ಕರ್ನಾಟಕಕ್ಕೆ ಚೀನಾದ ಹೊಸ ಸೋದರಿ

ಚೀನಾದ ಸಿಚುವಾನ್ ಮತ್ತು ಕರ್ನಾಟಕ ಇನ್ನು `ಸಿಸ್ಟರ್ ಸ್ಟೇಟ್ಸ್'. ಎರಡೂ ರಾಜ್ಯಗಳ ನಡುವೆ ಗೆಳೆತನ, ಸಹಕಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಂತಹುದೊಂದು ಒಪ್ಪಂದಕ್ಕೆ ಭಾರತ ಮತ್ತು ಚೀನಾ..
ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಪ್ರಧಾನಿ ಲಿ ಕೆಖಿಯಾಂಗ್
ಪ್ರಧಾನಿ ನರೇಂದ್ರ ಮೋದಿ ಮತ್ತು ಚೀನಾ ಪ್ರಧಾನಿ ಲಿ ಕೆಖಿಯಾಂಗ್

ಬೀಜಿಂಗ್: ಚೀನಾದ ಸಿಚುವಾನ್ ಮತ್ತು ಕರ್ನಾಟಕ ಇನ್ನು `ಸಿಸ್ಟರ್ ಸ್ಟೇಟ್ಸ್'. ಎರಡೂ ರಾಜ್ಯಗಳ ನಡುವೆ ಗೆಳೆತನ, ಸಹಕಾರವನ್ನು ಉತ್ತೇಜಿಸುವ ನಿಟ್ಟಿನಲ್ಲಿ ಇಂತಹುದೊಂದು ಒಪ್ಪಂದಕ್ಕೆ ಭಾರತ ಮತ್ತು ಚೀನಾ ಶುಕ್ರವಾರ ಸಹಿ ಹಾಕಿವೆ.

ಚೀನಾ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಚೀನಾದ ಜತೆ ಈ ಸಿಸ್ಟರ್ ಸ್ಟೇಟ್ಸ್ ಸೇರಿದಂತೆ 24 ಒಪ್ಪಂದಗಳನ್ನು ಮಾಡಿಕೊಂಡಿದ್ದಾರೆ. ಈ ದಾಖಲೆ ಪ್ರಮಾಣದ ಒಪ್ಪಂದಗಳ ಒಟ್ಟು ಮೌಲ್ಯ ಬರೋಬ್ಬರಿ ರು.636 ಶತಕೋಟಿ. ಈ ಒಪ್ಪಂದಗಳ ಮೂಲಕ ರೈಲ್ವೆ, ಶಿಕ್ಷಣ, ನಗರಾಭಿವೃದ್ಧಿ, ಬಾಹ್ಯಾಕಾಶ ಸೇರಿದಂತೆ ಪ್ರಮುಖ ಕ್ಷೇತ್ರಗಳಲ್ಲಿ ಭಾರತದೊಂದಿಗೆ ಸಹಕಾರ ನೀಡುವುದಾಗಿ ಚೀನಾ ಭರವಸೆ ನೀಡಿದೆ.

-ಸಿಸ್ಟರ್ ಸ್ಟೇಟ್, ಸಿಸ್ಟರ್ ಸಿಟಿ
ಸಿಸ್ಟರ್ ಸ್ಟೇಟ್ ಮತ್ತು ಸಿಸ್ಟರ್ ಸಿಟಿ ಸಂಬಂಧವನ್ನು ಒಳಗೊಂಡ ನಾಲ್ಕು ಒಪ್ಪಂದಗಳಿಗೂ ಭಾರತ-ಚೀನಾ ಸಹಿ ಹಾಕಿದೆ. ಕರ್ನಾಟಕ ಮತ್ತು ಸಿಚುವಾನ್ ಪ್ರಾಂತ್ಯ, ಚೆನ್ನೈ ಮತ್ತು ಚಾಂಗ್‍ಕಿಂಗ್, ಹೈದರಾಬಾದ್ ಮತ್ತು ಕಿಂಗ್‍ಡಾವ್, ಔರಂಗಾಬಾದ್ ಮತ್ತು ಡನ್‍ಹುವಾಂಗ್ ನಡುವೆ ಸಹಕಾರ ಮೂಡಿಸುವ ನಿಟ್ಟಿನಲ್ಲಿ ಈ ಒಪ್ಪಂದಗಳು ನಡೆದವು.

