ಗೋಮಾಂಸ ಹೇಳಿಕೆ: ಮಾತು ಬದಲಿಸಿದ ಸಿಎಂ ಸಿದ್ದರಾಮಯ್ಯ

ಈ ವರೆಗೂ ನಾನು ಗೋಮಾಂಸವನ್ನೇ ತಿಂದಿಲ್ಲ, ತಿನ್ನಬೇಕೆನಿಸಿದರೆ ತಿನ್ನುತ್ತೇನೆಂದು ಈ ಹಿಂದೆ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ನಾನು ಆ ರೀತಿ ಹೇಳಿಲ್ಲ. ಗೋಮಾಂಸ ತಿನ್ನುತ್ತೇನೆಂದು ನಾನು ಹೇಳಿರಲಿಲ್ಲ, ಆಹಾರ ಪದ್ಧತೆ ಅವರವರ ಇಷ್ಟದ ವಿಚಾರ...
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)
ಮುಖ್ಯಮಂತ್ರಿ ಸಿದ್ದರಾಮಯ್ಯ (ಸಂಗ್ರಹ ಚಿತ್ರ)

ಬೆಂಗಳೂರು: ಈ ವರೆಗೂ ನಾನು ಗೋಮಾಂಸವನ್ನೇ ತಿಂದಿಲ್ಲ, ತಿನ್ನಬೇಕೆನಿಸಿದರೆ ತಿನ್ನುತ್ತೇನೆಂದು ಈ ಹಿಂದೆ ಹೇಳಿಕೆ ನೀಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಇದೀಗ ನಾನು ಆ ರೀತಿ ಹೇಳಿಲ್ಲ. ಗೋಮಾಂಸ ತಿನ್ನುತ್ತೇನೆಂದು ನಾನು ಹೇಳಿರಲಿಲ್ಲ, ಆಹಾರ ಪದ್ಧತೆ ಅವರವರ ಇಷ್ಟದ ವಿಚಾರ. ದನದ ಮಾಂಸ ತಿನ್ನುವವರು ತಿನ್ನಲಿ ಅಂತ ಹೇಳಿದ್ದೆ ಎಂದು ಭಾನುವಾರ ಹೇಳಿದ್ದಾರೆ.

ಈ ಹಿಂದೆ ಬಿಜೆಪಿಯವರ ಗೋಮಾಂಸ ಸೇವನೆ ವಿರೋಧ ನೀತಿಯನ್ನು ತೀವ್ರವಾಗಿ ಟೀಕಿಸಿದ್ದ ಸಿದ್ದರಾಮಯ್ಯ ಅವರು ಕರ್ನಾಟಕದ ಯುವ ಕಾಂಗ್ರೆಸ್ ಸಭೆಯಲ್ಲಿ ಮಾತನಾಡಿ ಗೋಮಾಂಸ ಸೇವನೆ ವಿರೋಧ ನೀತಿಯು ನಿಜಕ್ಕೂ ಅಸಂಬದ್ಧವಾದದ್ದು. ಈ ಬಗೆಗಿನ ಜನರ ವೈಯಕ್ತಿಕ ಹಕ್ಕನ್ನು ಕಿತ್ತುಕೊಳ್ಳುವ ಹಕ್ಕು ಬಿಜೆಪಿ ಅಥವಾ ಅದರ ಸಂಯೋಜಿತ, ಬೆಂಬಲಿತ ಪಕ್ಷಗಳಿಗಾಗಲಿ ಇಲ್ಲ. ಈವರೆಗೂ ನಾನು ಗೋಮಾಂಸವನ್ನು ತಿಂದಿಲ್ಲ. ಆದರೆ, ನನಗೆ ತಿನ್ನಬೇಕೆನಿಸಿದರೆ ನಾನು ತಿಂದೇ ತಿನ್ನುತ್ತೇನೆ ಎಂದು ಹೇಳಿದ್ದರು.

