ಗೆಲುವು ನನ್ನದೇ: ಕಿರಣ್ ಬೇಡಿ

ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಗುರುವಾರ ತೆರೆ ಬೀಳಲಿದ್ದು, ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ಇನ್ನಷ್ಟು...
ಕಿರಣ್  ಬೇಡಿ
ಕಿರಣ್ ಬೇಡಿ

ನವದೆಹಲಿ: ದೆಹಲಿ ವಿಧಾನಸಭಾ ಚುನಾವಣಾ ಪ್ರಚಾರಕ್ಕೆ ಗುರುವಾರ ತೆರೆ ಬೀಳಲಿದ್ದು, ಅಭ್ಯರ್ಥಿಗಳು ಪ್ರಚಾರ ಕಾರ್ಯದಲ್ಲಿ ಇನ್ನಷ್ಟು ಬ್ಯುಸಿಯಾಗಿದ್ದಾರೆ.

ಬಿರುಸಿನ ಪ್ರಚಾರ ನಡುವೆ ಮಾಧ್ಯಮದವರೊಂದಿಗೆ ಮಾತನಾಡಿದ ಬಿಜೆಪಿ ಅಭ್ಯರ್ಥಿ ಕಿರಣ್  ಬೇಡಿ, ವಿಧಿ ನನ್ನನ್ನು ರಾಜಕೀಯಕ್ಕೆ ಕರೆತಂದಿದೆ. ನನಗೆ ಬೇರೇನೂ ಉದ್ದೇಶವಿಲ್ಲ. ದೇವರು ನನಗೆ ಎಲ್ಲವನ್ನೂ ಕೊಟ್ಟಿದ್ದಾನೆ. ದೆಹಲಿಯ ಜನರ ಸೇವೆ ಮಾಡಬೇಕು ಎಂಬುದು ನನ್ನ ಮನಸ್ಸಿನ ತುಡಿತ. ನಾನಿಲ್ಲಿ ಸೋಲಲು ಬಂದಿಲ್ಲ, ಗೆಲುವು ನನ್ನದೇ.

ನನಗೆ 14 ವರ್ಷ ಇರುವಾಗ ನಾನಿಲ್ಲಿಗೆ ಟೆನ್ನಿಸ್ ಮ್ಯಾಚ್ ಆಡುವ ಸಲುವಾಗಿ ಅಮೃತಸರದಿಂದ ಬರುತ್ತಿದ್ದೆ. ಈ ನಗರದಲ್ಲಿ ನಾನು ಸೇವೆ ಮಾಡಬೇಕೆಂದು ಬಯಸಿದ್ದೆ. ದೇವರ ಅನುಗ್ರಹದಿಂದ ನನಗೆ ಮೊದಲ ಕೆಲಸದ ನೇಮಕಾತಿ ಇಲ್ಲೇ ಆಗಿದ್ದು. ನಾನು ದೆಹಲಿಯನ್ನು ಪ್ರೀತಿಸುತ್ತೇನೆ. ಒಬ್ಬ ಅಮ್ಮನಂತೆ ನಾನಿಲ್ಲಿದ್ದೀನಿ ಎಂದು ಬೇಡಿ ಹೇಳಿದ್ದಾರೆ.

ಯಾರ ಭೂತಕಾಲವು ಯಾವಾಗ ವರ್ತಮಾನಕಾಲವಾಗಿ ಬದಲಾಗುತ್ತದೆ ಎಂಬುದು ಯಾರೊಬ್ಬರಿಗೂ ಗೊತ್ತಿಲ್ಲ. ಕೆಲವರು ನನ್ನ ಬಳಿ ಬಂದು ನಾನವರ ಬದುಕನ್ನು ಬದಲಿಸಿದ್ದೇನೆ ಎಂದು ಹೇಳುತ್ತಾರೆ. ನಾನು ಈ ಹಿಂದೆ ಮಾಡಿದ ಒಳ್ಳೆಯ ಕೆಲಸಗಳಿಂದಾಗಿ ನಾನೀಗ ಗೌರವ ಮತ್ತು ಪ್ರೀತಿಯನ್ನು ಪಡೆಯುತ್ತಿದ್ದೇನೆ ಎಂದಿದ್ದಾರೆ ಕಿರಣ್ ಬೇಡಿ.

ನೀವು ಸರ್ವಾಧಿಕಾರಿ ಧೋರಣೆ ಹೊಂದಿದ್ದೀರಿಎಂಬ ಆರೋಪ ಇದೆ. ಈ ಬಗ್ಗೆ ಏನಂತೀರಿ? ಎಂದು ಕೇಳಿದಾಗ, ನನ್ನನ್ನು ಸರ್ವಾಧಿಕಾರಿ ಎಂದು ಯಾರಾದರೂ ಕರೆದರೆ ನನಗೇನೂ ಮಾಡಲು ಸಾಧ್ಯವಿಲ್ಲ. ನಿರ್ಣಾಯಕರಂತಿರುವ ಜನರು ಇಂಥಾ ಹೆಸರುಗಳನ್ನು ಕೊಡುತ್ತಾರೆ. ತಪ್ಪು ಮಾಡುವವರ ವಿರುದ್ಧ ಹಾಗೂ ಒಳ್ಳೆಯ ಕೆಲಸ ಮಾಡುವವರ ಪರ ನಾನು ಯಾವತ್ತೂ ಇದ್ದೇ ಇರುತ್ತೇನೆ ಎಂದು ಉತ್ತರಿಸಿದ್ದಾರೆ.

ದೆಹಲಿಯಲ್ಲಿ ಚುನಾವಣಾ ಪ್ರಚಾರ ವೇಳೆ ಆದ ಅನುಭವಗಳ ಬಗ್ಗೆ ಕೇಳಿದಾಗ, ನನಗೇನೂ ಬೇಸರವಾಗಿಲ್ಲ, ಅದು ನನ್ನ ಸ್ವಭಾವವೂ ಅಲ್ಲ. ನಾನು ಗೌರವ ಬಯಸಿಯೋ, ಅವಮಾನಕ್ಕೊಳಗಾಗಲೋ ಬಂದವಳಲ್ಲ. ನಾನಿಲ್ಲಿ ನನ್ನ ಕರ್ತವ್ಯ ನಿರ್ವಹಿಸುವುದಕ್ಕಾಗಿ ಬಂದಿದ್ದೇನೆ ಎಂದು ಹೇಳಿದ ಬೇಡಿ, ಜನರ ಸೇವೆಯೇ ನನ್ನ ಉದ್ದೇಶ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com