- ನಿಮ್ಮ ನಿಲುವು ಮರುಪರಿಶೀಲಿಸಿ

ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಆರ್ಥಿಕ ಕಾರಿಡಾರ್ ನಿರ್ಮಿಸಲು ಉದ್ದೇಶಿಸಿರುವ ಚೀನಾದ ನಿರ್ಧಾರದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಬೆನ್ನಲ್ಲೇ ಪ್ರಧಾನಿ ಮೋದಿ ಅವರು, ಇನ್ನೂ ಕೆಲವು ವಿಚಾರಗಳಲ್ಲಿ ಚೀನಾವು ತನ್ನ ನಿಲುವನ್ನು ಮರುಪರಿಶೀಲಿಸಬೇಕು ಎಂದು ಆಗ್ರಹಿಸಿದ್ದಾರೆ. ಶುಕ್ರವಾರ ಚೀನಾ ಪ್ರಧಾನಿ ಲಿ ಕೆಖಿಯಾಂಗ್ ಅವರೊಂದಿಗೆ ನಡೆದ ಮಾತುಕತೆ ವೇಳೆ ಮೋದಿ ಅವರು ಗಡಿ, ಭಯೋತ್ಪಾದನೆ, ಪಾಕಿಸ್ತಾನ ಸೇರಿದಂತೆ ಅನೇಕ ವಿಚಾರಗಳನ್ನು ಪ್ರಸ್ತಾಪಿಸಿದ್ದಾರೆ. ಸ್ಟೇಪಲ್ಡ್ ವೀಸಾ ಬಗ್ಗೆ ಮಾತನಾಡಿದ ಅವರು, ಎರಡೂ ರಾಷ್ಟ್ರಗಳು ಪರಸ್ಪರರ ಹಿತಾಸಕ್ತಿಗೆ ಸಂವೇದನಾಶೀಲರಾಗಿರಬೇಕು ಎಂದರು.

-ನಮಗೆ ಐತಿಹಾಸಿಕ ಹೊಣೆಗಾರಿಕೆಯಿದೆ
ಇತ್ತೀಚೆಗಿನ ಕೆಲವು ದಶಕಗಳಿಂದ ಭಾರತ- ಚೀನಾ ಸಂಬಂಧವು ಸಂಕೀರ್ಣವಾಗತೊಡಗಿದೆ. ಈ ಸಂಬಂಧವನ್ನು ನಾವು ಪರಸ್ಪರರ ಸಾಮರ್ಥ್ಯದ ಮೂಲವನ್ನಾಗಿ ಬಳಸಬೇಕು ಮತ್ತು ವಿಶ್ವಕ್ಕೇ ಇದರಿಂದ ಒಳ್ಳೆಯದಾಗಬೇಕು. ಇಂತಹುದೊಂದು ಮಹತ್ವದ ಮತ್ತು ಐತಿಹಾಸಿಕ ಹೊಣೆಗಾರಿಕೆ ನಮ್ಮ ಹೆಗಲ ಮೇಲಿದೆ ಎಂದಿದ್ದಾರೆ ಪ್ರಧಾನಿ. ಇದೇ ವೇಳೆ, ಗಡಿ ವಿವಾದದ ಬಗ್ಗೆಯೂ ಮಾತನಾಡಿದ ಅವರು, ಎರಡೂ ರಾಷ್ಟ್ರಗಳು ಸರಿಯಾದ, ನ್ಯಾಯಯುತ, ಪರಸ್ಪರ ಒಪ್ಪಿಕೊಳ್ಳುವಂತಹ ಪರಿಹಾರಕ್ಕೆ ಬರಲು ಒಪ್ಪಿದ್ದೇವೆ ಎಂದರು. ಜತೆಗೆ, ಗಡಿ ಪ್ರದೇಶದಲ್ಲಿ ಶಾಂತಿ, ಸೌಹಾರ್ದತೆಯನ್ನು ಕಾಪಾಡಲು ಬದಟಛಿವಾಗಿದ್ದೇವೆ ಎಂದೂ ಹೇಳಿದರು.

-ಪಾಕ್‍ಗೆ ಮೋದಿ ಎಚ್ಚರಿಕೆ
ಚೀನಾ ಭೇಟಿಯ 2ನೇ ದಿನವಾದ ಶುಕ್ರವಾರ ಬೀಜಿಂಗ್ ನಲ್ಲಿರುವ ಟಿಂಗ್‍ಶುವಾ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮೋದಿ ಭಾಷಣ ಮಾಡಿದರು. ಈ ವೇಳೆ ಭಯೋತ್ಪಾದನೆ ಬಗ್ಗೆ ಪ್ರಸ್ತಾಪಿಸಿದ ಅವರು, ಪ್ರತ್ಯೇಕತಾವಾದ ಮತ್ತು ಭಯೋತ್ಪಾದನೆಯ ಕಂಬಂಧ ಬಾಹುಗಳು ಎಲ್ಲೆಡೆ ವ್ಯಾಪಿಸುತ್ತಿದೆ. ಇದು ಭಾರತಕ್ಕೆ ಮಾತ್ರವಲ್ಲ, ಚೀನಾಗೂ  ಅಪಾಯ ಎಂದರು. ಜತೆಗೆ, ನಮ್ಮ ಎರಡೂ ರಾಷ್ಟ್ರಗಳಿಗೆ ನೆರೆರಾಷ್ಟ್ರವೇ ಭಯೋತ್ಪಾದನೆಯ ಮೂಲ ಎಂದೂ ಹೇಳುವ ಮೂಲಕ ಮೋದಿ ಪಾಕಿಸ್ತಾನಕ್ಕೆ ಪರೋಕ್ಷ ಎಚ್ಚರಿಕೆ ನೀಡಿದರು.

