ನಗರದಲ್ಲಿ ಗ್ಯಾಂಗ್‌ರೇಪ್: ಮಡಿವಾಳದಲ್ಲಿ ಬಿಪಿಒ ಉದ್ಯೋಗಿ ಮೇಲೆ ಹೇಯ ಕೃತ್ಯ

ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಪಿಒ ಉದ್ಯೋಗಿಯ ಮೇಲೆ ಚಲಿಸುವ ವಾಹನದಲ್ಲಿ ಇಬ್ಬರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ...
ಗ್ಯಾಂಗ್‌ರೇಪ್
ಗ್ಯಾಂಗ್‌ರೇಪ್
ಬೆಂಗಳೂರು: ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಬಿಪಿಒ ಉದ್ಯೋಗಿಯ ಮೇಲೆ ಚಲಿಸುವ ವಾಹನದಲ್ಲಿ ಇಬ್ಬರು ದುಷ್ಕರ್ಮಿಗಳು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. 
ಶನಿವಾರ ರಾತ್ರಿ ಡ್ರಾಪ್ ಕೊಡುವ ನೆಪದಲ್ಲಿ ಈ ಕೃತ್ಯ ನಡೆದಿದೆ. ಬಿಪಿಒವೊಂದರಲ್ಲಿ ಕಾರ್ಯನಿರ್ವಹಿಸುತ್ತಿದ್ದ ಎಚ್‍ಎಸ್‍ಆರ್ ಲೇಔಟ್ ನಿವಾಸಿ, 22 ವರ್ಷದ ಮಧ್ಯಪ್ರದೇಶ ಮೂಲದ ಯುವತಿ ಕೆಲಸ ಮುಗಿಸಿ, ಪಿಜಿಗೆ ತೆರಳಲೆಂದು ಮಡಿವಾಳದ ಅಯ್ಯಪ್ಪ ದೇವಾಲಯದ ಬಳಿ ರಾತ್ರಿ 9.45ರ ಸುಮಾರಿನಲ್ಲಿ ವಾಹನಕ್ಕಾಗಿ ಕಾಯುತ್ತಿದ್ದರು. ಈ ವೇಳೆ ಟೆಂಪೊ ಟ್ರಾವೆಲರ್‍ನಲ್ಲಿ ಬಂದ ದುಷ್ಕರ್ಮಿಗಳು ಯುವತಿಯ ಎದುರು ವಾಹನ ನಿಲ್ಲಿಸಿ, ಮಡಿವಾಳ, ಬೊಮ್ಮನಹಳ್ಳಿ, ಎಚ್‍ಎಸ್‍ಆರ್ ಲೇಔಟ್ ಎಂದು ಕೂಗಿದ್ದಾರೆ. 
ಎಚ್‍ಎಸ್‍ಆರ್ ಲೇಔಟ್ ಕಡೆ ಹೋಗಬೇಕಿದ್ದ ಯುವತಿ ವಾಹನಕ್ಕೆ ಹತ್ತಿಕೊಂಡಿದ್ದಾಳೆ. ಟೆಂಪೋದಲ್ಲಿ ಯಾವುದೇ ಪ್ರಯಾಣಿಕರಿರಲಿಲ್ಲ. ವಾಹನ ಹೊಸೂರು ರಸ್ತೆಯಲ್ಲಿ ಸ್ವಲ್ಪ ದೂರ ಹೋಗುತ್ತಿದ್ದಂತೆ ದುಷ್ಕರ್ಮಿಗಳು ವಾಹನವನ್ನು ಬೇರೆಡೆಗೆ ತಿರುಗಿಸಿದ್ದಾರೆ. ಇದರಿಂದ ಅನುಮಾನಗೊಂಡ ಆಕೆ, ವಾಹನ ನಿಲ್ಲಿಸಿ ಬೇರೆ ಕಡೆ ಹೋಗಬೇಕು ಎಂದಳು. ಈ ವೇಳೆ ಒರ್ವ ಆಕೆಯ ಕುತ್ತಿಗೆಗೆ ಚಾಕು ಇಟ್ಟು ಬೆದರಿಕೆ ಹಾಕಿದ. ವಾಹನವನ್ನು ದೊಮ್ಮಲೂರಿನ ನಿರ್ಜನ ಪ್ರದೇಶದಲ್ಲಿ ನಿಲ್ಲಿಸಿ ಅತ್ಯಾಚಾರ ಎಸಗಿದ್ದಾರೆ. ಬಳಿಕ ಆಕೆಯನ್ನು ಟೆಂಪೊಗೆ ಹತ್ತಿಸಿಕೊಂಡಿದ್ದ ಜಂಕ್ಷನ್‍ನಲ್ಲಿಯೇ ಮಧ್ಯ ರಾತ್ರಿ 2 ಗಂಟೆಗೆ ಇಳಿಸಿ ಪರಾರಿಯಾಗಿದ್ದಾರೆ. ವಿಷಯ ಪೊಲೀಸರಿಗೆ ತಿಳಿಸಿದರೆ ಕೊಲೆ ಮಾಡುವುದಾಗಿ ದುಷ್ಕರ್ಮಿಗಳು ಬೆದರಿಕೆ ಹಾಕಿದ್ದರು ಎಂದು ಮೂಲಗಳು ತಿಳಿಸಿವೆ. 
