ಮಹಿಳೆಯರ ಹೋರಾಟಕ್ಕೆ ಮಣಿದು ಮದ್ಯ ಮುಕ್ತವಾಯ್ತು ನಿಂಬಾಳ ಗ್ರಾಮ

ದೇಶದ ವಿವಿಧ ರಾಜ್ಯಗಳ ಸರ್ಕಾರಗಳು ಮದ್ಯ ನಿಷೇಧಕ್ಕೆ ಚಿಂತನೆ ನಡೆಸುತ್ತಿದೆಯಾದರೂ, ಅದೇಕೊ ಆಚರಣೆಗೆ ಮಾತ್ರ ಬರುತ್ತಿಲ್ಲ. ಆದರೆ ನಮ್ಮ ಕರ್ನಾಟಕದ ಪುಟ್ಟ ಗ್ರಾಮವೊಂದು ಕಳೆದ 2 ವರ್ಷದಿಂದ ಮದ್ಯ ಮುಕ್ತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ...
ನಿಂಬಾಳ ಗ್ರಾಮದಲ್ಲಿ ಮದ್ಯ ನಿಷೇಧ (ಸಂಗ್ರಹ ಚಿತ್ರ)
ನಿಂಬಾಳ ಗ್ರಾಮದಲ್ಲಿ ಮದ್ಯ ನಿಷೇಧ (ಸಂಗ್ರಹ ಚಿತ್ರ)

ಗುಲ್ಬರ್ಗಾ: ದೇಶದ ವಿವಿಧ ರಾಜ್ಯಗಳ ಸರ್ಕಾರಗಳು ಮದ್ಯ ನಿಷೇಧಕ್ಕೆ ಚಿಂತನೆ ನಡೆಸುತ್ತಿದೆಯಾದರೂ, ಅದೇಕೊ ಆಚರಣೆಗೆ ಮಾತ್ರ ಬರುತ್ತಿಲ್ಲ. ಆದರೆ ನಮ್ಮ ಕರ್ನಾಟಕದ ಪುಟ್ಟ  ಗ್ರಾಮವೊಂದು ಕಳೆದ 2 ವರ್ಷದಿಂದ ಮದ್ಯ ಮುಕ್ತ ಗ್ರಾಮ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ.

ಹೌದು.. ತೀವ್ರ ಹಿಂದುಳಿದ ಗುಲ್ಬರ್ಗಾ ಜಿಲ್ಲೆಯ ಗ್ರಾಮವೊಂದು ಇದೀಗ ಇಡೀ ದೇಶಕ್ಕೆ ಮಾದರಿಯಾಗಿ ನಿಂತಿದೆ. ಈಗ್ಗೆ ಕೇವಲ 2 ವರ್ಷಗಳ ಹಿಂದಷ್ಟೇ ಕುಡುಕರ ತವರಾಗಿದ್ದ ನಿಂಬಾಳ ಗ್ರಾಮ  ಇದೀಗ ಮದ್ಯಮುಕ್ತ ಗ್ರಾಮವಾಗಿದೆ. ಆ ಮೂಲಕ ಇಡೀ ದೇಶಕ್ಕೆ ಮಾದರಿ ಗ್ರಾಮವಾಗಿದೆ. ಇದಕ್ಕೆಲ್ಲಾ ಕಾರಣ ಆ ಗ್ರಾಮದ ಮಹಿಳಾ ಮಣಿಗಳ ಧೈರ್ಯ ಮತ್ತು ದಿಟ್ಟ ಹೋರಾಟ. ಕುಡಿತಕ್ಕೆ  ದಾಸರಾಗಿದ್ದ ಆಗ್ರಾಮದ ಪುರುಷರು ನಿತ್ಯ ತಮ್ಮ ಮನೆಯ ಮಹಿಳೆಯರಿಗೆ ಕಾಟ ನೀಡುತ್ತಿದ್ದರು. ಆ ಹಿಂಸೆಯನ್ನು ತಾಳಲಾರದೆ ಸಿಡಿದೆದ್ದ ಮಹಿಳೆಯರು ಮದ್ಯಪಾನದ ವಿರುದ್ಧ ಹೋರಾಟ  ಮಾಡಿ ಅಂತಿಮವಾಗಿ ಗ್ರಾಮದಲ್ಲಿ ಮದ್ಯ ನಿಷೇಧಿಸುವಲ್ಲಿ ಯಶಸ್ವಿ ಕೂಡ ಆಗಿದ್ದಾರೆ.

