ಭಾರಿ ಮಳೆಗೆ ಐವರು ಬಲಿ

ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆಯಾರ್ಭಟ ಶುಕ್ರವಾರವೂ ಮುಂದುವರಿದಿದೆ. ತುಮಕೂರು, ಮತ್ತು ಕಲಬುರಗಿಯ ಇಬ್ಬರು ಸಿಡಿಲಿಗೆ...
ಭಾರಿ ಮಳೆ : ಬೆಂಗಳೂರಿನ ಆನೆ ಪಾಳ್ಯದಲ್ಲಿ ಬಸ್ ನಿಲ್ದಾಣದ ಮೇಲೆ ಉರುಳಿದ ಮರ
ಭಾರಿ ಮಳೆ : ಬೆಂಗಳೂರಿನ ಆನೆ ಪಾಳ್ಯದಲ್ಲಿ ಬಸ್ ನಿಲ್ದಾಣದ ಮೇಲೆ ಉರುಳಿದ ಮರ
Updated on

ಬೆಂಗಳೂರು: ರಾಜ್ಯಾದ್ಯಂತ ಮುಂಗಾರು ಪೂರ್ವ ಮಳೆಯಾರ್ಭಟ ಶುಕ್ರವಾರವೂ ಮುಂದುವರಿದಿದೆ. ತುಮಕೂರು, ಮತ್ತು ಕಲಬುರಗಿಯ ಇಬ್ಬರು ಸಿಡಿಲಿಗೆ ಬಲಿಯಾದರೆ, ಬೆಂಗಳೂರು, ಹಾವೇರಿ ಹಾಗೂ ಗದಗದಲ್ಲಿ ಭಾರಿ ಮಳೆ- ಗಾಳಿಗೆ ಮರಬಿದ್ದು ಮೂವರು ಸೇರಿದಂತೆ ಒಟ್ಟು ಐವರು ಸಾವನ್ನಪ್ಪಿದ್ದು, ಹತ್ತು ಮಂದಿ ಗಾಯಗೊಂಡಿದ್ದಾರೆ.

ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಹೇರೂರು ಗ್ರಾಮದಲ್ಲಿ ಶುಕ್ರವಾರ ಸಂಜೆ ಜೋರಾಗಿ ಬೀಸಿದ ಗಾಳಿಗೆ ಹುಣಸೆ ಮರ ಉರುಳಿ ಬಿದ್ದು, ಮಳೆಯಿಂದ ರಕ್ಷಿಸಿಕೊಳ್ಳಲು ಗುಡಿಸಲಿನಲ್ಲಿ ತಂಗಿದ್ದ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ವಿಜಯಪ್ಪ ಗೋರಪ್ಪನವರ್ (42) ಮೃತ ವ್ಯಕ್ತಿ. ಮಳೆ ಬಂದಿದ್ದರಿಂದ ಜಮೀನಿನಲ್ಲಿದ್ದ ಹುಣಿಸೆ ಮರದ ಬಳಿಯ ಗುಡಿಸಲಿನಲ್ಲಿ ಕುಳಿತಿದ್ದಾರೆ. ಆಗ ಬೀಸಿದ ಬಿರುಗಾಳಿಗೆ ಮರ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ತುಮಕೂರು ಜಿಲ್ಲೆಯ ಹುಳಿಯಾರು ಹೋಬಳಿಯ ಸೀಗೆಬಾಗಿಯಲ್ಲಿ ಹೊಳೆಬಸಪ್ಪ (70) ಎಂಬುವರು ಸಿಡಿಲಿಗೆ ಬಲಿಯಾಗಿದ್ದಾರೆ. ಎಂದಿನಂತೆ ಕುರಿ ಮೇಯಿಸಿ ಮನೆಗೆ ಹಿಂದಿರುಗುತ್ತಿದ್ದಾಗ ಊರ ಸಮೀಪದ ಕೆರೆ ಬಳಿ ದುರ್ಘಟನೆ ಸಂಭವಿಸಿದೆ.

