
ಬೆಂಗಳೂರು: ಸಂಶೋಧಕ ಎಂ.ಎಂ.ಕಲಬುರ್ಗಿ ಅವರ ಹತ್ಯೆಯ ಬಗ್ಗೆ ಇಡೀ ದೇಶವೇ ದಿಗ್ಭ್ರಮೆ ವ್ಯಕ್ತಪಡಿಸುತ್ತಿದ್ದರೆ, ಇತ್ತ ಸಾಮಾಜಿಕ ಜಾಲತಾಣಗಳಲ್ಲಿ ವಿಕೃತ ಮನಸ್ಸುಗಳು ಕಲಬುರ್ಗಿಸಾವನ್ನು ಸಂಭ್ರಮಿಸಿವೆ.
ಟ್ವಿಟ್ಟರ್‍ನಲ್ಲಿ ಗರುಡ ರೇಖೆ ಹೆಸರಿನ ಅಕೌಂಟ್‍ನಲ್ಲಿ ಭುವಿತ್ ಶೆಟ್ಟಿ ಎಂದು ಹೇಳಿಕೊಂಡಿರುವ ವ್ಯಕ್ತಿಯೊಬ್ಬ ಒಂದು ಹೆಜ್ಜೆ ಮುಂದೆ ಹೋಗಿ ಎಂ.ಎಂ.ಕಲಬುರ್ಗಿ ನಂತರ ಸಾಹಿತಿ ಕೆ.ಎಸ್.ಭಗವಾನ್ ಅವರದ್ದು ಮುಂದಿನ ಸರದಿ ಎಂದು ಪ್ರಾಣ ಬೆದರಿಕೆ ಹಾಕಿದ್ದಾರೆ. `ಹಿಂದೆ ಅನಂತಮೂರ್ತಿ. ಈಗ ಎಂ.ಎಂ.ಕಲಬುರ್ಗಿ. ಹಿಂದೂ ಧರ್ಮವನ್ನು ಹೀಯಾಳಿಸಿ ನಾಯಿಯಂತೆ ಸಾಯಿರಿ. ಪ್ರೀತಿಯ ಕೆ.ಎಸ್.ಭಗವಾನ್ ನಂತರ ನೀವೇ' ಎಂದು ಬೆದರಿಕೆಹಾಕಿದ್ದನು. ಭುವಿತ್ ಶೆಟ್ಟಿ ಹಾಕಿರುವ ಈ ಟ್ವೀಟ್‍ಗೆ ಸಾಮಾಜಿಕ ಜಾಲತಾಣದಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ.
ಅಲ್ಲದೇ ಈ ರೀತಿ ಸಾಮಾಜಿಕ ಜಾಲತಾಣದಲ್ಲಿ ಬೆದರಿಕೆ ಹಾಕಿರುವ ವ್ಯಕ್ತಿಯ ವಿರುದ್ಧ ಕ್ರಮ ಕೈಗೊಳ್ಳುವಂತೆ ಟ್ವಿಟ್ಟರಿಗರೂ ಆಗ್ರಹಿಸಿದ್ದಾರೆ. ನಿಲಿಮ್ ದತ್ತಾ ಎಂಬುವರು ಆನ್‍ಲೈನ್ ಮೂಲಕ ಗೃಹ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಸ್. ಕೆ.ಪಟ್ಟನಾಯಕ್ ಅವರಿಗೆ ಟ್ವಿಟ್ಟರ್ ಸ್ಕ್ರೀನ್‍ಶಾಟ್ ಸಮೇತ ದೂರು ನೀಡಿದ್ದಾರೆ. ಈ ವಿಚಾರಗಳು ಬೆಳಕಿಗೆ ಬರುತ್ತಿದ್ದಂತೆ ಆ ವ್ಯಕ್ತಿ ತನ್ನ ಅಕೌಂಟ್ ಡಿಲೀಟ್ ಮಾಡಿದ್ದಾನೆ. ಈ ಬಗ್ಗೆ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡು ತನಿಖೆ ನಡೆಸುವುದಾಗಿ ದ. ಕನ್ನಡ ಎಸ್‍ಪಿ ಶರಣಪ್ಪ ತಿಳಿಸಿದ್ದಾರೆ.
