ಉಪಲೋಕಾಗೆ ಆನಂದ್ ಹೆಸರು

ಉಪ ಲೋಕಾಯುಕ್ತರಾಗಿ ನ್ಯಾ.ಆನಂದ್ ಅವರ ಹೆಸ ರನ್ನು ಸರ್ಕಾರ ಶಿಫಾರಸು ಮಾಡಲು ತೀರ್ಮಾನಿಸಿದೆ. ಕುಮಾರಕೃಪಾ ಅತಿಥಿಗೃಹದಲ್ಲಿ ಮುಖ್ಯಮಂತ್ರಿ...
ಉಪ ಲೋಕಾಯುಕ್ತ ಕಚೇರಿ
ಉಪ ಲೋಕಾಯುಕ್ತ ಕಚೇರಿ
ಬೆಂಗಳೂರು: ಉಪ ಲೋಕಾಯುಕ್ತರಾಗಿ ನ್ಯಾ.ಆನಂದ್ ಅವರ ಹೆಸ ರನ್ನು ಸರ್ಕಾರ ಶಿಫಾರಸು ಮಾಡಲು ತೀರ್ಮಾನಿಸಿದೆ. ಕುಮಾರಕೃಪಾ ಅತಿಥಿಗೃಹದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಉಪಸ್ಥಿತಿಯಲ್ಲಿ ನಡೆದ ಮಹತ್ವದ ಸಭೆಯಲ್ಲಿ ಈ ತೀರ್ಮಾನ ಕೈಗೊಳ್ಳಲಾಗಿದೆ. 
ಸಭೆಯಲ್ಲಿ ಸ್ಪೀಕರ್ ಕಾಗೋಡು ತಿಮ್ಮಪ್ಪ, ಮೇಲ್ಮನೆ ಸಭಾಪತಿ ಶಂಕರಮೂರ್ತಿ, ವಿಪಕ್ಷ ನಾಯಕ ಜಗದೀಶ್ ಶೆಟ್ಟರ್ ಇದ್ದರು. ಉಪಲೋಕಾಯುಕ್ತರಾಗಿ ಕಾರ್ಯ ನಿರ್ವಹಿಸುತ್ತಿದ್ದ ನ್ಯಾ.ಮಜಗೆ ನಿವೃತ್ತರಾದ ನಂತರ ಈ ಹುದ್ದೆಗೆ ನ್ಯಾ.ಕೆ.ಎಲ್. ಮಂಜುನಾಥ್ ಅವರ ಹೆಸರನ್ನು ಸರ್ಕಾರ ಶಿಫಾರಸು ಮಾಡಿತ್ತು. ಈ ಮಧ್ಯೆಯೇ ಮಂಜುನಾಥ್ ಶಿಫಾರಸ್ಸಿನ ಬಗ್ಗೆ ತೀವ್ರ ಆಕ್ಷೇಪ ಕೇಳಿಬಂದಿತ್ತು. ರಾಜ್ಯಪಾಲರು ಸರ್ಕಾರದ ಶಿಫಾರಸನ್ನು 3 ಬಾರಿ ತಿರಸ್ಕರಿಸಿದ್ದರು. ಇದಾದ ನಂತರದ ಬೆಳವಣಿಗೆಯಲ್ಲಿ ಮಜಗೆಯವರ ಸ್ಥಾನಕ್ಕೆ ಮತ್ತೊಬ್ಬ ಉಪಲೋಕಾಯುಕ್ತರನ್ನು ನೇಮಿಸುವುದು ಸರ್ಕಾರಕ್ಕೆ ಅನಿವಾರ್ಯ ವಾಯಿತು. ಸರ್ಕಾರದ ನಡೆಗೂ ಸಾರ್ವ ಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. 
