ಭಾರತೀಯ ಸರ್ಕಾರಕ್ಕೆ ಡ್ರೋನ್ ಮಾರಿರುವುದನ್ನು ಅಲ್ಲಗೆಳೆದ ಚೈನಾ ಸಂಸ್ಥೆ ಡಿಜೆಐ
ಪಾಕಿಸ್ತಾನ ಹೊಡೆದುರುಳಿಸಿದ ಡ್ರೋನ್ ನ ಉತ್ಪಾದಕ ಸಂಸ್ಥೆ ಡಿಜೆಐ ಯಾವುದೇ ಸರ್ಕಾರಿ ಸಂಸ್ಥೆಗಳಿಗೆ ಮಾರಾಟ ಮಾಡಿರುವುದನ್ನು ಅಲ್ಲಗೆಳೆದಿದೆ.
ದೆಹಲಿ ಮೂಲದ ಇಂಗ್ಲಿಶ್ ಪತ್ರಿಕೆಗೆ ನೀಡಿರುವ ಹೇಳಿಕೆಯಲ್ಲಿ ಚೈನಾ ಮೂಲದ ಡಿಜೆಐ ಉತ್ಪಾದಿಸುವ ಡ್ರೋನ್ ಗಳು ಮದುವೆ ಮತ್ತು ಇತರ ವಾಣಿಜ್ಯೋದ್ಯಮ ಕಾರ್ಯಕ್ರಮಗಳಿಗೆ ಮಾತ್ರ ಎಂದು ತಿಳಿಸಿದೆ.
"ನಾವು ಯಾವುದೇ ಸರ್ಕಾರಿ ಸಂಸ್ಥೆಗಳಿಗೂ ನೇರವಾಗಿ ಮಾರಾಟ ಮಾಡುವುದಿಲ್ಲ, ಆದರೆ ನಮ್ಮ ಅಂತರ್ಜಾಲ ತಾಣ ಅಥವಾ ಪ್ರಾದೇಶಿಕ ಮಾರಾಟಗಾರರಿಂದ ಕೊಂಡಿರುವ ಸಾಧ್ಯತೆಯಿದೆ ಎಂದು ತಿಳಿಸಿದೆ. ಸೃಜನಾತ್ಮಕ ಮತ್ತು ಹೊಸತನದ ಉದ್ದೇಶಗಳಿಗೆ ನಾವು ಡ್ರೋನ್ ಗಳನ್ನು ತಯಾರಿಸುತ್ತೇವೆ. ಅವುಗಳು ಕೃಷಿ, ಮದುವೆ ವಿಡಿಯೋ ಚಿತ್ರೀಕರಣ, ರಿಯಲ್ ಎಸ್ಟೇಟ್ ಇತ್ಯಾದಿಗಳಿಗೆ ಬಳಕೆಯಾಗುತ್ತವೆ. ಮಿಲಿಟರಿ ಅಥವಾ ಭದ್ರತಾ ಚಟುವಟಿಕೆಗಳ ಬಗ್ಗೆ ನಾವು ಗಮನ ಹರಿಸಿಲ್ಲ" ಎಂದು ಡಿಜಿಐ ವಕ್ತಾರ ಮೈಕೆಲ್ ಪೆರ್ರಿ ತಿಳಿಸಿದ್ದಾರೆ.
ಮಾಯಾಂಕ್ ಚರ್ಚಾ ಮತ್ತು ಅಮಿತ್ ನಿಚಾನಿ ಡಿಜೆಐ ಉತ್ಪನ್ನಗಳ ಅಧಿಕೃತ ಮಾರಾಟಗಾರರಾಗಿದ್ದು, ಡ್ರೋನ್ ಕೊಳ್ಳಲು ಭಾರತಿಯ ಸೇನೆ ತಮ್ಮನ್ನೆಂದೂ ಕರೆದಿಲ್ಲ ಎಂದು ಅವರು ತಿಳಿಸಿದ್ದಾರೆ.
ಮಯಾಂಕ್ ತಿಳಿಸುವ ಪ್ರಕಾರ ತಾವು ಡೀಲ್ ಮಾಡುವ ಡ್ರೋನ್ ಗಳು ಆಟಿಕೆ ರೀತಿಯವು. ಮಿಲಿಟರಿ ಕಾರ್ಯಾಚರಣೆಗಳಿಗೆ ಸೂಕ್ತವಾದುವಲ್ಲ. ಇವುಗಳ ಬ್ಯಾಟರಿ ೧೫ ನಿಮಿಷಗಳಿಗೂ ಹೆಚ್ಚು ಉಳಿಯುವುದಿಲ್ಲ ಎಂದು ತಿಳಿಸಿದ್ದಾರೆ,
ಭಾರತೀಯ ಗಡಿ ನಿಯಂತ್ರಣಾ ರೇಖೆಯ ಬಳಿ ಭಾರತ ಬೇಹುಗಾರಿಕೆ ನಡೆಸುತ್ತಿದೆ ಎಂದು ಆರೋಪಿಸಿ ಅಲ್ಲಿ ಹಾರಾಡುತ್ತಿದ್ದ ಡ್ರೋನ್ ಒಂದನ್ನು ಹೊಡೆದುರುಳಿಸಿದ್ದ ಪಾಕಿಸ್ತಾನ ನೆನ್ನೆ ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪಾಕಿಸ್ತಾನದ ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿತ್ತು. ಆದರೆ ಪಾಕಿಸ್ತಾನ ಹೊಡೆದುರುಳಿಸಿದ ಡ್ರೋನ್ ತಮಗೆ ಸೇರಿದ್ದಲ್ಲ ಎಂದು ಭಾರತೀಯ ಸೇನೆ ಮತ್ತು ಭಾರತೀಯ ವಾಯುಪಡೆ ತಿಳಿಸಿದ್ದವು.
Follow KannadaPrabha channel on WhatsApp
KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