ಇನ್ನೂ 3 ದಿನ ಚೆನ್ನೈ ಏರ್ ಪೋರ್ಟ್ ಬಂದ್

ನಗರದ ವಿಮಾನ ನಿಲ್ದಾಣದಲ್ಲಿ ನೀರು ನಿಂತು ಕಾರ್ಯಾಚರಣೆಗೆ ಅಸಾಧ್ಯವಾಗಿರುವುದರಿಂದ, ನೌಕಾನೆಲೆಯನ್ನೇ ವಿಮಾನ ನಿಲ್ದಾಣವಾಗಿ ಪರಿವರ್ತಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ...
ಮಳೆಯಿಂದಾಗಿ ಜಲಾವೃತ್ತಗೊಂಡಿರುವ ಚೆನ್ನೈ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)
ಮಳೆಯಿಂದಾಗಿ ಜಲಾವೃತ್ತಗೊಂಡಿರುವ ಚೆನ್ನೈ ವಿಮಾನ ನಿಲ್ದಾಣ (ಸಂಗ್ರಹ ಚಿತ್ರ)

ಚೆನ್ನೈ: ನಗರದ ವಿಮಾನ ನಿಲ್ದಾಣದಲ್ಲಿ ನೀರು ನಿಂತು ಕಾರ್ಯಾಚರಣೆಗೆ ಅಸಾಧ್ಯವಾಗಿರುವುದರಿಂದ, ನೌಕಾನೆಲೆಯನ್ನೇ ವಿಮಾನ ನಿಲ್ದಾಣವಾಗಿ ಪರಿವರ್ತಿಸುವುದಾಗಿ ಅಧಿಕಾರಿಗಳು ಹೇಳಿದ್ದಾರೆ.

ಇನ್ನೂ ಮೂರು ದಿನ ಮಳೆ ಸುರಿಯಲಿದೆ ಎಂಬ ಮುನ್ನೋಟದ ಪರಿಣಾಮ ಏರ್ ಪೋರ್ಟ್ ಅನ್ನು ಭಾನುವಾರದ ವರೆಗೆ ಮುಚ್ಚಲಾಗಿದೆ. ಹೀಗಾಗಿ ಚೆನ್ನೈಯಿಂದ 70 ಕಿ.ಮೀ. ದೂರದಲ್ಲಿರುವ  ಅರಕೋಣಂ ಸನಿಹದ ರಾಜಾಲಿ ನೌಕಾನೆಲೆಯನ್ನೇ ಡಿ.6ರ ವರೆಗೆ ನಾಗರಿಕ ವಿಮಾನ ನಿಲ್ದಾಣವಾಗಿ ಬಳಸುವುದಾಗಿ ಭಾರತೀಯ ವಾಯುಯಾನ ಪ್ರಾಧಿಕಾರ ತಿಳಿಸಿದೆ.

ಬಿಎಸ್ ಎನ್ ಎಲ್ ನಿಂದ ಕರೆ ಉಚಿತ
ಇದೇ ವೇಳೆ ಒಂದು ವಾರ ಕಾಲ ಚೆನ್ನೈನಲ್ಲಿ ಸರ್ಕಾರಿ ಸ್ವಾಮ್ಯದ ಭಾರತ ಸಂಚಾರ್ ನಿಗಮ ಲಿಮಿಟೆಡ್ ವತಿಯಿಂದ ಸಾರ್ವಜನಿಕರಿಗೆ ಉಚಿತವಾಗಿ ಕರೆ ಮಾಡುವ ವ್ಯವಸ್ಥೆ ಮಾಡಲಾಗಿದೆ  ಎಂದು ಕೇಂದ್ರ ದೂರಸಂಪರ್ಕ ಸಚಿವ ರವಿಶಂಕರ ಪ್ರಸಾದ್ ತಿಳಿಸಿದ್ದಾರೆ. ಇದರ ಜತೆಗೆ ಖಾಸಗಿ ದೂರಸಂಪರ್ಕ ಕಂಪನಿಗಳೂ ಕೂಡ ಜನರಿಗೆ ಉಚಿತ ಕರೆ ಮತ್ತು ಮೊಬೈಲ್ ಡೇಟಾ  ನೀಡುವುದಾಗಿ ಘೋಷಣೆ ಮಾಡಿವೆ. ಖಾಸಗಿ ದೂರಸಂಪರ್ಕ ಕಂಪನಿಗಳು ವಿವಿಧ ರೀತಿಯ ಪ್ಲ್ಯಾನ್‍ಗಳನ್ನು ಗ್ರಾಹಕರಿಗೆ ಒದಗಿಸಲು ಮುಂದಾಗಿವೆ.