ಈ ಹಿನ್ನೆಲೆಯಲ್ಲಿ ಸರ್ಕಾರ ಮಂಗಳವಾರ ಹೊಸ ಉಪ ಲೋಕಾಯುಕ್ತರ ಹೆಸರನ್ನು ಶಿಫಾರಸು ಮಾಡುವ ಸಂಬಂಧ ಸಭೆ ಕರೆದಿತ್ತು. ಸಭೆಯ ತರುವಾಯ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, 'ಉಪ ಲೋಕಾಯುಕ್ತ ಮಜಗೆಯವರ ಸ್ಥಾನಕ್ಕೆ ಹೊಸ ಹೆಸರನ್ನು ಶಿಫಾರಸು ಮಾಡಬೇಕಾಗಿತ್ತು. ಈ ಹಿನ್ನೆಲೆಯಲ್ಲಿ ಸಭೆ ನಡೆಸಿದ್ದೇವೆ. ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಸಭೆಗೆ ಬರಲಾಗಲಿಲ್ಲ. ಅವರು ಮೂರು ಹೆಸರನ್ನು ಪ್ರಸ್ತಾಪಿಸಿ ಪತ್ರ ಕಳಿಸಿದ್ದರು. ಮೇಲ್ಮನೆ ಪ್ರತಿಪಕ್ಷ ನಾಯಕ ಕೆ.ಎಸ್.ಈಶ್ವರಪ್ಪನವರೂ ದೂರವಾಣಿಯಲ್ಲಿ ಮಾತನಾಡಿದರು. ಉಳಿದಂತೆ ನಾನು, ಸಭಾಪತಿ, ಸಭಾಧ್ಯಕ್ಷರು, ಪ್ರತಿಪಕ್ಷ ನಾಯಕರು ಸಭೆ ನಡೆಸಿ ತೀರ್ಮಾನ ಕೈಗೊಂಡೆವು'' ಎಂದರು. ಹೈಕೋರ್ಟ್‍ನ ನಿವೃತ್ತ ನ್ಯಾಯಮೂರ್ತಿ ಆನಂದ್ ಅವರ ಹೆಸರನ್ನು ಸಭೆಯಲ್ಲಿ ಒಮ್ಮತದಿಂದ ಆಯ್ಕೆ ಮಾಡಿದ್ದೇವೆ. ಆಯ್ಕೆ ವಿಚಾರದಲ್ಲಿ ಯಾವುದೇ ಭಿನ್ನಾಭಿಪ್ರಾಯ ಇಲ್ಲ ಎಂದು ಇದೇ ಸಂದರ್ಭದಲ್ಲಿ ಸ್ಪಷ್ಟಪಡಿಸಿದರು. 
ಇದೇ ವೇಳೆ ಮಾತನಾಡಿದ ಪ್ರತಿಪಕ್ಷ ನಾಯಕ ಜಗದೀಶ್ ಶೆಟ್ಟರ್, 'ಸಭೆಯಲ್ಲಿ ನ್ಯಾ.ಆನಂದ್ ಹೊರತಾಗಿ ಬೇರೆ ಯಾವ ಹೆಸರೂ ಪ್ರಸ್ತಾಪವಾಗಲಿಲ್ಲ. ಮುಖ್ಯನ್ಯಾಯಮೂರ್ತಿಯವರು ಪ್ರಸ್ತಾಪಿಸಿದ ಪಟ್ಟಿಯಲ್ಲಿ ಆನಂದ್ ಅವರ ಹೆಸರಿತ್ತು. ಒಳ್ಳೆಯ ಆಯ್ಕೆ, ನಾವು ಸಹ ಒಪ್ಪಿದೆವು. ಸರ್ವಾನು-ಮತದಿಂದ ಆಯ್ಕೆ ಮಾಡಲಾಗಿದೆ'' ಎಂದರು. ಎರಡೇ ಹೆಸರು: ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಪ್ರಸ್ತಾಪಿಸಿದ 3 ಹೆಸರಿನ ಪೈಕಿ ಎರಡು ಹೆಸರು ಮಾತ್ರ ಸಭೆಯ ಮುಂದೆ ಬಂದಿತ್ತು. ಕೆ.ಎಲ್. ಮಂಜುನಾಥ್ ಅವರ ವಿರುದ್ಧ ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಅವರ ಹೆಸರನ್ನು ಪಟ್ಟಿಯಿಂದ ಕೈಬಿಡುವಂತೆ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರೇ ಸರ್ಕಾರಕ್ಕೆ ಪತ್ರ ಮುಖೇನ ತಿಳಿಸಿದ್ದರು. ಹೀಗಾಗಿ ನ್ಯಾ.ಆನಂದ್ ಮತ್ತು ನ್ಯಾ.ಗುಂಜಾಲ್ ಅವರ ಹೆಸರು ಮಾತ್ರ ಅಂತಿಮ ರೇಸ್‍ನಲ್ಲಿತ್ತು.
ಲೋಕಾಬಗ್ಗೆ ಚರ್ಚೆ: ಲೋಕಾಯುಕ್ತರ ನೇಮಕ ಸಂಬಂಧ ಈ ಸಭೆಯಲ್ಲಿ ಯಾವುದೇ ಚರ್ಚೆ ನಡೆದಿಲ್ಲ ಎಂದು ಸಭೆಯಲ್ಲಿ ಪಾಲ್ಗೊಂಡವರು ಸ್ಪಷ್ಟಪಡಿಸಿದರು. ಆದರೆ, ಸಿಎಂ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿರುವ ನ್ಯಾ.ಎಸ್.ಆರ್.ನಾಯಕ್ ಅವರನ್ನೇ ಲೋಕಾಯುಕ್ತರನ್ನಾಗಿ ಮಾಡಬೇ-ಕೆಂಬ ಚಿಂತನೆ ಇದ್ದು, ಪ್ರಯತ್ನಗಳು ಸಾಗಿವೆ ಎಂದು ಗೊತ್ತಾಗಿದೆ. ಸದ್ಯ ಎಸ್.ಆರ್ .ನಾಯಕ್ ಅವರು ಕಾನೂನು ಆಯೋಗದ ಅಧ್ಯಕ್ಷರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಹಿಂದೆ ಅವರು ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷರಾಗಿಯೂ ಕೆಲಸ ಮಾಡಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com