ಭಾರತಕ್ಕೆ ಬಂದ ಛೋಟಾ ರಾಜನ್ : ದೆಹಲಿಯಲ್ಲಿ ಬಿಗಿ ಭದ್ರತೆ

ಸಿಬಿಐ ಅಧಿಕಾರಿಗಳು ಕುಖ್ಯಾತ ಭೂಗತ ದೊರೆ ಛೋಟಾ ರಾಜನ್ ನನ್ನು ಶುಕ್ರವಾರ ಬೆಳಿಗ್ಗೆ ದೆಹಲಿಗೆ...
Chhota Rajan
Chhota Rajan
ನವದೆಹಲಿ: ಸಿಬಿಐ ಅಧಿಕಾರಿಗಳು ಕುಖ್ಯಾತ ಭೂಗತ ದೊರೆ ಛೋಟಾ ರಾಜನ್ ನನ್ನು ಶುಕ್ರವಾರ ಬೆಳಿಗ್ಗೆ ದೆಹಲಿಗೆ ಕರೆತಂದಿದ್ದಾರೆ.
ಇಂಡೋನೇಷ್ಯಾದ ಬಾಲಿಯಿಂದ ದೆಹಲಿಯಲ್ಲಿರುವ ಪಾಲಂ ಏರ್ ಪೋರ್ಟ್ ಗೆ ಸಿಬಿಐ ಅಧಿಕಾರಿಗಳು ಛೋಟಾ ರಾಜನ್ ನೊಂದಿಗೆ ಇಂದು ಬೆಳಿಗ್ಗೆ 5 ಗಂಟೆಗೆ ಬಂದಿಳಿದಿದ್ದಾರೆ.  ಈ ಮೂಲಕ ಆತನನ್ನು ಇಂಡೋ ನೇಷ್ಯಾ ಭಾರತಕ್ಕೆ ಗಡಿಪಾರು ಮಾಡಿದಂತಾಗಿದೆ. 
ಸುಮಾರು 6.15ಕ್ಕೆ ರಾಜನ್ ನನ್ನು ಸಿಬಿಐ ಕೇಂದ್ರ ಕಚೇರಿಗೆ ಕರೆದೊಯ್ಯಲಾಗಿದ್ದು, ವಿಶೇಷ ಕಮಾಂಡೋಗಳ ಭದ್ರತೆ ಕಲ್ಪಿಸಲಾಗಿದೆ. 
ಆತನ ವಿರುದ್ಧ ಕೊಲೆ, ವಂಚನೆ, ಸುಲಿಗೆ ಸೇರಿದಂತೆ 70 ಪ್ರಕರಣಗಳು ದಾಖಲಾಗಿವೆ. 1988ರಲ್ಲಿ ಆತ ದುಬೈಗೆ ಪರಾರಿಯಾಗಿದ್ದ. ಸದ್ಯ ಆತನನ್ನು ಸಿಬಿಐ ವಶದಲ್ಲೇ ಇರಿಸಲು ನಿರ್ಧರಿಸಲಾಗಿದೆ. 
ಮುಂಬೈ ಮತ್ತು ದೆಹಲಿಯಲ್ಲಿ ಬಿಗಿ ಭದ್ರತೆ ಕೈಗೊಳ್ಳಲಾಗಿದೆ. ಮತ್ತೊಂದು ಮಹತ್ವದ ಬೆಳವಣಿಗೆಯಲ್ಲಿ ಮಹಾರಾಷ್ಟ್ರದಲ್ಲಿ ಆತನ ವಿರುದ್ಧ ದಾಖಲಾಗಿರುವ ಎಲ್ಲ ಪ್ರಕರಣಗಳು ಸಿಬಿಐಗೆ ವರ್ಗಾಯಿಸಲಾಗಿದೆ. 
ಬಾಲಿ ಜೈಲಿಂದ ವಿಮಾನ ನಿಲ್ದಾಣಕ್ಕೆ ಬಿಗಿ ಭದ್ರತೆಯಲ್ಲಿ ತೆರಳುವ ಮುನ್ನ ಮಾತನಾಡಿದ ಆತ 27 ವರ್ಷಗಳ ಬಳಿಕ ಸ್ವದೇಶಕ್ಕೆ ಮರಳಲು ಸಂತೋಷವಾಗುತ್ತದೆ ಎಂದಿದ್ದ. 
ಛೋಟಾ ರಾಜನ್ ನನ್ನು ಅಕ್ಟೋಬರ್ 25ರಂದು ಬಂಧಿಸಲಾಗಿತ್ತು. ಛೋಟಾ ರಾಜನ್‍ನ ಹಸ್ತಾಂತರ ಪ್ರಕ್ರಿಯೆಯು ಹವಾಮಾನ ವೈಪರೀತ್ಯದ ಕಾರಣದಿಂದ ಮುಂದೂಡಲಾಗಿತ್ತು. ಸನಿಹದಲ್ಲಿರುವ ಜ್ವಾಲಾಮುಖಿ ಪರ್ವತದಿಂದ ಎದ್ದ ಹೊಗೆಯಿಂದಾಗಿ ಇಲ್ಲಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಆವೃತವಾಗಿ, ನಿಲ್ದಾಣದ ಕಾರ್ಯಾಚರಣೆಯನ್ನು ಬಹುತೇಕ ಒಂದು ದಿನ ಮಟ್ಟಿದೆ ಮುಚ್ಚಲಾಗಿತ್ತು. ಈ ಹಿನ್ನಲೆಯಲ್ಲಿ ಹಸ್ತಾಂತರ ಪ್ರಕ್ರಿಯೆಗೆ ತಡೆಯಾಗಿತ್ತು. 
ಅಲ್ಲದೇ, ದಾವೂದ್ ಸಹಚರರಿಂದ ನನಗೆ ಪ್ರಾಣ ಭಯವಿದೆ. ಮುಂಬೈನ ಕೆಲ ಪೊಲೀಸರಿಗೆ ದಾವೂದ್ ಜೊತೆ ಸಂಪರ್ಕವಿದೆ. ಹಾಗಾಗಿ, ನನ್ನನ್ನು ದೆಹಲಿಯಲ್ಲಿರಿಸಿ ಎಂದು ಅಧಿಕಾರಿಗಳಲ್ಲಿ ಮನವಿ ಮಾಡಿಕೊಂಡಿದ್ದನು.
ಪಾಸ್ ಪೋರ್ಟ್ ರದ್ದು: ಇದೇ ವೇಳೆ, ಕರ್ನಾಟಕ ಮಂಡ್ಯ ವಿಳಾಸದಲ್ಲಿ ಮೋಹನ್ ಕುಮಾರ್ ಎಂಬ ಹೆಸರಿನಲ್ಲಿ ರಾಜನ್ ಪಡೆದುಕೊಂಡ ಪಾಸ್ ಪೋರ್ಟ್ ಅನ್ನು ರದ್ದು ಮಾಡಲಾಗಿದೆ. ಅದರ ಬಗ್ಗೆ ವಿಚಾರಣೆ ಆರಂಭಿಸಲಾಗಿದೆ ಎಂದು ವಿದೇಶಾಂಗ ಇಲಾಖೆ ವಕ್ತಾರ ವಿಕಾಸ್ ಸ್ವರೂಪ್ ತಿಳಿಸಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com