- ಇ-ವೀಸಾ ಸೌಲಭ್ಯ ವಿಸ್ತರಣೆ

ಚೀನೀ ಪ್ರವಾಸಿಗರಿಗೆ ಇ-ವೀಸಾ ಸೌಲಭ್ಯ ವಿಸ್ತರಣೆ. ಇದು ಪ್ರಧಾನಿ ಮೋದಿ ಅವರು ಚೀನೀಯರಿಗೆ ನೀಡಿದ ಕೊಡುಗೆ. ಶುಕ್ರವಾರ ಈ ಬಗ್ಗೆ ಘೋಷಿಸಿರುವ ಮೋದಿ, ವಿಶ್ವದ ಜನಸಂಖ್ಯೆಯ ಶೇ.33ರಷ್ಟು ಮಂದಿ ಒಂದೋ ಭಾರತೀಯರಾಗಿರುತ್ತಾರೆ ಅಥವಾ ಚೀನೀಯರಾಗಿರುತ್ತಾರೆ. ಆದರೂ ನಮ್ಮ ಜನರು ಪರಸ್ಪರರನ್ನು ತಿಳಿದುಕೊಂಡಿಲ್ಲ. ಅದಕ್ಕಾಗಿ ನಾನು ಚೀನೀಯರಿಗೆ ಇ-ವೀಸಾ ಸೌಲಭ್ಯ ವಿಸ್ತರಣೆ ಮಾಡುತ್ತಿದ್ದೇನೆ ಎಂದರು. ಪ್ರಧಾನಿ ಲಿ ಕೆಖಿಯಾಂಗ್ ಜತೆಗಿನ ಮಾತುಕತೆ ವೇಳೆ ಈ ಬಗ್ಗೆ ಪ್ರಸ್ತಾಪಿಸದಿದ್ದ ಮೋದಿ ಅವರು ದಿಡೀರನೆ ವೀಸಾ ಸೌಲಭ್ಯ ಘೋಷಿಸಿದ್ದು ಎಲ್ಲರ ಅಚ್ಚರಿಗೆ ಕಾರಣವಾಯಿತು.

ಏನಿದು ಸಿಸ್ಟರ್ ಸ್ಟೇಟ್?
ಇದು ಎರಡು ದೇಶಗಳ ರಾಜ್ಯಗಳು ಅಥವಾ ನಗರಗಳ ನಡುವೆ ನಡೆಯುವ ಕಾನೂನಾತ್ಮಕ ಅಥವಾ ಸಾಮಾಜಿಕ ಒಪ್ಪಂದವಾಗಿದೆ. ಎರಡೂ ರಾಜ್ಯಗಳ ನಡುವೆ ಸಾಂಸ್ಕೃತಿಕ ಮತ್ತು ವಾಣಿಜ್ಯ ಸಹಕಾರವನ್ನು ಹೆಚ್ಚಿಸಿ ಕೊಳ್ಳುವ, ವ್ಯಾಪಾರ, ಪ್ರವಾಸೋದ್ಯಮವನ್ನು ಅಬಿsವೃದಿಟಛಿಪಡಿಸುವ ಉದ್ದೇಶದಿಂದ ಇಂತಹ ಒಪ್ಪಂದ ನಡೆಯುತ್ತದೆ. ಅಮೆರಿಕ, ದಕ್ಷಿಣ ಏಷ್ಯಾ ಮತ್ತು ಆಸ್ಟ್ರೇಲಿಯಾಗಳಲ್ಲಿ ಇದಕ್ಕೆ ಸಿಸ್ಟರ್ ಸಿಟೀಸ್, ಸಿಸ್ಟರ್ ಸ್ಟೇಟ್ ಎಂಬ ಪದಗಳನ್ನು ಬಳಸಲಾಗುತ್ತದೆ.

