ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸ್ಥಾನ, ಬ್ರಿಟನ್ ಬೆಂಬಲ

ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕೆಮರೂನ್ ಅವರು, ಉಭಯ ದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ಚಿಂತನೆ ನಡೆಸಿದೆ...
ಜಂಟಿ ಸುದ್ದಿಗೋಷ್ಟಿಯಲ್ಲಿ ಪ್ರಧಾನಿ ಮೋದಿ ಮತ್ತು ಇಂಗ್ಲೆಂಡ್ ಪ್ರಧಾನಿ ಕೆಮರೂನ್
ಜಂಟಿ ಸುದ್ದಿಗೋಷ್ಟಿಯಲ್ಲಿ ಪ್ರಧಾನಿ ಮೋದಿ ಮತ್ತು ಇಂಗ್ಲೆಂಡ್ ಪ್ರಧಾನಿ ಕೆಮರೂನ್

ಇಂಗ್ಲೆಂಡ್: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯಲ್ಲಿ ಭಾರತಕ್ಕೆ ಖಾಯಂ ಸದಸ್ಯ ಸ್ಥಾನಮಾನ ನೀಡಲು ಬ್ರಿಟನ್ ಬೆಂಬಲ ನೀಡಲಿದೆ ಎಂದು ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕೆಮರೂನ್ ಹೇಳಿದ್ದಾರೆ.

ಬ್ರಿಟನ್ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸಂಜೆ ಇಂಗ್ಲೆಂಡ್ ಪ್ರಧಾನಿ ಡೇವಿಡ್ ಕೆಮರೂನ್ ಅವರನ್ನು ನಂ.10 ಡೌನಿಂಗ್ ಸ್ಟ್ರೀಟ್ ನಲ್ಲಿರುವ ನಿವಾಸದಲ್ಲಿ ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಿದರು. ಚರ್ಚೆ ಬಳಿಕ ಉಭಯ ನಾಯಕರು ಜಂಟಿ ಸುದ್ದಿಗೋಷ್ಠಿಯನ್ನುದ್ದೇಶಿಸಿ ಮಾತನಾಡಿದರು. ಈ ವೇಳೆ ಮಾತನಾಡಿದ ಬ್ರಿಟನ್ ಪ್ರಧಾನಿ ಡೇವಿಡ್ ಕೆಮರೂನ್ ಅವರು, ಉಭಯ ದೇಶಗಳಲ್ಲಿ ಉದ್ಯೋಗಾವಕಾಶ ಹೆಚ್ಚಿಸುವ ನಿಟ್ಟಿನಲ್ಲಿ ಎರಡೂ ದೇಶಗಳು ಚಿಂತನೆ ನಡೆಸಿದೆ. ಭಾರತ ಮತ್ತು ಇಂಗ್ಲೆಂಡ್ ಅಭಿವೃದ್ಧಿ ದಿಕ್ಕಿನತ್ತ ಜೊತೆ-ಜೊತೆಯಾಗಿ ಹೆಜ್ಜೆ ಇಡಬೇಕು. ಭಾರತದಲ್ಲಿ ಸ್ಮಾರ್ಟ್ ಸಿಟಿಗಳನ್ನು ನಿರ್ಮಿಸುವಂತಹ ಬ್ರಿಟೀಷ್ ಸಂಸ್ಥೆಗಳಿಗೆ ಇಂಗ್ಲೆಂಡ್ ಸರ್ಕಾರದ ಬೆಂಬಲವಿದೆ.

ಭಾರತ ವಿಶ್ವದ ಅತಿದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರವಾಗಿದ್ದು, ನಮ್ಮ ಸಂಬಂಧವನ್ನು ಉತ್ತಮಗೊಳಿಸುವ ನಿಟ್ಟಿನಲ್ಲಿ ನಾವಿಬ್ಬರೂ ದೊಡ್ಡ ಮಹತ್ವಾಕಾಂಕ್ಷೆಗಳನ್ನು ಹೊಂದಿದ್ದೇವೆ.  ಸ್ಕಿಲ್ ಇಂಡಿಯಾ ಮತ್ತು ಮೇಕ್ ಇನ್ ಇಂಡಿಯಾಗೆ ನಮ್ಮ ಬೆಂಬಲವಿದೆ. ಭಾರತದೊಂದಿಗೆ ಉತ್ತಮ ಆರ್ಥಿಕ ಸಂಬಂಧ ಹೊಂದಲು ಇಂಗ್ಲೆಂಡ್ ಸರ್ಕಾರ ಬಯಸುತ್ತಿದ್ದು, ಭಾರತದೊಂದಿಗೆ ಆಧುನಿಕ ಮತ್ತು ಅಗತ್ಯ ಪಾಲುದಾರಿಕೆ ಹೊಂದುವುದು ತಮ್ಮ ಸರ್ಕಾರದ ಅಭಿಲಾಶೆಯಾಗಿದೆ. ಇದರ ಭಾಗವಾಗಿ ಸುಮಾರು 9 ಬಿಲಿಯನ್ ಪೌಂಡ್ಸ್ ವೆಚ್ಚದ ಹಲವು ಒಪ್ಪಂದಗಳನ್ನು ನಾವು ಮಾಡಿಕೊಂಡಿದ್ದೇವೆ ಎಂದು ಕೆಮರೂನ್ ಹೇಳಿದರು.

ಇದೇ ವೇಳೆ ಮಾತನಾಡಿದ ಭಾರತ ಪ್ರಧಾನಿ ನರೇಂದ್ರ ಮೋದಿ ಅವರು, ಇಂಗ್ಲೆಂಡ್ ಪ್ರಧಾನಿ ಕೆಮರೂನ್ ಅವರಿಗೆ ನಾನು ಧನ್ಯವಾದ ಹೇಳಲು ಬಯಸುತ್ತೇನೆ. ಇಂಗ್ಲೆಂಡ್ ನೊಂದಿಗಿನ ಸೌಹಾರ್ಧ ಸಂಬಂಧವನ್ನು ಗಟ್ಟಿಗೊಳಿಸುವುದು ಭಾರತಕ್ಕೆ ನಿರ್ಣಾಯಕವಾಗಿದೆ. ನಮ್ಮ ನಡುವಿನ ಸೌಹಾರ್ಧ ಒಪ್ಪಂದ ತುಂಬಾ ಹಳೆಯದಾಗಿದ್ದು, ನಮ್ಮ ಗುರಿಗಳು ಕೂಡ ಸಮಾನ ರೂಪದ್ದಾಗಿದೆ. ನಮ್ಮ ಸಹಭಾಗಿತ್ವ ರೋಮಾಂಚಕವಾಗಿದ್ದು, ನಮ್ಮ ಸಂಬಂಧ ಯಾವಾಗಲೂ ವಿಸ್ತರಿಸಬಲ್ಲದ್ದಾಗಿದೆ. ಮೇಕ್ ಇನ್ ಇಂಡಿಯಾದ ಮೂಲಕ ರಕ್ಷಣಾ ಇಲಾಖೆಯನ್ನು ಆಧುನೀಕರಿಸುವತ್ತ ಭಾರತ ತನ್ನ ದೃಷ್ಟಿಯನ್ನು ಕೇಂದ್ರೀಕರಿಸಿದೆ ಎಂದು ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com