
ಚೆನ್ನೈ: ಶ್ರೀಲಂಕಾಕ್ಕೆ ಪ್ರಧಾನಿ ನರೇಂದ್ರ ಮೋದಿ ಭೇಟಿ ನೀಡುತ್ತಿರುವ ಹಿನ್ನಲೆಯಲ್ಲಿ, ಲಂಕಾದ ತಮಿಳು ನಾಯಕ ಮತ್ತು ಉತ್ತರ ಪ್ರಾಂತ್ಯದ ಪುರಸಭಾ ಸದಸ್ಯ ಎಂ ಕೆ ಶಿವಾಜಿಲಿಂಗಮ್ ಅವರು ತಮಿಳರ ಜನಾಂಗೀಯ ವಿವಾದಕ್ಕೆ ಭಾರತ, ಲಂಕಾ, ಅಮೇರಿಕಾ, ವಿಶ್ವಸಂಸ್ಥೆ ಮತ್ತು ಯುರೋಪಿಯನ್ ಯೂನಿಯನ್ ಇವುಗಳನ್ನು ಗಣನೆಗೆ ತೆಗೆದುಕೊಂಡು ಶಾಶ್ವತ ಪರಿಹಾರಕ್ಕೆ ಮಧ್ಯಸ್ಥಿಕೆ ವಹಿಸಬೇಕೆಂದು ಪ್ರಧಾನಿ ಮೋದಿ ಅವರಿಗೆ ಆಗ್ರಹಿಸಿದ್ದಾರೆ.
ಹಾಗೆಯೇ ತಮಿಳರಿಂದ ಬಲವಂತವಾಗಿ ಕಸಿದುಕೊಂಡ ಜಮೀನನ್ನು ಹಿಂದಿರುಗಿಸಲು ಹಾಗೂ ಈಶಾನ್ಯದಲ್ಲಿ ಮಿಲಿಟರಿ ಪಡೆಯನ್ನು ವಾಪಸ್ ಕರೆಸಿಕೊಳ್ಳಲು ಕೊಲೊಂಬೋ ಜೊತೆಗೆ ಮಾತುಕತೆ ನಡೆಸಿ ತಮಿಳರಿಗೆ ತಕ್ಷಣ ಪರಿಹಾರ ನೀಡಬೇಕೆಂದು ಮೋದಿ ಅವರಿಗೆ ಕೇಳಿದ್ದಾರೆ. ಮತ್ತು ಎಲ್ಲ ತಮಿಳು ರಾಜಕೀಯ ಖೈದಿಗಳನ್ನು, ಹಾಗೂ ಯುದ್ಧದ ವೇಳೆಯಲ್ಲಿ ಕಾಣೆಯಾದ-ಬಂಧಿಯಾದ ತಮಿಳರ ಬಗ್ಗೆ ಮಾಹಿತಿಯನ್ನು ಬಿಡುಗಡೆ ಮಾಡಲು ಶ್ರೀಲಂಕಾದ ಜೊತೆ ಮಾತುಕತೆ ನಡೆಸಲು ಮನವಿ ಮಾಡಿದ್ದಾರೆ.
ಶ್ರೀಲಂಕಾದ ಮೋದಿ ಭೇಟಿಯನ್ನು ಅಭಿನಂದಿಸಿರುವ ಶಿವಲಿಂಗಮ್ "ಮಹತ್ಮಾ ಗಾಂಧಿ ನವೆಂಬರ್ ೨೧ ೧೯೨೭ ರಲ್ಲಿ ಜಾಫ್ನಾಗೆ ಭೇಟಿ ನೀಡಿದಷ್ಟೇ ಭರವಸೆ ನಿಮ್ಮ ಭೇಟಿಯೂ ಹುಟ್ಟಿಸಿದೆ. ನಮ್ಮ ಸಂಬಂಧ ಇನ್ನು ಬಲಗೊಳ್ಳಲಿದೆ" ಎಂದಿದ್ದಾರೆ.
ಹಾಗೆಯೆ ತಮಿಳರು ತಮ್ಮ ಜೀವನವನ್ನು ಮತ್ತೆ ಕಟ್ಟಿಕೊಳ್ಳಲು ತಮಿಳುನಾಡಿನಿಂದ ತಮಿಳು ಮಾತನಾಡುವ ವೈದ್ಯರನ್ನು, ಇಂಗ್ಲಿಶ್ ಮಾಹಿತಿ ತಂತ್ರಜ್ಞಾನ ಕಲಿಸುವ ಉಪನ್ಯಾಸಕರನ್ನು ಕಳುಹಿಸಿಕೊಡುವಂತೆ ಮನವಿ ಮಾಡಿದ್ದಾರೆ.
Advertisement