
ಮೆಲ್ಬರ್ನ್: ಭಾರತೀಯ ಮೂಲದ ಡೇನಿಯಲ್ ಮೂಖೆ ಭಗವದ್ಗೀತೆಯ ಹೆಸರಿನಲ್ಲಿ ಪ್ರಮಾಣವಚನ ಸ್ವೀಕರಿಸಿದ ಮೊದಲ ಆಸ್ಟ್ರೇಲಿಯನ್ ಸಂಸದ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಲೇಬರ್ ಪಕ್ಷದಿಂದ ಆಯ್ಕೆಯಾಗಿರುವ ಮೂಖಿ (೩೨) ನ್ಯೂ ಸೌಥ್ ವೇಲ್ಸ್ ಸಂಸತ್ತಿನ ಮೇಲ್ಮನೆಯಲ್ಲಿ ಸ್ಟೀವಾ ವಾ ಅವರನ್ನು ಬದಲಿಸಿದ್ದಾರೆ. ಭಾರತೀಯ ಮೂಲದ ಮೊದಲ ಆಸ್ಟ್ರೇಲಿಯನ್ ಸಂಸದ ಎಂಬ ಹೆಗ್ಗಳಿಕೆಯೂ ಇವರದ್ದು.
"ಇದು ವರ್ಣಿಸಲಾರದ ಗೌರವ. ಗೀತೆಯ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸುತ್ತಿರುವ ಮೊದಲ ಆಸ್ಟ್ರೇಲಿಯನ್ ಸಂಸದನಾಗಿ ವಿನೀತನಾಗಿದ್ದೇನೆ" ಎಂದಿದ್ದಾರೆ ಮೂಖಿ. "ಇದು ಸಾಧ್ಯವಾದದ್ದು ಏಕೆಂದರೆ ನಮ್ಮ ತಂದೆಯವರ ಸೇವೆಗಳನ್ನು ಆಸ್ಟ್ರೇಲಿಯಾ ಗೌರವಿಸುತ್ತದೆ. ಬೈಬಲ್, ಕುರಾನ್ ಮತ್ತು ದ ತೋರಾಹ್ ಇವುಗಳ ಸಾಲಿನಲ್ಲಿ ಗೀತೆ ವಿಶ್ವದ ಅತ್ಯುತ್ತಮ ಧಾರ್ಮಿಕ ಗ್ರಂಥಗಳಲ್ಲಿ ಒಂದು" ಎಂದು ಕೂಡ ಹೇಳಿದ್ದಾರೆ.
ಮೂಖಿ ಅವರ ಪೋಷಕರು ಪಂಜಾಬಿನಿಂದ ೧೯೭೩ ರಲ್ಲಿ ಆಸ್ಟ್ರೇಲಿಯಾಕ್ಕೆ ತೆರಳಿದ್ದರು. ಬ್ಲ್ಯಾಕ್ ಟೌನ್ ಹೊರವಲಯದಲ್ಲಿ ಜನಿಸಿದ್ದ ಮೂಖಿ ಮೂರು ವಿಶ್ವವಿದ್ಯಾಲಯ ಪದವಿಗಳನ್ನು ಹೊಂದಿದ್ದಾರೆ ಹಾಗೂ ಸದ್ಯಕ್ಕೆ ಯೂನಿಯನ್ ಗಳು, ಸಮುದಾಯ ಸಂಘಗಳು, ಚಾರಿಟಿ ಸಂಸ್ಥೆಗಳಿಗೆ ಸಲಹೆಗಾರರಾಗಿದ್ದಾರೆ.
Advertisement