ಲಕ್ಷ್ಮೀ, ಅಮಲವ್ವ, ಸುರೇಶ ನರಿಬೋಳ, ಕಮಲಮ್ಮ, ಸುಲೋಚನಾ ದೊಡ್ಡಮನಿ ಎಂಬುವರು ಗಂಭೀರವಾಗಿ ಗಾಯಗೊಂಡಿದ್ದು, ಜೇವರ್ಗಿ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಿ, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅಲ್ಲದೆ, ಜೇವರ್ಗಿಯ ಸುಂಬಡ ಗ್ರಾಮದಲ್ಲಿ ಗಾಳಿಗೆ ಮರ ಉರುಳಿ ಲಾಲಪ್ಪ ತಂದೆ ಶಂಕ್ರೆಪ್ಪ ಎಂಬುವರ ಕಾಲು ಮುರಿದಿದೆ. ಮಹಾದೇವಪ್ಪ ಎಂಬುವರ ಆಕಳಿಗೆ ಪತ್ರಾ ಬಡಿದು ಸಾವನ್ನಪ್ಪಿದೆ. ಕಾರ್ಕಳ ತಾಲೂಕಿನ ಎಣ್ಣೆಹೊಳೆ ಹೊಸ್ಮನೆ ಎಂಬಲ್ಲಿ ಸತ್ಯಾನಾರಾಯಣ ಎಂಬುವರ ಮನೆಗೆ ಸಿಡಿಲು ಬಡಿದಿದೆ.

ಮರ ಬಿದ್ದು ಸಾವು:
ಗದಗ ಜಿಲ್ಲೆಯ ರೋಣ ತಾಲೂಕಿನ ಕೊತಬಾಳ ಗ್ರಾಮದ ಬಳಿ ಮರ ಉರುಳಿ ಗದಗ ನಿವಾಸಿ ಮಂಜುನಾಥ ಹೆಬಸೂರ (35) ಮೃತಪಟ್ಟಿದ್ದು, ಯಲ್ಲನಗೌಡ ಪಾಟೀಲ ಗಂಭೀರವಾಗಿ ಗಾಯಗೊಂಡಿದ್ದಾರೆ. ಇಬ್ಬರೂ ಬೈಕ್‍ನಲ್ಲಿ ರೋಣ ಕಡೆಗೆ ಬರುತ್ತಿದ್ದಾಗ ಘಟನೆ ಸಂಭವಿಸಿದೆ. ತುಮಕೂರು ನಗರಾದ್ಯಂತ ಧಾರಾಕಾರ ಮಳೆಯಾಗಿದೆ. ಸಂಜೆ 4 ಗಂಟೆಗೆ ಆರಂಭವಾದ ಮಳೆ ಸತತ ಗಂಟೆಗೂ ಹೆಚ್ಚು ಕಾಲ ಸುರಿದಿದೆ. ಮತ್ತೆ 6.30ಕ್ಕೆ ಆರಂಭವಾದ ಮಳೆ 7.30ರವರೆಗೆ ಭರ್ಜರಿಯಾಗಿ ಬಂದಿದೆ. ಚಿತ್ರದುರ್ಗ ನಗರದಲ್ಲಿ ಸಂಜೆ ಸುಮಾರು 45 ನಿಮಿಷ ಕಾಲ ಹಾಗೂ ಕೋಲಾರ ಜಿಲ್ಲಾದ್ಯಂತ ಶುಕ್ರವಾರ ಮಧ್ಯಾಹ್ನ ಗುಡುಗು, ಸಿಡಿಲು ಸಹಿತ ಭರ್ಜರಿ ಮಳೆಯಾಗಿದೆ.

ಕೋಲಾರ ನಗರದ ಕೋಲಾರಮ್ಮ (ಅಮಾನಿಕೆರೆ)ಯಲ್ಲಿ ಗಾಂಧಿನಗರ ನಿವಾಸಿ ಕೃಷ್ಣಪ್ಪ ಎಂಬುವರ ಎರಡು ಎಮ್ಮೆಗಳು ಸಿಡಿಲಿಗೆ ಬಲಿಯಾಗಿವೆ. ಕುಂಬಾರಹಳ್ಳಿಯ ಸಮೀಪದ ಡಾಬಾವೊಂದರ ಚಾವಣಿ ಬಿರುಗಾಳಿಗೆ ಹಾರಿದ್ದರಿಂದ ಬಾದಲ್ಲಿದ್ದ ಜನ ಭಯದಿಂದ ಓಡಿದ್ದಾರೆ. ಸೀಪುರದಲ್ಲಿ ಕೃಷ್ಣಪ್ಪ ಎಂಬುವರ ಮನೆಗೆ ಬಡಿದ ಸಿಡಿಲಿಗೆ ವಿದ್ಯುತ್ ಉಪಕರಣಗಳು ನಾಶವಾಗಿವೆ.

Follow KannadaPrabha channel on WhatsApp

  

KannadaPrabha News app ಡೌನ್‌ಲೋಡ್ ಮಾಡಿ, ಇತ್ತೀಚಿನ ಸುದ್ದಿಗಳ ಅಪ್ಡೇಟ್ಸ್ ಪಡೆಯಿರಿ

 

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com