
ನವದೆಹಲಿ: ಕೇವಲ ೨೦ ದಿನಗಳಲ್ಲಿ ಹೆಣ್ಣು ಮಕ್ಕಳನ್ನು ಚುಡಾಯಿಸುವುದನ್ನು ಚಟವಾಗಿಸಿಕೊಂಡಿದ್ದ ೩೭೦ ಪುರುಷರನ್ನು ದೆಹಲಿ ಪೊಲೀಸರು ಬಂಧಿಸಿದ್ದು ಮತ್ತು ೨೪೦೦ ಪುರುಷರನ್ನು ಅಲ್ಪ ಕಾಲದವರೆಗೆ ಬಂಧಿಸಿ ಎಚ್ಚರಿಕೆ ನೀಡಿ ಬಿಡುಗಡೆ ಮಾಡಿದ್ದಾರೆ. ಇದು ದೇಶದ ರಾಜಧಾನಿಯಲ್ಲಿ ಮಹಿಳೆಯರ ಮೇಲೆ ಎಸಗುವ ದೌರ್ಜನ್ಯದ ಎಲ್ಲೆಯನ್ನು ತಿಳಿಸುತ್ತದೆ.
ಶಾಪಿಂಗ್ ಮಾಲ್ ಗಳು, ವಿಶ್ವವಿದ್ಯಾಲಯದ ಕ್ಯಾಂಪಸ್ ಗಳು ಮತ್ತು ಹೆಚ್ಚು ಜನ ವಲಸಿಗರು ಸೇರುವ ಜಾಗ ಈ ಆರೋಪಿಗಳಿಗೆ ಹೆಣ್ಣು ಮಕ್ಕಳನ್ನು ಚುಡಾಯಿಸುವುದಕ್ಕೆ ನೆಚ್ಚಿನ ಸ್ಥಳಗಳಾಗಿದ್ದವು ಎಂದು ಹಿರಿಯ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಸಿರಿವಂತರೇ ಹೆಚ್ಚಿರುವ ದೆಹಲಿಯ ದಕ್ಷಿಣ ಭಾಗ ಪೊಲೀಸರು ವಶಕ್ಕೆ ತೆಗೆದುಕೊಂಡ ಈ ಪೀಡುಕರ ಪಟ್ಟಿಯಲ್ಲಿ ಮೇಲಿದೆ. ಈ ಭಾಗದಲ್ಲಿ ಆಗಸ್ಟ್ ೩ ರಿಂದ ೨೩ ರ ವರಗೆ ರಸ್ತೆಗಳಲ್ಲಿ ಮಹಿಳೆಯರ ಮೇಲೆ ದೌರ್ಜನ್ಯವೆಸಗಿದ್ದಕ್ಕೆ ೮೩೧ ಜನರನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
"ಈ ಪೀಡುಕರನ್ನು ವಶಕ್ಕೆ ತೆಗೆದುಕೊಂಡ ಮೇಲೆ ಅವರ ಪೋಷಕರಿಗೆ ಕರೆ ಮಾಡಿ ಎನ್ ಜಿ ಒ, ಧಾರ್ಮಿಕ ಗುರುಗಳು ಮತ್ತು ಸಾಮಾಜಿಕ ಕಾರ್ಯಕರ್ತರಿಂದ ಉಪದೇಶ ತೆಗೆದುಕೊಳ್ಳುವಂತೆ ಹೇಳಿದ್ದೇವೆ. ಬಿಡುಗಡೆಗೂ ಮುಂಚಿತವಾಗಿ ಇಂತಹ ಕೆಲಸಗಳನ್ನು ಮತ್ತೆ ಮಾಡುವುದಿಲ್ಲ ಎಂದು ವಚನ ತೆಗೆದುಕೊಳ್ಳಲಾಗಿದೆ" ಎಂದು ದೆಹಲಿ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
Advertisement