ಇದೀಗ ಈ ರೀತಿಯ ಹೇಳಿಕೆಯನ್ನು ನಾನು ನೀಡಿಲ್ಲ. ನಾನು ಗೋಮಾಂಸ ತಿನ್ನುತ್ತೇನೆಂದು ಹೇಳಿಯೇ ಇಲ್ಲ. ಜನರ ಆಹಾರ ಪದ್ಧತಿಯನ್ನು ಕಿತ್ತುಕೊಳ್ಳುವ ಹಕ್ಕು ಯಾರಿಗೂ ಇಲ್ಲ. ಗೋಮಾಂಸ ತಿನ್ನುವವರು ತಿನ್ನಲಿ. ನಾನು ಇಷ್ಟಪಟ್ಟರೆ ತಿನ್ನುತ್ತೇನೆ. ಇದನ್ನು ಯಾರು ಪ್ರಶ್ನಿಸುತ್ತಾರೆ ಎಂದು ಹೇಳಿದ್ದೆ ಎಂದು ಹೇಳಿದ್ದಾರೆ.

ಸಿಎಂ ಹೇಳಿಕೆ ವಿರುದ್ಧ ಹರಿಹಾಯ್ದ ಶೆಟ್ಟರ್

ಸಿದ್ದರಾಮಯ್ಯ ಅವರ ಗೋಮಾಂಸ ಹೇಳಿಕೆಯನ್ನು ವಿರೋಧಿಸಿದ್ದ ಪ್ರತಿಪಕ್ಷ ಬಿಜೆಪಿ ನಾಯಕ ಜಗದೀಶ್ ಶೆಟ್ಟರ್ ಅವರು, ಗೋಮಾಂಸ ಕುರಿತಂತೆ ಹಗುರವಾಗಿ ಹೇಳಿಕೆ ನೀಡುತ್ತಿರುವ ಮುಖ್ಯಮಂತ್ರಿ ಸಿದ್ಧರಾಮಯ್ಯ ಅವರು ಧೈರ್ಯವಿದ್ದರೆ ಹಂದಿ ಮಾಂಸ ತಿನ್ನಲಿ ಎಂದು ಹೇಳಿದ್ದರು.

ಶೆಟ್ಟರ್ ಹೇಳಿಕೆಗೆ ಸಿಎಂ ತಿರುಗೇಟು
ರಾಜ್ಯದ ಹಲವು ಸಮಸ್ಯೆಗಳನ್ನು ಮುಚ್ಚಿಡುವ ಸಲುವಾಗಿ ಸಿದ್ದರಾಮಯ್ಯ ಅವರು ಈ ರೀತಿಯ ಹೇಳಿಕೆಗಳನ್ನು ನೀಡುತ್ತಿದ್ದಾರೆ. ಗೋಮಾಂಸ ಹೇಳಿಕೆಯೊಂದು ಜನರ ಭಾವನೆಗಳಿಗೆ ಸಂಬಂಧಿಸಿದ್ದಾರಿಂದ ಭಾವನಾತ್ಮಕ ವಿಚಾರ ಕುರಿತಂತೆ ಸಿದ್ದರಾಮಯ್ಯ ಅವರು ಈ ರೀತಿಯ ಹೇಳಿಕೆಗಳನ್ನು ನೀಡಬಾರದು ಎಂದು ಹೇಳಿದ್ದರು.


ಶೆಟ್ಟರ್ ಅವರ ಸವಾಲಿಗೆ ಇಂದು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಈ ವರೆಗೂ ಹಂದಿ ಮಾಂಸವನ್ನು ನಾನು ತಿಂದೇ ಇಲ್ಲ. ಇನ್ನು ಮುಂದೆ ಹಂದಿ ಮಾಂಸವನ್ನೂ ತಿನ್ನುತ್ತೇನೆಂದು ಹೇಳಿದ್ದಾರೆ.

ಬಿಜೆಪಿ ನಾಯಕರಿಗೆ ಯುಟಿ ಖಾದರ್ ತರಾಟೆ
ಗೋಮಾಂಸ ವಿಚಾರ ಕುರಿತಂತೆ ಪ್ರತಿಭಟನೆ ನಡೆಸುತ್ತಿರುವ ಬಿಜೆಪಿ ನಾಯಕರು ಕಾಳಜಿ ಇದ್ದರೆ ಗೋಮಾಂಸ ನಿಷೇಧ ಕಾಯಿದೆ ಜಾರಿಗೆ ತರಲಿ. ಕೇಂದ್ರದಲ್ಲಿ ಅವರದ್ದೇ ಸರ್ಕಾರವಿದೆ ಎಂದು ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com