ಡಿಎಫ್ ಆರ್‍ಎಲ್‍ನಿಂದ ಚೆನ್ನೈಗೆ ಆಹಾರ ಪೂರೈಕೆ
ಕುಂಭದ್ರೋಣ ಮಳೆಯಿಂದಾಗಿ ಜಲಾವೃತವಾಗಿರುವ ಚೆನ್ನೈಗೆ ಮೈಸೂರಿನ ಡಿಪೆನ್ಸ್ ಫುಡ್ ರೀಸರ್ಚ್ ಲ್ಯೋಬೋರೆಟರಿ (ಡಿಎಫ್ ಆರ್‍ಎಲ್) ಸಂಸ್ಥೆಯು 3.5 ಟನ್ ಆಹಾರ ಪೂರೈಸಿದೆ. ಕಳೆದ  ವಾರವೇ ಅಗತ್ಯವಿರುವ ಆಹಾರ ಪೂರೈಸುವಂತೆ ಮನವಿ ಮಾಡಿದ್ದ ಹಿನ್ನೆಲೆಯಲ್ಲಿ ಡಿಎಫ್ ಆರ್‍ಎಲ್ ಸಂಸ್ಥೆಯು ಪಲಾವ್, ರವೆ ಬಾತ್, ಟೊಮ್ಯಾಟೋ ಬಾತ್, ಪೀರ್ ಮಿಕ್ಸ್ ಸೇರಿದಂತೆ ವಿವಿಧ  ರೀತಿಯ ಆಹಾರವನ್ನು ಪೂರೈಸಿದೆ. ಈಗಿನ ಮಾಹಿತಿ ಅನ್ವಯ ತಮಿಳುನಾಡಿಗೆ ಮತ್ತಷ್ಟು ಆಹಾರ ಸಾಮಗ್ರಿಯ ಅಗತ್ಯ ಕಂಡುಬಂದಿದೆ. ಬೇಡಿಕೆ ಪಟ್ಟಿ ಸಲ್ಲಿಸಿದಲ್ಲಿ ಕೂಡಲೇ ತಯಾರಿಸಿ  ಪೂರೈಸುವುದಾಗಿ ಡಿಎಫ್ ಆರ್‍ಎಲ್‍ನ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಮಲ್ಲೇಶ್ ತಿಳಿಸಿದ್ದಾರೆ.

ರಕ್ಷಣೆಗೆ ಧಾವಿಸಿದ ಸೇನೆ
ನೆರೆಯಲ್ಲಿ ಸಿಕ್ಕಿಕೊಂಡ ನೂರಾರು ಮಂದಿಯ ರಕ್ಷಣೆಗೆ ಸೇನೆ ಧಾವಿಸಿದೆ. ಸೇನೆಯ ನೆರೆ ರಕ್ಷಣಾ ಮತ್ತು ಪರಿಹಾರ ತಂಡದ ನಾಲ್ಕು ಬಟಾಲಿಯನ್‍ಗಳು ತಾಂಬರಂ, ಮಡಿಚೂರ್, ಮಣಿಪಾಕಂ, ಗುಡವಂಚೇರಿ, ಊರಪಾಕ್ಕಂಗಳಲ್ಲಿ ಕಾರ್ಯನಿರತವಾಗಿವೆ. 20 ಮುಳುಗುತಜ್ಞರನ್ನೊಳಗೊಂಡ ತಂಡ ಅಡ್ಯಾರ್ ನದಿ ಸುತ್ತಮುತ್ತ ಕಾರ್ಯನಿರತವಾಗಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com