
ಬೆಂಗಳೂರು: ಸಿಲಿಕಾನ್ ನಗರಿಯ ಯಲಹಂಕ ವಾಯುನೆಲೆಯ ಬಾನಂಗಳದಲ್ಲಿ ಉಕ್ಕಿನ ಹಕ್ಕಿಗಳ ಉತ್ಸವ ಆರಂಭವಾಗಿದ್ದು, ಪ್ರಧಾನಿ ನರೇಂದ್ರ ಮೋದಿ ಅವರು ಬೆಳಗ್ಗೆ 9 ಗಂಟೆಗೆ ಏರೋ ಇಂಡಿಯಾಗೆ ಚಾಲನೆ ನೀಡಿದರು.
ರಕ್ಷಣಾ ಇಲಾಖೆಯ ವಿವಿಧ ಗಣ್ಯರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಸ್ವಾಗತಿಸಿದ್ದು, ರಕ್ಷಣೆ ಹಾಗೂ ವಿಮಾನಯಾನ ಕ್ಷೇತ್ರದಲ್ಲಿ `ಮೇಕ್ ಇನ್ ಇಂಡಿಯಾ' ಯೋಜನೆಗಳ ಮೂಲಕ ಹೊಸ ಸಂಚಲನ ತರುವ ಇಂದಿನ ಏರ್ ಷೋ ನಿರೀಕ್ಷೆ ಮೂಡಿಸಿದೆ. ವಿಶ್ವದ ಸುಮಾರು 500 ಕಂಪನಿಗಳು ಏರೋಷೋನಲ್ಲಿ ಪಾಲ್ಗೊಂಡಿದ್ದು, ಉದ್ಘಾಟನಾ ಕಾರ್ಯಕ್ರಮದಲ್ಲಿ 70ಕ್ಕೂ ಅಧಿಕ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.
ಫೆ.18ರಿಂದ 22ರವರೆಗೆ ನಡೆಯಲಿರುವ ಏಷ್ಯಾದ ದೊಡ್ಡ ವಿಮಾನ ಪ್ರದರ್ಶನವು ಬುಧವಾರ ಮಧ್ಯಾಹ್ನದ ಬಳಿಕ ಸಾರ್ವಜನಿಕರಿಗೆ ತೆರೆದಿರುತ್ತದೆ. ಬುಧವಾರ ಬೆಳಗ್ಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ವಿದೇಶಿ ಗಣ್ಯರಿಗಾಗಿ ಎರಡೂವರೆ ಗಂಟೆಗಳ ವಿಶೇಷ ಪ್ರದರ್ಶನ ಏರ್ಪಡಿಸಲಾಗಿದೆ. ಈ ಸಂದರ್ಭದಲ್ಲಿ ಭಾರತದ ವಾಯುಸೇನೆಯ ಶಕ್ತಿ ಪ್ರದರ್ಶನವಾಗಲಿದೆ. ಪ್ರದರ್ಶನ ಮೇಳ ದಲ್ಲಿ ಸುಮಾರು 32 ರಾಷ್ಟ್ರಗಳ ಉದ್ದಿಮೆಗಳು ಭಾಗವಹಿಸಿವೆ.
ಈ ಬಾರಿಯ `ಏರೋ ಇಂಡಿಯಾ'ವನ್ನು `ಮೇಕ್ ಇನ್ ಇಂಡಿಯಾ' ಯೋಜನೆಗೆ ಪೂರಕವಾಗಿ ಬಳಸಿಕೊಳ್ಳಲು ಕೇಂದ್ರ ಸರ್ಕಾರ ನಿರ್ಧರಿಸಿರುವುದರಿಂದ ಅಮೆರಿಕ, ಫ್ರಾನ್ಸ್, ಇಂಗ್ಲೆಂಡ್ ಹಾಗೂ ಇಸ್ರೇಲ್ ದೇಶಗಳ ರಕ್ಷಣೆ ಹಾಗೂ ವಿಮಾನಯಾನ ಕ್ಷೇತ್ರಗಳ ಉದ್ದಿಮೆಗಳಿಂದ ದೊಡ್ಡ ಪ್ರಮಾಣದಲ್ಲಿ ಬಂಡವಾಳ ಹೂಡಿಕೆ ಹರಿದುಬರುವ ನಿರೀಕ್ಷೆಯಿದೆ.
ನೆರೆಯ ಚೀನಾದ ಹಿರಿಯ ಸೇನಾಧಿಕಾರಿಗಳು ಕೂಡ ಭಾಗವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ. ಹಿಂದಿನ ಏರೋ ಇಂಡಿಯಾದಲ್ಲಿಯೂ ಚೀನಾ ಪ್ರತಿನಿಧಿಗಳು ಮೊದಲ ಬಾರಿಗೆ ಭಾಗವಹಿಸಿದ್ದರು. ವಿದೇಶಿ ವಿಮಾನ ಸಂಸ್ಥೆಗಳ ಪ್ರದರ್ಶನವು ಬುಧವಾರ ಮಧ್ಯಾಹ್ನದ ನಂತರ ಪ್ರಾರಂಭವಾಗುತ್ತದೆ. 72 ವಿಮಾನ, ಹೆಲಿಕಾಪ್ಟರ್ ಹಾಗೂ ಯುದ್ಧ ವಿಮಾನಗಳ ಪ್ರದರ್ಶನ ನಡೆಯಲಿದೆ. ಇದರಲ್ಲಿ ಅಮೆರಿಕ, ಫ್ರಾನ್ಸ್ ಹಾಗೂ ಇಂಗ್ಲೆಂಡ್‍ನ ಯುದ್ಧ ವಿಮಾನಗಳ ಪ್ರದರ್ಶನ ದೊಡ್ಡ ಪ್ರಮಾಣದಲ್ಲಿರುತ್ತದೆ.
Advertisement