ಗ್ರಾಮದಲ್ಲಿದ್ದ ಒಟ್ಟು ನಾಲ್ಕು ಮದ್ಯದಂಗಡಿಗಳನ್ನು ಮಹಿಳೆಯರು ತಮ್ಮ ಹೋರಾಟದ ಮೂಲಕ ಬಾಗಿಲು ಹಾಕಿಸಿದ್ದಾರೆ. ಇದೀಗ ಆ ಅಂಗಡಿಗಳ ಮಾಲೀಕರು ಬೇರೆ ವ್ಯಾಪರದಲ್ಲಿ ತೊಡಗಿದ್ದು,  ನಿಂಬಾಳ ಗ್ರಾಮದಲ್ಲಿ ಮದ್ಯಪಾನ ಸಂಪೂರ್ಣ ನಿಷೇಧವಾಗಿದೆ.

ಮದ್ಯಪಾನ ನಿಷೇಧಿಸುವಂತೆ ಗ್ರಾಮದ 51 ಮಹಿಳೆಯರ ಗುಂಪು ಹುಟ್ಟುಹಾಕಿದ ಈ ಹೋರಾಟಕ್ಕೆ ಗ್ರಾಮದ ಮುಖ್ಯಸ್ಥರು ಕೂಡ ಸಾಥ್ ನೀಡಿದ ಹಿನ್ನಲೆಯಲ್ಲಿ ಇಂದು ನಿಂಬಾಳ ಗ್ರಾಮ  ಮದ್ಯಮುಕ್ತ ಗ್ರಾಮವಾಗಿದೆ. ಗ್ರಾಮದ ಮುಖಂಡರೇ ಹೇಳುವಂತೆ ನಿಂಬಾಳ ಗ್ರಾಮದಲ್ಲಿ ಪುರುಷರು ಪ್ರತಿನಿತ್ಯ ಸುಮಾರು 35 ಸಾವಿರದಿಂದ 40 ಸಾವಿರ ರು. ಮದ್ಯಪಾನಕ್ಕೆ ಖರ್ಚು  ಮಾಡುತ್ತಿದ್ದರು. ಆದರೆ ಗ್ರಾಮದಲ್ಲಿ ಜಾರಿಗೆ ತಂದ ಮದ್ಯಪಾನ ನಿಷೇಧ ಕಾನೂನಿಂದಾಗಿ ಇಂದು ವಾರ್ಷಿಕ ಸುಮಾರು 1 ಕೋಟಿಯಿಂದ ಒಂದೂವರೆ ಕೋಟಿ ರು.ಹಣ ಉಳಿಯುತ್ತಿದೆ ಎಂದು  ಗ್ರಾಮದ ಮುಖಂಡರು ಹೇಳಿದ್ದಾರೆ.

ಇದರ ಫಲವಾಗಿ ಕಳೆದ 2 ವರ್ಷಗಳಿಂದ ನಿಂಬಾಳ ಗ್ರಾಮದಲ್ಲಿ ಮದ್ಯಪಾನ ನಿಷೇಧವಾಗಿದ್ದು, ಒಂದು ವೇಳೆ ಗ್ರಾಮಕ್ಕೆ ಯಾರಾದರೂ ಕುಡಿದು ಬಂದರೆ ಅವರಿಗೆ 1100 ರು. ದಂಡ  ವಿಧಿಸಲಾಗುತ್ತಿದೆ.

ವಿಡಿಯೋಗಾಗಿ ಇಲ್ಲಿ ಕ್ಲಿಕ್ ಮಾಡಿ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com