ಆಮಿರ್ ಖಾನ್ ಹೇಳಿಕೆ ಅಭಿಮಾನಿಗಳಿಗೆ ಮಾಡಿದ ಅಪಮಾನ: ಕೇಂದ್ರ ಸರ್ಕಾರ

ಅಸಹಿಷ್ಣುತೆ ಕುರಿತಂತೆ ಬಾಲಿವುಡ್ ನಟ ಆಮಿರ್ ಖಾನ್ ನೀಡಿರುವ ಹೇಳಿಕೆಯನ್ನು ಕೇಂದ್ರದ ಎನ್ ಡಿಎ ಸರ್ಕಾರ ವಿರೋಧಿಸಿದ್ದು, ಭಾರತದಲ್ಲಿ ಆಮಿರ್ ಖಾನ್ ಮತ್ತು ಅವರ ಕುಟುಂಬ ಸುರಕ್ಷಿತವಾಗಿದೆ. ಹೀಗಿದ್ದೂ...
ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ನಟ ಆಮಿರ್ ಖಾನ್ (ಸಂಗ್ರಹ ಚಿತ್ರ)
ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಮತ್ತು ನಟ ಆಮಿರ್ ಖಾನ್ (ಸಂಗ್ರಹ ಚಿತ್ರ)

ನವದೆಹಲಿ: ಅಸಹಿಷ್ಣುತೆ ಕುರಿತಂತೆ ಬಾಲಿವುಡ್ ನಟ ಆಮಿರ್ ಖಾನ್ ನೀಡಿರುವ ಹೇಳಿಕೆಯನ್ನು ಕೇಂದ್ರದ ಎನ್ ಡಿಎ ಸರ್ಕಾರ ವಿರೋಧಿಸಿದ್ದು, ಭಾರತದಲ್ಲಿ ಆಮಿರ್ ಖಾನ್ ಮತ್ತು ಅವರ  ಕುಟುಂಬ ಸುರಕ್ಷಿತವಾಗಿದೆ. ಹೀಗಿದ್ದೂ ಅವರ ಹೇಳಿಕೆ ಅಭಿಮಾನಿಗಳಿಗೆ ಮಾಡಿದ ಅಪಮಾನವಾಗಿದೆ ಎಂದು ಹೇಳಿದೆ.

ಈ ಬಗ್ಗೆ ಮಾತನಾಡಿರುವ ಕೇಂದ್ರ ಸಚಿವ ಮುಖ್ತಾರ್ ಅಬ್ಬಾಸ್ ನಖ್ವಿ ಅವರು, ಆಮಿರ್ ಖಾನ್ ಅವರನ್ನು ಓರ್ವ ನಟರಾಗಿ ನಾವು ಗೌರವಿಸುತ್ತೇವೆ ಮತ್ತು ಅಭಿಮಾನಿಸುತ್ತೇವೆ. ನಾವು ಅವರು ದೇಶಬಿಟ್ಟು ಹೋಗಲು ಬಿಡುವುದಿಲ್ಲ. ಭಾರತದಲ್ಲಿ ಆಮಿರ್ ಖಾನ್ ಕುಟುಂಬ ಸುರಕ್ಷಿತವಾಗಿದ್ದು, ಅವರ ಹೇಳಿಕೆ ಅಭಿಮಾನಿಗಳಿಗೆ ಮಾಡಿದ ಅಪಮಾನವಾಗಿದೆ. ಅವರ ಹೇಳಿಕೆ ರಾಜಕೀಯ ಪ್ರೇರಿತವಾದದ್ದೇ ಎಂದು ಅನುಮಾನ ಮೂಡುತ್ತಿದ್ದು, ಇದು ಅವರಿಗೆ ಉನ್ನತಮಟ್ಟದಲ್ಲಿ ಗೌರವ ಸಲ್ಲಿಸುತ್ತಿದ್ದ ಭಾರತೀಯರಿಗೆ ತೋರಿದ ಅಗೌರವವಾಗಿದೆ ಎಂದು ಹೇಳಿದ್ದಾರೆ.

