ಪಾಟ್ನಾ: ಸಹೋದರ ನಿತೀಶ್ ಕುಮಾರ್ ಬಿಹಾರದ ಮುಂದಿನ ಮುಖ್ಯಮಂತ್ರಿಯಾಗಿ ಮುಂದುವರೆಯುತ್ತಾರೆ ಎಂದು ಆರ್ ಜೆಡಿ ಪಕ್ಷದ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಹೇಳಿದ್ದಾರೆ.
ಬಿಹಾರ ಚುನಾವಣೆಯಲ್ಲಿ ಜೆಡಿಯು, ಆರ್ ಜೆಡಿ ನೇತೃತ್ವ ಮಹಾಘಟ್ ಬಂಧನ ಮೈತ್ರೀಕೂಟ ಅಭೂತ ಗೆಲುವು ಸಾಧಿಸಿದ ಹಿನ್ನಲೆಯಲ್ಲಿ ನಿತೀಶ್ ಕುಮಾರ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿ ನಡೆಸಿದ ಲಾಲು ಪ್ರಸಾದ್ ಅವರು, ನಿತೀಶ್ ಕುಮಾರ್ ಅವರೇ ಮುಖ್ಯಮಂತ್ರಿಯಾಗಿ ಮುಂದುವರೆಯಲಿದ್ದಾರೆ ಎಂದು ಹೇಳಿದರು.
"ಬಿಹಾರ ಚುನಾವಣಾ ಫಲಿತಾಂಶ ರಾಷ್ಟ್ರ ರಾಜಕರಣದ ಮೇಲೆ ಧೀರ್ಘಕಾಲಿಕ ಪರಿಣಾಮವನ್ನುಂಟು ಮಾಡಲಿದೆ. ಇಡೀ ದೇಶಕ್ಕೆ ಬಿಹಾರ ಜನತೆ ಹೊಸ ದಿಕ್ಕನ್ನು ತೋರಿಸಿದೆ. ಹೀಗಾಗಿ ನಾವು ದೇಶಾದ್ಯಂತ ಸಂಚರಿಸಿ ಪ್ರಧಾನಿ ಮೋದಿ ಮತ್ತು ಎನ್ ಡಿಎ ಸರ್ಕಾರದ ವಿರುದ್ಧ ಜನಾಂಧೋಲನ ಆರಂಭಿಸುತ್ತೇವೆ. ದೇಶವನ್ನು ಒಡೆದು ಆಳುತ್ತಿರುವವರ ವಿರುದ್ಧ ಹೋರಾಡುತ್ತೇವೆ. ಬಿಹಾರದಲ್ಲಿ ಬಿಜೆಪಿ ವಾಶ್ ಔಟ್ ಆಗಿದ್ದು, ಮುಂದಿನ ದಿನಗಳಲ್ಲಿ ಹೋರಾಟದ ಮೂಲಕ ಮೋದಿ ಸರ್ಕಾರ ಕಿತ್ತೆಸೆಯುತ್ತೇವೆ ಎಂದು ಲಾಲು ಹೇಳಿದರು.
ಇದೇ ವೇಳೆ ಮತದಾರರನ್ನು ಉದ್ದೇಶಿಸಿ ಮಾತನಾಡಿದ ಅವರು, ಬಿಹಾರದ ಇಬ್ಬರು ಸಹೋದರಿಂದ ಬಿಹಾರದ ಜನತೆಗೆ ವಂದನೆ. ವಿಶೇಷವಾಗಿ ನಮ್ಮನ್ನು ಬೆಂಬಲಿಸಿದ ಮಹಿಳೆಯರಿಗೆ, ಮಾಧ್ಯಮ ಮಿತ್ರರಿಗೆ ನಮ್ಮ ಧನ್ಯವಾದಗಳನ್ನು ಸಲ್ಲಿಸುತ್ತೇವೆ. ನಮ್ಮನ್ನು ಎಲ್ಲಾ ಜಾತಿ ಧರ್ಮ ದವರು ಬೆಂಬಲಿಸಿದ್ದಾರೆ ಇದು ಮಹಾ ಮೈತ್ರಿಕೂಟಕ್ಕೆ ಲಭಿಸಿದ ಜಯ. ಬಿಹಾರವನ್ನು ಮಹಿಳೆಯರ ಕನಸಿನ ರಾಜ್ಯದಂತೆ ಕಟ್ಟುತ್ತೇವೆ ಎಂದು ಲಾಲು ಪ್ರಸಾದ್ ಹೇಳಿದರು.
ಬಿಹಾರದ 243 ವಿಧಾನಸಭಾ ಕ್ಷೇತ್ರಗಳ ಚುನಾವಣೆಯ ಮತಎಣಿಕೆ ಭಾನುವಾರ ಬೆಳಗ್ಗೆ 8ಗಂಟೆಯಿಂದ ಆರಂಭವಾಗಿದೆ. ಪ್ರಸ್ತುತ ಮತಎಣಿಕೆ ಮುಕ್ತಾಯದ ಹಂತದಲ್ಲಿದ್ದು, ಜೆಡಿಯು ಮೈತ್ರಿ ಕೂಟ 94 ಕ್ಷೇತ್ರಗಳಲ್ಲಿ ಜಯಭೇರಿ ಭಾರಿಸಿದ್ದು, 84 ಕ್ಷೇತ್ರಗಳಲ್ಲಿ ಮುನ್ನಡೆ ಕಾಯ್ದು ಕೊಂಡಿದೆ. ಬಿಜೆಪಿ ಮೈತ್ರಿ ಕೂಟ 26 ಕ್ಷೇತ್ರಗಳಲ್ಲಿ ಗೆಲುವು ಸಾಧಿಸಿದ್ದು, 33 ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸಿದೆ.
ಆರ್‌ಜೆಡಿ 101 ಕ್ಷೇತ್ರಗಳ ಪೈಕಿ 80 ಸ್ಥಾನಗಳಲ್ಲಿ ಜಯ ಪಡೆದು ಅತಿ ದೊಡ್ಡ ಪಕ್ಷವಾಗಿ ಹೊರಹೊಮ್ಮಿದೆ.
Advertisement