ಚೀನಾದಲ್ಲಿ ಫ್ರೆಂಡ್‍ಶಿಪ್ ಸಿಟಿ' ಎಂದು ಕರೆಯಲಾಗುತ್ತದೆ. ಕಳೆದ ಸೆಪ್ಟೆಂಬರ್‍ ನಲ್ಲಿ ಚೀನಾ ಅಧ್ಯಕ್ಷ ಕ್ಸಿ ಜಿನ್‍ಪಿಂಗ್ ಅವರು ಭಾರತಕ್ಕೆ ಭೇಟಿ ನೀಡಿದ್ದಾಗ ಅಹಮದಾಬಾದ್ ಮತ್ತು ಗುವಾಂಗ್‍ಝೋ ನಡುವೆ ಸಿಸ್ಟರ್ ಸಿಟಿ ಒಪ್ಪಂದ ನಡೆದಿತ್ತು. ಗುಜರಾತ್ ಮತ್ತು ಗುವಾಂಗ್‍ಡಾಂಗ್ ಸಿಸ್ಟರ್ ಪ್ರಾಂತ್ಯಗಳಾಗಿ ಗುರುತಿಸಿಕೊಂಡಿದ್ದವು. 2013ರ ಅಕ್ಟೋಬರ್ ನಲ್ಲಿ ಭಾರತದ ಮೂರು ಮೆಟ್ರೋಗಳು ಚೀನಾದ ಸಿಸ್ಟರ್ ಸಿಟಿಗಳನ್ನು ಪಡೆದಿದ್ದವು. ಅವೆಂದರೆ, ದೆಹಲಿ-ಬೀಜಿಂಗ್, ಬೆಂಗಳೂರು-ಚೆಂಗ್ಡು ಮತ್ತು ಕೋಲ್ಕತಾ- ಕುನ್ಮಿಂಗ್.

ಕಳೆದ 3 ದಶಕಗಳಲ್ಲಿ ಚೀನಾ ಕಂಡ ಯಶಸ್ಸು ಜಾಗತಿಕ ಆರ್ಥಿಕತೆಯ ಸ್ವರೂಪವನ್ನೇ ಬದಲಾಯಿಸಿದೆ. ಇನ್ನು ಮುಂದಿನ ಜಾಗತಿಕ ಆರ್ಥಿಕ ಕ್ರಾಂತಿಗೆ ಭಾರತವೇ ಮುನ್ನುಡಿ ಬರೆಯಲಿದೆ.
-ನರೇಂದ್ರ ಮೋದಿ, ಪ್ರಧಾನಿ

ಗಡಿ ವಿವಾದ ಅಂತಾರಾಷ್ಟ್ರೀಯ ಕೋರ್ಟ್‍ಗೆ ಹೋಗಲಿ ದೀರ್ಘಕಾಲದಿಂದ ಇತ್ಯರ್ಥವಾಗದೇ ಬಾಕಿ ಉಳಿದಿರುವ ಭಾರತ-ಚೀನಾ ಗಡಿ ವಿವಾದವನ್ನು ಅಂತಾರಾಷ್ಟ್ರೀಯ ನ್ಯಾಯಾಲಯದಲ್ಲಿ ಬಗೆಹರಿಸಿಕೊಳ್ಳುವಂತೆ ಕೇಂದ್ರದ ಮಾಜಿ ಕಾನೂನು ಸಚಿವ, ರಾಜ್ಯಸಭೆ ಸದಸ್ಯ ರಾಮ್ ಜೇಠ್ಮಲಾನಿ ಸಲಹೆ ನೀಡಿದ್ದಾರೆ. ನಮ್ಮ ಹೋರಾಟವನ್ನು ನಾವು ಅಂತಾರಾಷ್ಟ್ರೀಯ ನ್ಯಾಯಾಲಯಕ್ಕೆ ಕೊಂಡೊಯ್ಯ ಬೇಕು. ಪ್ರಧಾನಿ ನರೇಂದ್ರ ಮೋದಿ ಅವರು ಚೀನಾಗೆ ಹೊರಡುವ ಮೊದಲು ನಾನು ಈ ಬಗ್ಗೆ ಅವರಿಗೆ ಪತ್ರ ಬರೆದಿದ್ದೇನೆ ಎಂದೂ ಅವರು ಹೇಳಿದ್ದಾರೆ. ಗಡಿ ಸಮಸ್ಯೆಗೆ ಶಾಂತಿಯುತ ಪರಿಹಾರ ಕಂಡುಕೊಳ್ಳಬೇಕು. ಬೇಕಿದ್ದರೆ ಭಾರತದ ಪರವಾಗಿ ಅಂತಾರಾಷ್ಟ್ರೀಯ ಕೋರ್ಟ್‍ನಲ್ಲಿ ನಾನು ವಾದ ಮಾಡುತ್ತೇನೆ ಎಂದಿದ್ದಾರೆ ಜೇಠ್ಮಲಾನಿ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com