ಸಬ್‌ಇನ್ಸ್‌ಪೆಕ್ಟರ್ ಕೊಲೆ ಕೇಸಲ್ಲಿ ಒಬ್ಬ ವಶ

ದೊಡ್ಡಬಳ್ಳಾಪುರ ಟೌನ್ ಪಿಎಸ್ಸೈ ಜಗದೀಶ್ ಹತ್ಯೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು ಆರೋಪಿ ಮಧು ಸಹಚರ ಸಂತೋಷ್ ಅಲಿಯಾಸ್ ಕುಂಟೆ ಹಾಗೂ ಭದ್ರಾವತಿಯಲ್ಲಿ ಮಧು..
ಹತ್ಯೆಗೀಡಾದ ಇನ್ಸ್ ಪೆಕ್ಟರ್ ಜಗದೀಶ್ (ಸಂಗ್ರಹ ಚಿತ್ರ)
ಹತ್ಯೆಗೀಡಾದ ಇನ್ಸ್ ಪೆಕ್ಟರ್ ಜಗದೀಶ್ (ಸಂಗ್ರಹ ಚಿತ್ರ)

ಬೆಂಗಳೂರು: ದೊಡ್ಡಬಳ್ಳಾಪುರ ಟೌನ್ ಪಿಎಸ್ಸೈ ಜಗದೀಶ್ ಹತ್ಯೆ ಪ್ರಕರಣ ಸಂಬಂಧ ತನಿಖೆ ಚುರುಕುಗೊಳಿಸಿರುವ ಪೊಲೀಸರು ಆರೋಪಿ ಮಧು ಸಹಚರ ಸಂತೋಷ್ ಅಲಿಯಾಸ್ ಕುಂಟೆ  ಹಾಗೂ ಭದ್ರಾವತಿಯಲ್ಲಿ ಮಧು ಸಹೋದರ ರಘುನನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದ್ದಾರೆ.

ನೆಲಮಂಗಲ ಸಮೀಪದ ವಿನಾಯಕ ಬಡಾವಣೆಯಲ್ಲಿ ಎಸ್ಸೈ ಜಗದೀಶ್ ಹತ್ಯೆಗೂ ಮೊದಲು ಹೊಂಡಾ ಶೋ ರೂಮ್‌ನಲ್ಲಿ ನಡೆದ ಕೆಲ ಘಟನಾವಳಿಗಳ ವಿಡಿಯೋ ಮಾಧ್ಯಮಗಳಿಗೆ  ಬಿಡುಗಡೆಯಾಗಿದ್ದು, ಶೋ ರೂಮ್‌ನಲ್ಲಿ ಪೊಲೀಸರನ್ನು ಗಮನಿಸಿದ ಆರೋಪಿಗಳಾದ ಮಧು ಅಲಿಯಾಸ್ ಗೊಣ್ಣೆ (22) ಹಾಗೂ ಆತನ ಜತೆಗಿದ್ದ ಕುಖ್ಯಾತ ಕಳ್ಳ ಹರೀಶ್ ಬಾಬು (42) ಅಲ್ಲಿಂದ  ಓಡಿ ಹೋಗುತ್ತಾರೆ. ಈ ವೇಳೆ ಸ್ಥಳದಲ್ಲೇ ಇರುವ ಎಸ್ಸೈ ಜಗದೀಶ್ ಹಾಗೂ ಕಾನ್ಸ್ ಟೇಬಲ್ ವೆಂಕಟೇಶ ಮೂರ್ತಿ ಎರಡು ದಿಕ್ಕಿಗೂ ಅಟ್ಟಿಸಿಕೊಂಡು ಹೋಗುವ ದೃಶ್ಯ ಸಿಸಿ ಕ್ಯಾಮರಾದಲ್ಲಿ  ಸೆರೆಯಾಗಿದೆ. ಹೀಗಾಗಿ, ಇದೇ ಇಬ್ಬರು ಆರೋಪಿಗಳು ಜಗದೀಶ್ ಹತ್ಯೆ ನಡೆಸಿರುವುದು ಖಚಿತವಾಗಿದೆ.