ಸಂತ್ರಸ್ತ ಯುವತಿ ಆರೋಪಿಗಳ ವಶದಲ್ಲಿ ಸುಮಾರು ನಾಲ್ಕು ತಾಸು ಇದ್ದಳು. ಆರೋಪಿಗಳು ವಾಹನದಿಂದ ಇಳಿಸಿದ ಕೂಡಲೇ ಯುವತಿ ಸ್ನೇಹಿತೆಗೆ ಕರೆ ಮಾಡಿ ಮಾಹಿತಿ ನೀಡಿ ತನ್ನ ಮನೆಗೆ ಹೋಗಿದ್ದಾಳೆ. ನಂತರ ಸೆಂಟ್ ಜಾನ್ಸ್ ಆಸ್ಪತ್ರೆಗೆ ತೆರಳಿ ಚಿಕಿತ್ಸೆ ಪಡೆದಿದ್ದಾಳೆ. ಚಿಕಿತ್ಸೆಯ ಬಳಿಕ ಸೋಮವಾರ ಬೆಳಗ್ಗೆ ಆಸ್ಪತ್ರೆಯಿಂದ ಯುವತಿ ಬಿಡುಗಡೆಯಾಗಿದ್ದಾಳೆ. ಮಹಿಳೆ ಮೇಲೆ ಗಾಯದ ಗುರುತುಗಳು ಕಂಡು ಬಂದಿವೆ. ಕೇಸು ದಾಖಲಿಸಿರುವ ಪೊಲೀಸರು ಆರೋಪಿಗಳಿಗಾಗಿ ಶೋಧ ಕಾರ್ಯ ಆರಂಭಿಸಿದ್ದಾರೆ.
ಪ್ರಮುಖ ಜಂಕ್ಷನ್‍ಗಳಲ್ಲಿರುವ ಸಿಸಿ ಕ್ಯಾಮರಾಗಳನ್ನು ವಶಕ್ಕೆ ಪಡೆದಿರುವ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ. ಇದೇ ವೇಳೆ ಯುವತಿ ನೀಡಿದ ಮಾಹಿತಿ ಮೇರೆಗೆ ಸಮೀಪದ ಮಳಿಗೆಗಳಲ್ಲಿರುವ ಸಿಸಿ ಕ್ಯಾಮರಾಗಳ ಬಗ್ಗೆಯು ಮಾಹಿತಿ ಕಲೆ ಹಾಕುತ್ತಿದ್ದಾರೆ. ಸುದ್ದಿ ತಿಳಿಯುತ್ತಿದ್ದಂತೆ ಕಾರ್ಯಪ್ರವೃತ್ತರಾದ ಪೊಲೀಸರು ಯುವತಿ ನೀಡಿದ ಮಾಹಿತಿ ಮೇರೆಗೆ ಕೆಲ ಶಂಕಿತರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ. ಆದರೆ, ಆರೋಪಿಗಳ ಫೋಟೋ ತೋರಿಸಿದಾಗ ಅವರನ್ನು ಗುರುತು ಹಿಡಿಯಲು ಯುವತಿಗೆ ಸಾಧ್ಯವಾಗಿಲ್ಲ. ಯುವತಿ ಪಾಲಕರು ಬೆಂಗಳೂರಿಗೆ ಆಗಮಿಸಿದ್ದಾರೆ. ಘಟನೆಯಿಂದ ನೊಂದಿರುವ ಅವರು ಮಗಳನ್ನು ವಾಪಸ್ ತಮ್ಮ ಊರಿಗೆ ಕರೆದೊಯ್ಯಲು ನಿರ್ಧರಿಸಿದ್ದಾರೆ. ತನಿಖೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ಹೇಳಿದ್ದಾರೆ. ಕಳೆದ ಒಂದು ವರ್ಷದಿಂದ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಎಚ್ ಎಸ್‍ಆರ್ ಲೇಔಟ್‍ನಲ್ಲಿ ಸ್ನೇಹಿತರೊಂದಿಗೆ ವಾಸವಿದ್ದಳು. 
