
ಮುಂಬೈ: ಭಾರತೀಯ ಸೇನೆಗೆ ಹೊಸದೊಂದು ಮಾರಣಾಂತಿಕ ಅಸ್ತ್ರ ಸೇರ್ಪಡೆಯಾಗುತ್ತಿದ್ದು, "ಐಎನ್ ಎಸ್ ಕೊಚ್ಚಿ" ಹೆಸರಿನ ಯುದ್ಧ ನೌಕೆ ಇದೇ ಬುಧವಾರದಿಂದ ತನ್ನ ಕಾರ್ಯಾರಂಭ ಮಾಡಲಿದೆ.
ಸುಮಾರು 3900 ಕೋಟಿ ವೆಚ್ಚದಲ್ಲಿ ಐಎನ್ಎಸ್ ಕೊಚ್ಚಿ ಯುದ್ಧ ನೌಕೆಯನ್ನು ತಯಾರಿಸಲಾಗಿದ್ದು, ನೌಕೆಯು ಸುಮಾರು 7, 500 ಟನ್ ತೂಕವಿದೆ. ಐಎನ್ಎಸ್ ಕೊಚ್ಚಿ ಯುದ್ಧ ನೌಕೆಯನ್ನು ಅತ್ಯಾಧುನಿಕ ತಂತ್ರಜ್ಞಾನದಿಂದ ನಿರ್ಮಾಣ ಮಾಡಲಾಗಿದ್ದು, ಶತ್ರುಪಾಳಯದ ಜಲ ಮತ್ತು ವಾಯು ದಾಳಿಯನ್ನು ಸಮರ್ಥವಾಗಿ ಎದುರಿಸುವ ಸಾಮರ್ಥ್ಯವನ್ನು ಹೊಂದಿದೆ. ಐಎನ್ ಎಸ್ ಕೊಚ್ಚಿ ಸಂಪೂರ್ಣ ಸ್ವದೇಶಿ ನಿರ್ಮಿತ ಯುದ್ಧ ನೌಕೆಯಾಗಿದ್ದು, ಮುಂಬೈನ ಮಡಗಾಂವ್ ಡಾಕ್ ಯಾರ್ಡ್ ನಲ್ಲಿ ಇದನ್ನು ತಯಾರಿಸಲಾಗಿದೆ.
ಆಧುನಿಕ ತಂತ್ರಜ್ಞಾನದ ಸೆನ್ಸಾರ್ ಶಸ್ತ್ರಾಸ್ತ್ರ ವ್ಯವಸ್ಥೆಯನ್ನು ಐಎನ್ಎಸ್ ಕೊಚ್ಚಿ ಅಳವಡಿಸಲಾಗಿದ್ದು, ಇಸ್ರೇಲ್ ನಿರ್ಮಿತ ಎಂಎಫ್-ಸ್ಟಾರ್ ಅರೇ ರಾಡಾರ್ ಮೂಲಕ ಶುತ್ರುಪಾಳಯದ ನೌಕೆಗಳು ಮತ್ತು ವಿಮಾನಗಳು ನೂರಾರು ಕಿ.ಮೀ ಗಳಷ್ಟು ದೂರದಲ್ಲಿರುವಂತೆಯೇ ಗುರುತಿಸಿ ನಿಯಂತ್ರಣಾ ಕೊಠಡಿಗೆ ಸಂದೇಶ ರವಾನಿಸುತ್ತದೆ. ಅಲ್ಲದೆ ನೌಕೆಗೆ ಭೂಮಿಯ ಮೈಲ್ಮೈನಿಂದ ಮೇಲ್ಮೈಗೆ ಹಾರುವ ಅತ್ಯಾಧುನಿಕ ಕ್ಷಿಪಣಿ ತಂತ್ರಜ್ಞಾನವನ್ನು ಅಳವಡಿಸಲಾಗಿದ್ದು, ಇಂಡೋ-ಇಸ್ರೇಲ್ ಜಂಟಿ ನಿರ್ಮಿತ ಬರಾಕ್-8 ಕ್ಷಿಪಣಿಯನ್ನು ಅಳವಡಿಸಲಾಗಿದೆ.
100 ಕಿ.ಮೀ ವ್ಯಾಪ್ತಿಯಲ್ಲಿರುವ ಯಾವುದೇ ಶತ್ರುಪಾಳಯದ ವಿಮಾನವನ್ನು ಪತ್ತೆ ಹಚ್ಚಿ ಧ್ವಂಸ ಮಾಡುವ ಸಾಮರ್ಥ್ಯ ಐಎನ್ಎಸ್ ಕೊಚ್ಚಿಗೆ ಇದೆ. ನೌಕೆಗೆ ಅಳವಡಿಸಿರುವ 76 ಎಂಎಂ ಒಟೊ-ಮೆಲರಾ ಸೂಪರ್ ರ್ಯಾಪಿಡ್ ಗನ್ ಶತ್ರುಪಾಳಯದ ಕ್ಷಿಪಣಿಯಂತಹ ವಿಧ್ವಂಸಕ ವಸ್ತುಗಳನ್ನು ಕ್ಷಣಮಾತ್ರದಲ್ಲಿ ವಿನಾಶಗೊಳಿಸುತ್ತದೆ. ನೌಕೆಯಲ್ಲಿರುವ ಆರ್ ಬಿಯು-6000 ರಾಕೆಟ್ ಲಾಂಚರ್ ವ್ಯವಸ್ಥೆ ಬರಾಕ್ ಕ್ಷಿಪಣಿಗಳನ್ನು ಸಿಡಿಸುವ ಮೂಲಕ ಸಮುದ್ರದಾಳದಲ್ಲಿ ದಾಳಿ ಮಾಡಬಲ್ಲ ಶತ್ರುಪಾಳಯದ ಜಲಾಂತರ್ಗಾಮಿ ನೌಕೆಗಳನ್ನು ಉಡಾಯಿಸುವ ಸಾಮರ್ಥ್ಯ ಹೊಂದಿದೆ.
ಒಟ್ಟಾರೆ ಭಾರತೀಯ ಸೇನೆಗೆ ಮತ್ತೊಂದು ಶಕ್ತಿಶಾಲಿ ಮತ್ತು ವಿಧ್ವಂಸಕ ಅಸ್ತ್ರವೊಂದು ಸೇರ್ಪಡೆಯಾಗುತ್ತಿದ್ದು, ಸೇನೆ ಮತ್ತಷ್ಟು ಬಲಗೊಂಡಂತಾಗಿದೆ.
Advertisement