ರಾಜ್ಯಾದ್ಯಂತ ತೀವ್ರ ಶೋಧ: ಆರೋಪಿಗಳ ಬಂಧನಕ್ಕೆ ಆರೇಳು ವಿಶೇಷ ತಂಡಗಳು ತೀವ್ರ ಶೋಧ ಕಾರ್ಯ ನಡೆಸುತ್ತಿವೆ. ಭದ್ರಾವತಿ ಮೂಲದ ಮಧು ವಿರುದ್ಧ ಈಗಾಗಲೇ ಶಿವಮೊಗ್ಗ ಹಾಗೂ  ತರೀಕೆರೆ ಪೊಲೀಸ್ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿ ಆರೋಪಿ ಬಂಧಿತನಾಗಿದ್ದ. ಹೀಗಾಗಿ, ಅಲ್ಲಿನ ಪೊಲೀಸರು ಕೂಡಾ ತೀವ್ರ ಶೋಧ ಕಾರ್ಯ ನಡೆಸುತ್ತಿದ್ದಾರೆ. ಉಳಿದಂತೆ ದಾವಣಗೆರೆ,  ಚಿಕ್ಕಮಗಳೂರು ಸೇರಿದಂತೆ ರಾಜ್ಯದ ಎಲ್ಲೆಡೆ ಶೋಧ ಕಾರ್ಯ ನಡೆಸಲಾಗುತ್ತಿದೆ ಎಂದು ರಾಜ್ಯ ಕಾನೂನು ಸುವ್ಯವಸ್ಥೆ ಹೆಚ್ಚುವರಿ ಪೊಲೀಸ್ ಮಹಾ ನಿರ್ದೇಶಕ ಅಲೋಕ್ ಮೋಹನ್  ತಿಳಿಸಿದರು.

ತಂದೆ ಮಗನಲ್ಲ: ನೆಲಮಂಗಲದ ಟರ್ಬೋ ಹೊಂಡಾ ಶೋರೂಮ್‌ಗೆ ಮಧು ಹಾಗೂ ಆತನ ತಂದೆ ಕೃಷ್ಣಪ್ಪ ಎಂಬುವರು ಬಂದಿದ್ದರು ಎಂದು ಪೊಲೀಸರು ಶುಕ್ರವಾರ ಸುದ್ದಿಗೊಷ್ಠಿಯಲ್ಲಿ  ತಿಳಿಸಿದ್ದರು. ಆದರೆ, ಮಧು ತಂದೆ ಕೃಷ್ಣಪ್ಪ ಎಂಬುವರು ೫ ವರ್ಷಗಳ ಹಿಂದೆ ರಸ್ತೆ ಅಪಘಾತದಲ್ಲಿ ಮೃತಪಟ್ಟಿದ್ದಾರೆ ಎನ್ನುವುದು ಗೊತ್ತಾಗಿದೆ. ಹೀಗಾಗಿ, ಘಟನಾ ಸ್ಥಳಕ್ಕೆ ಮಧು ಹಾಗೂ ಆತನ  ಮಲತಂದೆ ಎನ್ನಲಾಗಿರುವ ಹರೀಶ್ ಬಾಬು ಬಂದಿದ್ದ ಎನ್ನುವುದು ಖಚಿತವಾಗಿದೆ. ಆರೋಪಿಗಳಿಬ್ಬರೂ ಭದ್ರಾವತಿ ಮೂಲದವರಾಗಿದ್ದಾರೆ. ಹರೀಶ್‌ಬಾಬು ಕುಖ್ಯಾತ ಮನೆಗಳ್ಳನಾಗಿದ್ದು, ಈತನ  ವಿರುದ್ಧ ಬೆಂಗಳೂರು, ಮಂಡ್ಯ, ಶಿವಮೊಗ್ಗ, ಭದ್ರಾವತಿ, ಚಿಕ್ಕಮಗಳೂರು, ಬೇಲೂರು, ಚಿತ್ರದುರ್ಗ ಹಾಗೂ ಮಾದನಾಯಕನಹಳ್ಳಿ ಠಾಣೆಗಳಲ್ಲಿ ೪೨ಕ್ಕೂ ಅಧಿಕ ಪ್ರಕರಣಗಳಿವೆ ಎಂಬುದು   ತನಿಖೆಯಲ್ಲಿ ಬಯಲಾಗಿದೆ.

ವಿದ್ಯಾರಣ್ಯಪುರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದ: ಹರೀಶ್‌ಬಾಬು ಮತ್ತು ಆತನ ತಂಡ ಬೆಂಗಳೂರಿನ ಎಂ.ಎಸ್.ಪಾಳ್ಯದಲ್ಲಿನ ಮನೆಗೆ ನುಗ್ಗಿ ಕಳ್ಳತನ ಮಾಡಿದ್ದರು. ಈ ಸಂಬಂಧ ವಿದ್ಯಾರಣ್ಯಪುರ  ಪೊಲೀಸರು ೩ ತಿಂಗಳ ಸತತ ಪ್ರಯತ್ನದ ನಂತರ ಹರೀಶ್‌ಬಾಬು ಹಾಗೂ ಈತನ ಸಹಚರ ನವೀನ್‌ನನ್ನು ಬಂಧಿಸಿದ್ದರು. ಚಿತ್ರದುರ್ಗದಲ್ಲಿ ಅಡವಿಟ್ಟಿದ್ದ ೧೦೦ ಗ್ರಾಂ ಚಿನ್ನಾಭರಣ ಮತ್ತು ೨ ಕೆ.ಜಿ  ಬೆಳ್ಳಿ ವಸ್ತುಗಳನ್ನು ಜಪ್ತಿ ಮಾಡಿದ್ದರು. ಪರಪ್ಪನ ಅಗ್ರಹಾರ ಜೈಲಿಗೆ ಹೋಗಿದ್ದ ಹರೀಶ್‌ಬಾಬು ಕೇವಲ ೧೦ ದಿನದಲ್ಲೇ ಜಾಮೀನು ಪಡೆದು ಬಿಡುಗಡೆಯಾಗಿದ್ದ. ಇದಕ್ಕೂ ಮುನ್ನ ಜನವರಿಯಲ್ಲಿ  ಚಿತ್ರದುರ್ಗ ಪೊಲೀಸರಿಂದ ಬಂಧಿತನಾಗಿದ್ದ. ಅಲ್ಲೂ ಸಹ ಒಂದೇ ವಾರದಲ್ಲಿ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.