ಅಭಿಮಾನಿಗಳ ಮೌನ ಪ್ರತಿಭಟನೆ
ಕೊಟ್ಟೂರು: ಇದು ಕೇವಲ ಸಂಶೋಧಕ ಎಂ.ಎಂ. ಕಲಬುರ್ಗಿ ಅವರ ಹತ್ಯೆ ಮಾತ್ರವಲ್ಲ, ಬಸವಣ್ಣನವರ ಚಿಂತನೆ, ವಿಚಾರಗಳನ್ನು ಕೊಲ್ಲುವ ಹುನ್ನಾರ ನಡೆದಿದೆ ಎಂದು ಕಲಬುರ್ಗಿ ಅಭಿಮಾನಿ ಶಾಂತಕುಮಾರ್ ಹರ್ಲಾಪುರ ಆರೋಪಿಸಿದರು. ನಗರದ ಚಾಲುಕ್ಯ ವೃತ್ತದಲ್ಲಿನ ಬಸವಪ್ರತಿಮೆ ಬಳಿ ಭಾನುವಾರ ಶಾಂತಕುಮಾರ್ ಮತ್ತು ಅವರ ಪತ್ನಿ ಭಾಗ್ಯವತಿ ಅವರು ಮೌನ ಪ್ರತಿಭಟನೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕಳೆದ ಎರಡು ತಿಂಗಳ ಹಿಂದೆ ಹುಬ್ಬಳ್ಳಿಯ ಕಲ್ಯಾಣನಗರದಲ್ಲಿ ಜರುಗಿದ ಸಭೆಯಲ್ಲಿ ಮಾತನಾಡಿದ್ದ ಕಲಬುರ್ಗಿ ಅವರು, ಲಿಂಗಾಯತರು ಹಿಂದೂಗಳಲ್ಲ, ಅದೊಂದು ಸ್ವತಂತ್ರ ಧರ್ಮ ಎಂದು ಪ್ರತಿಪಾದಿಸಿದ್ದರು. ಅಂದಿನಿಂದಲೂ ಅವರ ಮೇಲೆ ಕಣ್ಣಿಟ್ಟಿದ್ದ ಲಿಂಗಾಯತ ಮಠಾಧೀಶರು, ಆರ್‍ಎಸ್‍ಎಸ್ ಕಾರ್ಯಕರ್ತರು, ಬಲಪಂಥೀಯರು ಈ ಕೃತ್ ಎಸಗಿದ್ದಾರೆ ಎಂಬುದರಲ್ಲಿ ಅನುಮಾನವೇ ಬೇಡ ಎಂದು ಹೇಳಿದರು.
ಬಿಸಿಲಲ್ಲೇ ಪ್ರತಿಭಟನೆ
ಡಾ. ಎಂ.ಎಂ. ಕಲಬುರ್ಗಿ ಹತ್ಯೆ ವಿಷಯ ತಿಳಿಯುತ್ತಿದ್ದಂತೆಯೇ ರಂಗಭೂಮಿ ಕಲಾವಿದ, ಕಲಬುರ್ಗಿ ಅವರ ಸಾಹಿತ್ಯಾಭಿಮಾನಿ ಅಂಚೆ ಕೊಟ್ರೇಶ್ ಕೊಟ್ಟೂರಿನಲ್ಲಿ ದಿನವಿಡೀ ಮೌನ ಪ್ರತಿಭಟನೆ ಧರಣಿ ನಡೆಸಿದರು. ಕೊಲೆ ಸುದ್ದಿಯನ್ನು ಟಿವಿಯಲ್ಲಿ ವೀಕ್ಷಿಸಿದ ಅವರು ಕಲಬುರ್ಗಿಯವರ ಪುಸ್ತಕಗಳನ್ನು ಹಿಡಿದು ಇಲ್ಲಿ ಎಪಿಎಂಸಿ ಬಳಿಯ ಫುಟ್‍ಪಾತ್‍ನಲ್ಲಿ ಬಿಸಿಲಿನಲ್ಲಿ ಕುಳಿತು ಬೆಳಗ್ಗೆ 10 ಗಂಟೆಯಿಂದ ಧರಣಿ ಆರಂಭಿಸಿದರು.
Advertisement