
ತಿರುವನಂತಪುರಮ್: ದೆಹಲಿಯ ಅತಿಥಿ ಗೃಹ ಕೇರಳ ಹೌಸ್ ನಲ್ಲಿ ಬೀಫ್ ತಿನ್ನಲು ನೀಡಲಾಗುತ್ತಿತ್ತು ಎಂಬ ದೂರಿನ ಮೇರೆಗೆ ದೆಹಲಿ ಪೊಲೀಸರು ದಾಳಿ ಮಾಡಿದ್ದು ತಪ್ಪು ಎಂದು ಒಪ್ಪಿಕೊಳ್ಳದ ಹೊರತು ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಕೇರಳ ಮುಖ್ಯಮಂತ್ರಿ ಒಮನ್ ಚಾಂಡಿ ಬುಧವಾರ ಹೇಳಿದ್ದಾರೆ.
ದೆಹಲಿ ಪೊಲೀಸರು ಸೋಮವಾರ ನಡೆಸಿದ ದಾಳಿಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ದೆಹಲಿ ಪೊಲೀಸರ ಪ್ರತಿಕ್ರಿಯೆಗೆ ಕಾಯುತ್ತಿದ್ದೇವೆ ಎಂದು ಚಾಂಡಿ ಸಂಪುಟ ಸಭೆಯ ನಂತರ ವರದಿಗಾರರಿಗೆ ತಿಳಿಸಿದ್ದಾರೆ.
"ಅವರು ಮಾಧ್ಯಮಕ್ಕೆ ನೀಡಿದ ಪ್ರತಿಕ್ರಿಯೆಯನ್ನು ಓದಿದ್ದೇನೆ. ಆದರೆ ಅದನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ" ಎಂದು ಅವರು ತಿಳಿಸಿದ್ದಾರೆ.
"ನಾವು ಇನ್ನು ಸ್ವಲ್ಪ ಸಮಯ ಕಾಯಲಿದ್ದೇವೆ ಮತ್ತು ಅವರು ತಪ್ಪನ್ನು ಒಪ್ಪಿಕೊಳ್ಳದ ಹೊರತು ನಾವು ಕಾನೂನು ಕ್ರಮಕ್ಕೆ ಮುಂದಾಗಲಿದ್ದೇವೆ" ಎಂದು ಅವರು ಹೇಳಿದ್ದಾರೆ.
"ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಂಬಧವನ್ನು ದೆಹಲಿ ಪೊಲೀಸರ ನಡೆ ಅವಮಾನಿಸಿದೆ. ಆದುರಿಂದ ಈಗ ಈ ಸಂಬಂಧದ ಬಗ್ಗೆ ಆತಂಕಕಗಳು ಸೃಷ್ಟಿಯಾಗಲಿವೆ.
"ಈ ದಾಳಿಯ ಅವಶ್ಯಕತೆ ಇರಲಿಲ್ಲ. ತಪಾಸಣೆ ನಡೆಸಬೇಕಿದ್ದು ಪಶುಸಂಗೋಪನ ಸಚಿವಾಲಯದ ವೈದ್ಯರು.
"ಅಲ್ಲಿ ಪೊಲೀಸರಿಗೆ ದಾಳಿ ನಡೆಸುವ ಯಾವುದೇ ಅಧಿಕಾರವಿರಲಿಲ್ಲ. ಇದು ನಮಗೆ ನೋವುಂಟು ಮಾಡಿದೆ" ಎಂದು ಮುಖ್ಯಮಂತ್ರಿ ತಿಳಿಸಿದ್ದಾರೆ.
"ದೆಹಲಿಯಲ್ಲಿರುವ ಕಾನೂನಿನ ಪ್ರಕಾರ ಹಸುವಿನ ಮಾಂಸ ನೀಡುವ ಹಾಗಿಲ್ಲ ಆದರೆ ಎಮ್ಮೆಯ ಮಾಂಸಕ್ಕೆ ನಿಷೇಧವೇನಿಲ್ಲ. ಕಾನೂನಿನ ಪ್ರಕಾರ ಎಮ್ಮೆಯ ಮಾಂಸವನ್ನು ಕ್ಯಾಂಟಿನಿನಲ್ಲಿ ನಾವು ತಯಾರಿಸುತ್ತೇವೆ" ಎಂದು ಚಾಂಡಿ ತಿಳಿಸಿದ್ದಾರೆ.
Advertisement