
ನವದೆಹಲಿ: ಗೌಪ್ಯ ಮಾಹಿತಿಯನ್ನೊಳಗೊಂಡ ಕೇಂದ್ರ ಸರ್ಕಾರದ ಮಹತ್ವದ ದಾಖಲೆಗಳನ್ನು ಕದ್ದು ರಹಸ್ಯವಾಗಿ ತೈಲ ಕಂಪೆನಿಗಳು ಹಾಗೂ ಸರ್ಕಾರೇತರ ಸಲಹೆಗಾರರಿಗೆ ಒದಗಿಸುತ್ತಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ನಿವೃತ್ತ ಪತ್ರಕರ್ತ ಶಂತನು ಸೈಕಿಯಾ ಸೇರಿದಂತೆ ಬಂಧಿತರ ಸಂಖ್ಯೆ 7ಕ್ಕೇರಿದೆ. ದೆಹಲಿ ಪೊಲೀಸರು ಈ ಪ್ರಕರಣದಲ್ಲಿ ರಿಲಯನ್ಸ್ ಇಂಡಸ್ಟ್ರೀಸ್‌ನ ಒಬ್ಬ ಉದ್ಯೋಗಿ ಹಾಗೂ ತೈಲ ಖಾತೆ ಸಚಿವಾಲಯದ ಇಬ್ಬರು ಸಿಬ್ಬಂದಿ ಸಹಿತ ೫ ಮಂದಿಯನ್ನು ಗುರುವಾರ ಬಂಧಿಸಿದ್ದರು. ಶಂತನು ಸೈಕಿಯಾ ಸದ್ಯ ಎನರ್ಜಿ ಪೋರ್ಟಲ್ ಎಂಬ ಸಂಸ್ಥೆ ನಡೆಸುತ್ತಿದ್ದು, ಕಡತಗಳನ್ನು ಸಂಬಂಧಪಟ್ಟವರಿಗೆ ತಲುಪಿಸುತ್ತಿದ್ದನು ಎಂದು ಆರೋಪಿಸಲಾಗಿದೆ ಜೊತೆಗೆ ಪ್ರಯಾಸ್ ಜೈನ್ ಎಂಬವರನ್ನೂ ಬಂಧಿಸಲಾಗಿದೆ.
ದೇಶದ ಮಹತ್ವದ ದಾಖಲೆಗಳನ್ನು ಕದ್ದು ತೈಲ ಕಂಪೆನಿ ಹಾಗೂ ಖಾಸಗಿ ಸಲಹೆಗಾರರಿಗೆ ಮಾರಾಟ ಮಾಡಿ ಹಣಗಳಿಸುತ್ತಿದ್ದ ಈ ದಂಧೆ ಕಳೆದ ಕೆಲವು ತಿಂಗಳಿನಿಮದ ನಡೆದಿತ್ತು. ಈ ವಿದ್ರೋಹದ ವ್ಯವಹಾರದಲ್ಲಿ ಸುಮಾರು 9 ತೈಲ ಕಂಪೆನಿಗಳು ಭಾಗಿಯಾಗಿರುವ ಬಗ್ಗೆ ಮಾಹಿತಿಯಿದೆ. ಹಾಗೆಯೇ ಇನ್ನೂ ಅನೇಕರು ಈ ದಂಧೆಯಲ್ಲಿ ತೊಡಗಿಕೊಂಡಿರುವ ಬಗ್ಗೆಯೂ ಮಾಹಿತಿ ದೊರೆತಿದೆ.
ತನಿಖೆ ಮುಂದುವರಿದಂತೆ ಇನ್ನೂ ಸಾಕಷ್ಟು ಆರೋಪಿಗಳು ಬಂಧನಕ್ಕೊಳಗಾಗುವ ಸಾಧ್ಯತೆ ದಟ್ಟವಾಗಿದೆ ಎಂದು ದೆಹಲಿ ಪೊಲೀಸರು ಹೇಳಿದ್ದಾರೆ. ನಿನ್ನೆ ದೆಹಲಿಯಾದ್ಯಂತ ಹಲವು ಕಚೇರಿಗಳ ಮೇಲೆ ಏಕಕಾಲಕ್ಕೆ ಪೊಲೀಸರು ದಾಳಿ ನಡೆಸಿದ್ದರು.
Advertisement