ನವದೆಹಲಿ: ಭಾರತದ ಗಡಿಪ್ರದೇಶದಲ್ಲಿ ಪಾಕಿಸ್ತಾನದಿಂದ ಉಗ್ರರು ದೇಶದೊಳಗೆ ನುಸುಳದಂತೆ ತಡೆಯುವುದಕ್ಕಾಗಿ ಭಾರತ ಹೊಸ ತಂತ್ರಜ್ಞಾನವನ್ನು ಅಳವಡಿಸಲು ಸಿದ್ಧತೆ ನಡೆಸುತ್ತಿದೆ.
ಸುದ್ದಿ ಮಾಧ್ಯಮವೊಂದರ ವರದಿ ಪ್ರಕಾರ ಭಾರತದ 29000 ಕಿಮಿ ಪಶ್ಚಿಮ ಗಡಿ ಭಾಗದಲ್ಲಿ 5 ಪದರಗಳ 'ಲಾಕ್' ಸಿಸ್ಟಂನ್ನು ಅಳವಡಿಸಲು ಸಿದ್ಥತೆ ನಡೆಸಿದ್ದು, ಈ ಪ್ರಸ್ತಾವನೆಗೆ ಕೇಂದ್ರ ಸರ್ಕಾರ ಹಸಿರು ನಿಶಾನೆ ತೋರಿಸಿದೆ.
ಕಾಂಪ್ರೆಹೆನ್ಸಿವ್ ಇಂಟಗ್ರೇಟೆಡ್ ಬಾರ್ಡರ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಸಿಐಬಿಎಂಎಸ್ )ಎಂದು ಕರೆಯಲ್ಪಡುವ ಈ ಸಿಸ್ಟಂ ಗಡಿ ಪ್ರದೇಶಗಳಲ್ಲಿ 365 ದಿನ, ವಾರದ 7 ದಿನ, ದಿನದ 24 ಗಂಟೆಗಳ ಕಾಲ ನಿಗಾ ಇರಿಸಿಕೊಂಡಿರುತ್ತದೆ. ಈ ವ್ಯವಸ್ಥೆ ಮೂಲಕ ಉಗ್ರರು ಅಥವಾ ಕಳ್ಳಸಾಗಾಣಿಕೆಗಾರರು ಭಾರತದೊಳಗೆ ನುಸುಳುವುದನ್ನು ತಡೆಯಬಹುದಾಗಿದೆ.
ಸಿಸಿಟಿವಿ ಕ್ಯಾಮೆರಾ, ಥರ್ಮಲ್ ಇಮೇಜ್, ನೈಟ್ ವಿಷನ್ ಡಿವೈಸ್, ನಿಗಾ ಇರಿಸುವ ರಾಡರ್, ಅಂಡರ್‌ಗ್ರೌಂಜ್ ಮಾನಿಟರಿಂಗ್ ಸೆನ್ಸರ್ಸ್ ಮತ್ತು ಲೇಸರ್ ಬ್ಯಾರಿಯರ್ಸ್‌ಗಳನಾನು ಹೊಂದಿರುವ ಇಂಟರ್‌ಗ್ರೇಟೆಡ್ ಸಿಸ್ಟಂ ಇದಾಗಿದ್ದು, ಇದು ಗಡಿ ಭಾಗದಲ್ಲಿ ನಡೆಯುವ ಎಲ್ಲ ಚಲನವಲನಗಳ ಮೇಲೆ ನಿಗಾ ಇರಿಸುತ್ತದೆ.
ಈ ಸಿಸ್ಟಂ ಅಳವಡಿಸಿ ಅಲ್ಲಿ ಯಾವುದಾದರೂ ಸಂಶಯಾಸ್ಪದ ಘಟನೆಗಳು ನಡೆಯುವುದಾದರೆ ಇದು ಎಚ್ಚರಿಕೆ ಸಂದೇಶವನ್ನು ರವಾನೆ ಮಾಡುತ್ತದೆ.
ನದೀತಟ ಮತ್ತು ಪರ್ವತಸಾಲುಗಳ ಗಡಿಪ್ರದೇಶದಲ್ಲಿ ಅಂದರೆ ಗಡಿ ಬೇಲಿ ಇರದ 130 ಪ್ರದೇಶಗಳಲ್ಲಿ ಈ ಸಿಸ್ಟಂನ ಲೇಸರ್ ಬ್ಯಾರಿಯರ್‌ಗಳನ್ನು ಸ್ಥಾಪಿಸಲಾಗುತ್ತದೆ. ಇದು ಅಲ್ಲಿನ ಗಡಿ ರಕ್ಷಣಾ ಪಡೆಗಳಿಗೆ ಸಹಾಯ ಮಾಡಲಿದ್ದು, ಇದರಿಂದ ನುಸುಳುವಿಕೆಗೆ ಕಡಿವಾಣ ಹಾಕಲಾಗುತ್ತದೆ.
ಒಂದು ವೇಳೆ ಈ ಸಿಸ್ಟಂ ಕಾರ್ಯರೂಪಕ್ಕೆ ಬಂದರೆ ಉಗ್ರರ ನುಸುಳುವಿಕೆಯನ್ನು ತಡೆಯಲು ಭಾರತಕ್ಕೆ ಸಾಧ್ಯವಾಗುವುದು ಎಂದು ಬಲ್ಲಮೂಲಗಳು ಹೇಳಿವೆ.