ಗೋಮಾಂಸ ತಿನ್ನಬೇಕೆನಿಸಿದರೆ ತಿನ್ನುತ್ತೇನೆ, ನನ್ನನ್ನು ತಡೆಯುವವರಾರು: ಸಿದ್ದರಾಮಯ್ಯ

ಬಿಜೆಪಿಯವರ ಗೋಮಾಂಸ ಸೇವನೆ ವಿರೋಧ ನೀತಿಯನ್ನು ತೀವ್ರವಾಗಿ ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವರೆಗೂ ನಾನು ಗೋಮಾಂಸವನ್ನು ತಿಂದಿಲ್ಲ, ತಿನ್ನಬೇಕೆನಿಸಿದರೆ ತಿಂದೇ ತಿನ್ನುತ್ತೇನೆ. ನನ್ನನ್ನು ತಡೆಯುವವರಾರೂ...
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಂಗಳೂರು:  ಬಿಜೆಪಿಯವರ ಗೋಮಾಂಸ ಸೇವನೆ ವಿರೋಧ ನೀತಿಯನ್ನು ತೀವ್ರವಾಗಿ ಟೀಕಿಸಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಈ ವರೆಗೂ ನಾನು ಗೋಮಾಂಸವನ್ನು ತಿಂದಿಲ್ಲ,  ತಿನ್ನಬೇಕೆನಿಸಿದರೆ ತಿಂದೇ ತಿನ್ನುತ್ತೇನೆ. ನನ್ನನ್ನು ತಡೆಯುವವರಾರೂ ಎಂದು  ಗುರುವಾರ ಹೇಳಿದ್ದಾರೆ.

ಈ ಕುರಿತಂತೆ ಕರ್ನಾಟಕ ಯುವ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿರುವ ಅವರು, ಗೋಮಾಂಸ ಸೇವನೆ ವಿರೋಧ ನೀತಿಯು ನಿಜಕ್ಕೂ ಅಸಂಬದ್ಧವಾದದ್ದು. ಈ ಬಗೆಗಿನ ಜನರ ವೈಯಕ್ತಿಕ ಹಕ್ಕನ್ನು ಕಿತ್ತುಕೊಳ್ಳುವ ಹಕ್ಕು ಬಿಜೆಪಿ ಅಥವಾ ಅದರ ಸಂಯೋಜಿತ, ಬೆಂಬಲಿತ ಪಕ್ಷಗಳಿಗಾಗಲಿ ಇಲ್ಲ. ಈವರೆಗೂ ನಾನು ಗೋಮಾಂಸವನ್ನು ತಿಂದಿಲ್ಲ. ಆದರೆ, ನನಗೆ ತಿನ್ನಬೇಕೆನಿಸಿದರೆ ನಾನು ತಿಂದೇ ತಿನ್ನುತ್ತೇನೆ ಎಂದು ಹೇಳಿದ್ದಾರೆ.

ಇದೇ ವೇಳೆ ದೆಹಲಿಯ ಕೇರಳ ಭವನ ಕ್ಯಾಂಟೀನ್ ಮೇಲೆ ದೆಹಲಿ ಪೊಲೀಸರು ದಾಳಿ ಮಾಡಿರುವ ಘಟನೆಯನ್ನು ನೆನೆಪಿಸಿಕೊಂಡು ಮಾತನಾಡಿದ ಅವರು, ಕೇರಳ ಭವನದ ಮೇಲೆ ದೆಹಲಿ ಪೊಲೀಸರು ದಾಳಿ ನಡೆಸಿದಾಗ ನಾನು ದೆಹಲಿಯಲ್ಲಿಯೇ ಇದ್ದೆನು. ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರಿಗೆ ದಾಳಿ ಕುರಿತಂತೆ ಮಾಹಿತಿ ಇರಲಿಲ್ಲ. ಒಬ್ಬ ಮುಖ್ಯಮಂತ್ರಿಯ ಗಮನಕ್ಕೆ ಬಾರದೆ, ಅವರಿಗೆ ಮಾಹಿತಿ ನೀಡದೆಯೇ ಪೊಲೀಸರು ಕ್ರಮ ಕೈಗೊಂಡಿದ್ದಾರೆ. ಜನರ ಊಟದ ಆಯ್ಕೆಯನ್ನು ಅವರ ತಿನ್ನುವ ಹಕ್ಕನ್ನು ಇನ್ನೊಬ್ಬರು ತಡೆಯಲು ಹೇಗೆ ಸಾಧ್ಯ? ಎಂದು ಹೇಳಿದ್ದಾರೆ.

ದಾದ್ರಿ ಪ್ರಕರಣ ಸಂಬಂಧ ಪ್ರತಿಕ್ರಿಯೆ ನೀಡಿರುವ ಅವರು, ಗೋಮಾಂಸ ಸೇವನೆ ಶಂಕೆಯಿಂದಾಗಿ ಮುಸ್ಲಿಂ ವ್ಯಕ್ತಿಯನ್ನು ಹತ್ಯೆ ಮಾಡಿರುವುದು ನಿಜಕ್ಕೂ ಅಮಾನವೀಯವಾದದ್ದು, ದೇಶದಲ್ಲಿ ಶಾಂತಿ ಕದಡುವ,  ಅಸಹಿಷ್ಣುತೆಯ ಪ್ರಕರಣಗಳು ಹೆಚ್ಚುತ್ತಿವೆ.  ಬಜರಂಗ ದಳ, ಶ್ರೀ ರಾಮಸೇನೆ, ವಿಶ್ವ ಹಿಂದೂ ಪರಿಷತ್ ಹಾಗೂ ಇನ್ನಿತರೆ ಬಿಜೆಪಿ ನೇತೃತ್ವದ ಬೆಂಬಲಿತ ಪಕ್ಷಗಳಿಂದ ಇಂದು ದೇಶದಲ್ಲಿ ಅಸಹನೀಯ ಘಟನೆಗಳು ಹೆಚ್ಚಾಗುತ್ತಿವೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com