ಇನ್ನು ಆಮಿರ್ ಖಾನ್ ಹೇಳಿಕೆಗೆ ಮತ್ತೋರ್ವ ಕೇಂದ್ರ ಸಚಿವ ಕಿರಣ್ ರಿಜಿಜು ಅವರು ಕೂಡ ವಿರೋಧ ವ್ಯಕ್ತಪಡಿಸಿದ್ದು, ಬಿಜೆಪಿ ನೇತೃತ್ವದ ಎನ್ ಡಿಎ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ  ದೇಶದಲ್ಲಿ ಕೋಮುಗಲಭೆ ಗಣನೀಯವಾಗಿ ಇಳಿದಿದೆ. ಸರ್ಕಾರದ ವಿರುದ್ಧ ಇಂತಹ ಅಸಮಂಜಸ ಹೇಳಿಕೆಗಳನ್ನು ನೀಡಬಾರದು ಎಂದು ರಿಜಿಜು ಹೇಳಿದ್ದರು.

ನಿನ್ನೆ ನವದೆಹಲಿಯಲ್ಲಿ ನಡೆದ ರಾಮನಾಥ್ ಗೋಯೆಂಕಾ ಪ್ರಶಸ್ತಿ ಪ್ರಧಾನ ಸಮಾರಂಭದ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ್ದ ಬಾಲಿವುಡ್ ನಟ ಆಮಿರ್ ಖಾನ್ ಅವರು, ತಾವು ಪತ್ನಿ  ಕಿರಣ್ ರಾವ್ ಅವರೊಂದಿಗೆ ಚರ್ಚೆ ನಡೆಸುತ್ತಿದ್ದ ವೇಳೆ ತಾವು ಭಾರತ ದೇಶವನ್ನು ತೊರೆಯಬಾರದೇಕೆ ಎಂದು ಪ್ರಶ್ನಿಸಿದ್ದರು. ದೇಶದಲ್ಲಿ ಅಸಹಿಷ್ಣುತೆ ತಾಂಡವವಾಡುತ್ತಿದ್ದು, ಅಸುರಕ್ಷತೆಯ  ಆತಂಕ ಕಾಡುತ್ತಿದೆ ಎಂದು ತಮ್ಮ ಆತಂಕ ವ್ಯಕ್ತಪಡಿಸಿದ್ದರು. ತಮ್ಮ ಮಕ್ಕಳ ಭದ್ರತೆಯ ದೃಷ್ಟಿಯಿಂದ ತಾವು ವಿದೇಶದಲ್ಲಿ ನೆಲೆಸಬಾರದೇಕೆ ಎಂದು ಹೇಳಿದ್ದರು.

ಪ್ರತಿನಿತ್ಯ ದಿನಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ಪ್ರಕಟವಾಗುತ್ತಿರುವ ಅಸಹಿಷ್ಣುತೆ ಕುರಿತ ಸುದ್ದಿಗಳು ಕಿರಣ್ ಅವರ ಮನಸ್ಸಿನ ಮೇಲೆ ಅಘಾದ ಪರಿಣಾಮವನ್ನು ಉಂಟು ಮಾಡಿದ್ದು, ಅವರು ತೀವ್ರ  ಆತಂಕಕ್ಕೊಳಗಾಗಿದ್ದಾರೆ ಎಂದು ಆಮಿರ್ ಖಾನ್ ಹೇಳಿದ್ದರು. ಅಲ್ಲದೆ ಅಸಹಿಷ್ಣುತೆ ವಿರುದ್ಧ ಸಾಹಿತಿಗಳು ನಡೆಸುತ್ತಿರುವ ಪ್ರತಿಭಟನೆಗೂ ಆಮಿರ್ ಖಾನ್ ಅವರು ತಮ್ಮ ಬೆಂಬಲ ಸೂಚಿಸಿದ್ದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com