ಮಲ್ಲಾಪುರದಲ್ಲಿ ಅಂತ್ಯಕ್ರಿಯೆ:
ಜಗದೀಶ್ ಅಂತ್ಯಕ್ರಿಯೆ ಮಾಗಡಿ ತಾಲೂಕಿನ ಮಲ್ಲಾಪುರದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ ಶನಿವಾರ ನೆರವೇರಿತು. ಪಾರ್ಥಿವ ಶರೀರದ ಎದುರು ಮೃತ  ಜಗದೀಶ್ ಪತ್ನಿ, ಮಕ್ಕಳು, ತಂದೆ-ತಾಯಿ, ಸಹೋದರಿಯರು ಸೇರಿದಂತೆ ಕುಟುಂಬ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು. ಅಂತ್ಯಕ್ರಿಯೆಯಲ್ಲಿ ಪಾಲ್ಗೊಳ್ಳದ ಮುಖ್ಯಮಂತ್ರಿ ಸಿದ್ದರಾಮಯ್ಯ  ಮತ್ತು ಗೃಹ ಸಚಿವ ಕೆ.ಜೆ. ಜಾರ್ಜ್ ವಿರುದ್ಧ ಗುಂಪೊಂದು ಪಾರ್ಥಿವ ಶರೀರವಿರಿಸಿದ್ದ ಸ್ಥಳದಲ್ಲೇ ಪ್ರತಿಭಟನೆ ನಡೆಸಿ, ಘೋಷಣೆ ಕೂಗಿತು.  ಅಂತ್ಯಕ್ರಿಯೆಯಲ್ಲಿ ಸಂಸದರಾದ ಎಂ.ವೀರಪ್ಪ ಮೊಯ್ಲಿ,  ಡಿ.ಕೆ.ಸುರೇಶ್, ಸಚಿವ ಕೃಷ್ಣ ಬೈರೇಗೌಡ, ಶಾಸಕರಾದ ಎಚ್.ಸಿ.ಬಾಲಕೃಷ್ಣ, ಡಾ. ಶ್ರೀನಿವಾಸ್ ಮೂರ್ತಿ ಬೈರತಿ ಬಸವರಾಜು, ಎಚ್.ಎಂ.ರೇವಣ್ಣ ಪಾಲ್ಗೊಂಡಿದ್ದರು. ಡಿಜಿಪಿ ಓಂಪ್ರಕಾಶ್,  ಎಡಿಜಿಪಿ ಕಮಲ್‌ಪಂತ್, ಐಜಿ ಅರುಣ್ ಚಕ್ರವರ್ತಿ ಅಂತಿಮ ದರ್ಶನ ಪಡೆದರು.

ಬುಲೆಟ್ ಇರಲೇ ಇಲ್ಲ?

ಎಸ್ಸೈ ರಿವಾಲ್ವರ್‌ನಲ್ಲಿ ಬುಲೆಟ್‌ಗಳಿರಲಿಲ್ಲ ಎನ್ನಲಾಗಿದೆ. ಮಫ್ತಿಯಲ್ಲಿದ್ದುದರಿಂದ ಗುಂಡು ಲೋಡ್ ಮಾಡಿರಲಿಲ್ಲ. ಜಗದೀಶ್‌ಗೆ ಇರಿದು ಪರಾರಿಯಾಗಲು ಯತ್ನಿಸುತ್ತಿದ್ದಾಗ ಮತ್ತೊಂಡೆಯಿಂದ  ವೆಂಕಟೇಶ್ ಗಂಗಾಧರ್ ಬೈಕ್‌ನಲ್ಲಿ ಬಂದಿದ್ದರು. ಎಸ್ಸೈ ಬೀಳುತ್ತಿದ್ದಂತೆ ಹಂತಕರು ಬೈಕ್‌ನಲ್ಲಿ ಪರಾರಿಯಾದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com