೆದಿದ್ದು ಸತ್ಯ ಎಂಬುದು ಅರಿವಾದರೂ ಲಭ್ಯವಿರುವ ಪುರಾವೆಗಳನ್ನು ನ್ಯಾಯಾಲಯ ಮುಖ್ಯವಾಗಿ ಪರಿಗಣಿಸುತ್ತದೆ. ಆದರೆ. ಫ್ರಾನ್ಸ್, ಅಮೆರಿಕದಂತಹ ದೇಶಗಳಲ್ಲಿ ಸತ್ಯ ಎಂಬುದು ಮನವರಿಕೆಯಾದರೆ ಪೊಲೀಸರು ದೂರು ದಾಖಲಿಸಿಕೊಳ್ಳುವುದಿಲ್ಲ. ಮಾಜಿಸ್ಟ್ರೇಟರೇ ದೂರು ದಾಖಲಿಸಿಕೊಂಡು ವಿಚಾರಣೆ ಆರಂಭಿಸುತ್ತಾರೆ. ನಡೆದ ಘಟನೆ ಸತ್ಯ ಎಂಬುದು ಮನವರಿಕೆಯಾದರೆ ಸಾಕ್ಷಿ, ಪುರಾವೆಗಳನ್ನು ಅಲ್ಲಿ ಮುಖ್ಯವಾಗಿ ಪರಿಗಣಿಸುವುದಿಲ್ಲ. ಹೀಗಾಗಿ ತಪ್ಪಿತಸ್ಥರಿಗೆ ತ್ವರಿತ ಹಾಗೂ ಪರಿಣಾಮಕಾರಿಯಾದ ಶಿಕ್ಷೆ ಜಾರಿಯಾಗುತ್ತದೆ ಎಂದರು.
ನೈತಿಕತೆ ಹೆಚ್ಚಬೇಕು: ಇಂಥ ನ್ಯಾಯದಾನ ವ್ಯವಸ್ಥೆ ನಮ್ಮಲ್ಲಿಲ್ಲ. ಹೀಗಾಗಿ ಸಮಸ್ಯೆ ಬಿಗಡಾಯಿಸಿದೆ. ಅದೇ ರೀತಿ ವ್ಯವಸ್ಥೆಯಲ್ಲೂ ನೈತಿಕ ಹೆಚ್ಚಾಗಬೇಕು. ಈ ವಿಷಯದಲ್ಲಿ ಚಲನಚಿತ್ರಗಳೂ, ಮಾಧ್ಯಮಗಳು ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಬೇಕು ಎಂದು ಅಭಿಪ್ರಾಯಪಟ್ಟರು. ದೇಶದಲ್ಲಿ ಈಗ ಸುಮಾರು ಒಂದು ಕೋಟಿ ಮಂದಿ ಲೈಂಗಿಕ ಕಾರ್ಯಕರ್ತರಿದ್ದಾರೆ. ಮೊದಲು ತಮ್ಮನ್ನು ಗಂಡಸರಿಗೆ ಸರಿ ಸಮಾನವಾಗಿ ಪರಿಗಣಿಸಿ, ಹಾಗೆಯೇ ನಮ್ಮ ವೃತ್ತಿಯನ್ನು ಕಾನೂನು ಬದ್ಧಗೊಳಿಸಿ ಎಂದು ಅವರು ನ್ಯಾಯಾಲಯದ ಮೊರೆ ಹೋಗಿದ್ದಾರೆ. ನಮ್ಮ ಸಮಿತಿ ಕೂಡಾ ಇಂತಹ ವಿಷಯಗಳ ಕುರಿತು ಚರ್ಚೆ ನಡೆಸಲು ಮಾತುಕತೆ ನಡೆಸಿ ವರದಿ ನೀಡಲು ಪ್ರತ್ಯೇಕ ಸಮಿತಿ ರಚಿಸಿದೆ. ಅದೇ ರೀತಿ ಸಮಿತಿಯಲ್ಲಿ ವಿಧಾನಸಭೆ ಹಾಗೂ ವಿಧಾನಪರಿಷತ್ತಿನ ಹನ್ನೊಂದು ಮಂದಿ ಸದಸ್ಯರಿದ್ದು ಅವರನ್ನೊಳಗೊಂಡ ಉಪ ಸಮತಿ ರಚಿಸಲಾಗಿದೆ ಎಂದರು.
ಕಾನೂನಿನ ಪ್ರಕಾರ ಅತ್ಯಾಚಾರದಲ್ಲಿ ಎರಡು ಬಗೆಗಳಿವೆ. ಹಲವು ಕಾಲ ಸಂಬಂಧವಿಟ್ಟುಕೊಂಡು ಆನಂತರ ಮೋಸ ಮಾಡಲಾಗಿದೆ ಎಂದು ದೂರು ಕೊಡುವುದು ಒಂದಾದರೆ, ನಿಜವಾಗಿ ವಿಕೃತಿಗಳಿಗೆ ಸಂಬಂಧಿಸಿದಂತೆ ಇನ್ನಷ್ಟು ಕಠಿಣ ಕಾನೂನುಗಳನ್ನು ಜಾರಿಗೊಳಿಸಲು ಕೇಂದ್ರಕ್ಕೆ ಶಿಫಾರಸ್ಸು ಮಾಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸ್ಸು ಮಾಡಲಾಗುವುದು ಎಂದರು.
Advertisement