
ಬೆಂಗಳೂರು: ಪ್ರತಿಪಕ್ಷಗಳ ತೀವ್ರ ವಿರೋಧ, ಗದ್ದಲದ ನಡುವೆಯೂ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ(ಬಿಬಿಎಂಪಿ) ವಿಭಜನೆ ತಿದ್ದುಪಡಿ ವಿಧೇಯಕ ವಿಧಾನಸಭೆಯಲ್ಲಿ ಅಂಗೀಕಾರವಾಗಿದೆ.
ಬೆಳಗ್ಗೆಯಿಂದ ಸಂಜೆಯವರೆಗೆ ಮಸೂದೆ ಬಗ್ಗೆ ಆಡಳಿತ ಮತ್ತು ಪ್ರತಿಪಕ್ಷಗಳ ನಡುವೆ ಸಾಕಷ್ಟು ವಾಕ್ಸಮರ ನಡೆದಿತ್ತು. 6ಗಂಟೆಗೆ ಪ್ರತಿಪಕ್ಷಗಳ ಗದ್ದಲದ ನಡುವೆಯೇ ವಿಧಾನಸಭೆ ಕಲಾಪದಲ್ಲಿ ಬಿಬಿಎಂಪಿ ವಿಭಜನೆಯ ಕರ್ನಾಟಕ ನಗರಪಾಲಿಕೆ ವಿಧೇಯಕ(ತಿದ್ದುಪಡಿ) 2015ರ ವಿಧೇಯಕ ಮಸೂದೆ ಅಂಗೀಕಾರವಾಯಿತು. ಆಗ ಪ್ರತಿಪಕ್ಷಗಳು ವಿಧೇಯಕದ ಪ್ರತಿ ಹರಿದು ಧರಣಿ ನಡೆಸಿದ್ದು ಮಾತ್ರವಲ್ಲದೆ ಸದನದ ಬಾವಿಗಿಳಿದು ಪ್ರತಿಭಟನೆ ನಡೆಸಿದರು. ವಿಧೇಯಕ ಅಂಗೀಕಾರದ ನಂತರ ವಿಧಾನಸಭೆ ಕಲಾಪವನ್ನು ಸ್ಪೀಕರ್ ಕಾಗೋಡು ತಿಮ್ಮಪ್ಪ ಅರ್ಧ ಗಂಟೆಗಳ ಕಾಲ ಮುಂದೂಡಿದರು.
ಸೋಮವಾರ ವಿಧಾನಮಂಡಲದಲ್ಲಿ ನಡೆದ ಏಕದಿನ ವಿಶೇಷ ಅಧಿವೇಶನದಲ್ಲಿ ಕಲಾಪ ಆರಂಭವಾಗುತ್ತಿದ್ದಂತೆ ವಿಧಾನಸಭೆ ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಉತ್ತರ ಕರ್ನಾಟಕದ ಬೆಳೆ ಹಾನಿ ಬಗ್ಗೆ ಚರ್ಚೆಗೆ ಅವಕಾಶ ನೀಡಬೇಕೆಂದು ಪಟ್ಟು ಹಿಡಿದರು. ಈ ಚರ್ಚೆಗೆ ಮಧ್ಯಾಹ್ನದ ನಂತರ ಅವಕಾಶ ಕೊಡುವುದಾಗಿ ಸ್ಪೀಕರ್ ಕಾಗೋಡು ತಿಮ್ಮಪ್ಪ ಸೂಚಿಸಿದರು.
ಆದರೆ ಈ ಸಂದರ್ಭದಲ್ಲಿ ಬಿಜೆಪಿ, ಜೆಡಿಎಸ್ ಸದಸ್ಯರು ತೀವ್ರ ಗದ್ದಲ ಎಬ್ಬಿಸಿದರು. ಗಲಾಟೆ, ಕೋಲಾಹಲದ ನಡುವೆಯೇ ಕಾನೂನು ಸಚಿವ ಟಿ.ಬಿ.ಜಯಚಂದ್ರ ಅವರು ಬಿಬಿಎಂಪಿ ವಿಭಜನೆಯ ಕರ್ನಾಟಕ ನಗರಪಾಲಿಕೆಗಳ (ತಿದ್ದುಪಡಿ) ವಿಧೇಯಕ, 2015 ವನ್ನು ಮಂಡಿಸಿದರು.
ವಿಧೇಯಕ ಮಂಡನೆಯಾದಾಗ ಪ್ರತಿಪಕ್ಷ ಸದಸ್ಯರು ತೀವ್ರ ವಾಗ್ದಾಳಿ ನಡೆಸಿದ್ದು, ಈ ವೇಳೆ ಸಿದ್ದರಾಮಯ್ಯ ಮತ್ತು ಜಗದೀಶ್ ಶೆಟ್ಟರ್ ನಡುವೆ ವಾಕ್ಸಮರ ನಡೆದಿದೆ.
ಇತ್ತ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ.ಕುಮಾರಸ್ವಾಮಿ ಕೂಡಾ ಸರ್ಕಾರದ ವಿರುದ್ಧ ಕಿಡಿಕಾರಿದರು.
Advertisement