ಪರಿಚಿತನ ಕೃತ್ಯ?: ಪೊಲೀಸ್ ಮೂಲಗಳ ಪ್ರಕಾರ ಯುವತಿಗೆ ಪರಿಚಿತರೇ ಈ ಕೃತ್ಯ ಮಾಡಿದ್ದಾರೆ ಎನ್ನಲಾಗಿದೆ. ಈ ಸಂಬಂಧ ಸೋಮವಾರ ಪೊಲೀಸರು ಇಬ್ಬರನ್ನು ವಶಕ್ಕೆ ಪಡೆದಿದ್ದಾರೆ. ಯುವತಿ ಪ್ರತಿ ದಿನ ಕೆಲಸ ಮುಗಿಸಿದ ಬಳಿಕ ಆಕೆಯನ್ನು ಮನೆಗೆ ಡ್ರಾಪ್ ಮಾಡುತ್ತಿದ್ದ ವಾಹನ ಚಾಲಕ, ತನ್ನ ಸ್ನೇಹಿತರ ಜತೆಗೂಡಿ ಕೃತ್ಯವೆಸಗಿದ್ದಾನೆ ಎನ್ನಲಾಗಿದೆ. ಇನ್ನು ಯುವತಿ ಕೆಲಸ ಮಾಡುವ ಸಂಸ್ಥೆ ಆಕೆಯ ಸಂಬಂಧಿಯ ಮಾಲೀಕತ್ವದ್ದು ಎನ್ನಲಾಗಿದೆ. 10 ವರ್ಷದ ಹಿಂದೆ ಬಿಪಿಒ ಉದ್ಯೋಗಿ ಪ್ರತಿಭಾ ಎಂಬಾಕೆಯನ್ನು ಕ್ಯಾಬ್ ಚಾಲಕ ಶಿವಕುಮಾರ್ ಎಂಬಾತ ಅಂಜನಾಪುರ ಬಡಾವಣೆಯ ನಿರ್ಜನ ಪ್ರದೇಶಕ್ಕೆ ಕರೆದೊಯ್ದು ಅತ್ಯಾಚಾರವೆಸಗಿ ಕೊಲೆಗೈದಿದ್ದ. ಈಗ ಮತ್ತೊಮ್ಮೆ ಮಹಿಳಾ ಉದ್ಯೋಗಿಗಳ ಸುರಕ್ಷತೆ ಬಗ್ಗೆ ರಾಜಧಾನಿಯಲ್ಲಿ ಅನುಮಾನಗಳು ಮೂಡುತ್ತಿದೆ.
--
ದುಷ್ಕರ್ಮಿಗಳ ಬಂಧನಕ್ಕೆ 3 ವಿಶೇಷ ತಂಡಗಳನ್ನು ರಚಿಸಲಾಗಿದೆ. ವಾಹನದ ನಂಬರ್ ಪತ್ತೆಯಾಗಿದೆ. ಯುವತಿಗೆ ವೈದ್ಯ ಕೀಯ ಪರೀಕ್ಷೆಗೆ ಒಳಪಡಿಸಲಾಗಿದೆ. ತನಿಖೆಗೆ ಅಗತ್ಯವಿರುವ ಎಲ್ಲಾ ಪ್ರಕ್ರಿಯೆಗಳನ್ನು ಪೂರ್ಣಗೊಳಿಸಲಾಗಿದೆ. 
- ಪಿ.ಹರಿಶೇಖರನ್, ಹೆಚ್ಚುವರಿ ಪೊಲೀಸ್ ಆಯುಕ್ತ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com