
ಇಂದೋರ್: ಭಾರತ ಮತ್ತು ಅಮೇರಿಕ ನಡುವಿನ ಅಣು ಒಪ್ಪಂದವೂ ಸೇರಿದಂತೆ ಹಲವಾರು ವಿಷಯಗಳ ನಿಲುವಿನಲ್ಲಿ ಯು-ತಿರುವ ತೆಗೆದುಕೊಂಡಿರುವ ಬಿಜೆಪಿ ನಾಯಕತ್ವದ ಎನ್ ಡಿ ಎ ಸರ್ಕಾರವನ್ನು ಕಾಂಗ್ರೆಸ್ ಪಕ್ಷದ ಪ್ರಧಾನ ಕಾರ್ಯದರ್ಶಿ ದಿಗ್ವಿಜಯ್ ಸಿಂಗ್ ತೀವ್ರ ತರಾಟೆಗೆ ತೆಗೆದುಕೊಂಡಿದ್ದಾರೆ.
"ಕಾಂಗ್ರೆಸ್ ನಾಯಕತ್ವದ ಯುಪಿಎ ಸರ್ಕಾರದ ಸಮಯದಲ್ಲಿ ಭಾರತ ಮತ್ತು ಅಮೇರಿಕಾ ನಡುವಿನ ನಾಗರಿಕ ಅಣು ಒಪ್ಪಂದವನ್ನು ದೇಶದ ಹಿತಾಸಕ್ತಿಗೆ ವಿರೋಧ ಎಂದು ಬಿಜೆಪಿ ಟೀಕಿಸಿತ್ತು. ನಂತರ ಬಿಜೆಪಿ ಪಕ್ಷದ ಸಲಹೆಗಳೊಂದಿಗೆ ಒಪ್ಪಂದಕ್ಕೆ ತಿದ್ದುಪಡಿಯನ್ನು ತಂದಿದ್ದೆವು. ಇದರ ಹೊರತಾಗಿಯೂ ಬಿಜೆಪಿ ಅದನ್ನು ವಿರೋಧಿಸಿ ಯುಪಿಎ ಸರ್ಕಾರವನ್ನು ಉರುಳಿಸಲು ಪ್ರಯತ್ನಿಸಿತ್ತು" ಎಂದು ಇಂದೋರ್ ನ ಪ್ರೆಸ್ ಕ್ಲಬ್ ನಲ್ಲಿ ವರದಿಗಾರರಿಗೆ ತಿಳಿಸಿದ್ದಾರೆ.
"ಆಗ ಬಿಜೆಪಿ ಸಲಹೆ ಮೇರೆ ನಾವು ತೆಗೆದು ಹಾಕಿದ್ದ ಒಪ್ಪಂದದ ಒಂದು ನಿಯಮವನ್ನು, ಈಗ ಬಿಜೆಪಿ ಬಹುಮತ ಸರ್ಕಾರ ಜಾರಿಗೆ ತರಲು ಒಪ್ಪಿಕೊಂಡಿದೆ" ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ದೂರಿದ್ದಾರೆ.
ಭಾರತದ ಸಾರ್ವಭೌಮತೆ ಮತ್ತು ಹಿತಾಸಕ್ತಿಗೆ ಧಕ್ಕೆಯಾಗದಂತೆ ಅಣು ಒಪ್ಪಂದವನ್ನು ಸಿದ್ಧಪಡಿಸಬೇಕು ಎಂದು ಎನ್ ಡಿ ಎ ಸರ್ಕಾರವನ್ನು ಆಗ್ರಹಿಸಿದ್ದಾರೆ.
ಇದೇ ಅಲ್ಲದೆ ಮೇ ೨೧೦೪ ರಲ್ಲಿ ಅಧಿಕಾರಕ್ಕೆ ಬಂದ ನಂತರ ಇನ್ನೂ ಹಲವಾರು ವಿಷಯಗಳಲ್ಲಿ ಸರಕಾರ ಯು ಟರ್ನ್ ತೆಗೆದುಕೊಂಡಿದೆ ಎಂದು ದೂರಿದ್ದಾರೆ.
ಬಿಜೆಪಿ ಅಭಿವೃದ್ಧಿ ಹೆಸರಿನಲ್ಲಿ ಲೋಕಸಭಾ ಚುನಾವಣೆಯಲ್ಲಿ ಮತಯಾಚಿಸಿದ್ದರು ಆದರೆ ಈಗ ಸಂಘಪರಿವಾರದವರು ಹಿಂದೂ ರಾಷ್ಟ್ರ, ಧರ್ಮದ ಮತಾಂತರ, ಘರ್ ವಾಪಸಿ, ಲವ್ ಜಿಹಾದ್ ಮತ್ತು ನಾಥುರಾಮ್ ಘೋಡ್ಸೆ ದೇವಾಲಯ ಕಟ್ಟುವುದರ ಬಗ್ಗೆ ಮಾತನಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.
Advertisement