"ದಿ ಆಸ್ಟ್ರೇಲಿಯನ್" ಪತ್ರಿಕೆ ವಿರುದ್ಧ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ಡಿಸಿಎನ್ಎಸ್

ಸ್ಕಾರ್ಪಿನ್ ದಾಖಲೆ ಸೋರಿಕೆಗೆ ಸಂಬಂಧಿಸಿದಂತೆ ಫ್ರಾನ್ಸ್ ಮೂಲದ ಡಿಸಿಎನ್ಎಸ್ ಸಂಸ್ಥೆ ಮಾಹಿತಿ ಸೋರಿಕೆ ವರದಿ ಮಾಡಿದ್ದ "ದಿ ಆಸ್ಟ್ರೇಲಿಯನ್ ಪತ್ರಿಕೆ" ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದೆ.
ಸ್ಕಾರ್ಪಿನ್ ಜಲಾಂತರ್ಗಾಮಿ (ಸಂಗ್ರಹ ಚಿತ್ರ)
ಸ್ಕಾರ್ಪಿನ್ ಜಲಾಂತರ್ಗಾಮಿ (ಸಂಗ್ರಹ ಚಿತ್ರ)

ಸಿಡ್ನಿ: ಭಾರತಕ್ಕೆ ತಾನು ತಯಾರಿಸಿಕೊಡುತ್ತಿರುವ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಯ ಸೂಕ್ಷ್ಮ ದಾಖಲೆಗಳ ಸೋರಿಕೆ ಪ್ರಕರಣಕ್ಕೆ ಸಂಬಂಧಿಸಿದಂತೆ ಫ್ರಾನ್ಸ್ ಮೂಲದ ಡಿಸಿಎನ್ ಎಸ್ ಸಂಸ್ಥೆ ಮಾಹಿತಿ ಸೋರಿಕೆ ವರದಿ ಮಾಡಿದ್ದ "ದಿ ಆಸ್ಟ್ರೇಲಿಯನ್ ಪತ್ರಿಕೆ" ವಿರುದ್ಧ ಕಾನೂನು ಸಮರಕ್ಕೆ ಮುಂದಾಗಿದೆ.

ಪ್ರಕರಣ ಸಂಬಂಧ ಆಸ್ಟ್ರೇಲಿಯಾದ ಸುಪ್ರೀಂ ಕೋರ್ಟ್ ಮೇಟ್ಟಿಲೇರಿರುವ ಸ್ಕಾರ್ಪಿನ್ ಜಲಾಂತರ್ಗಾಮಿ ತಯಾರಿಕಾ ಸಂಸ್ಥೆ ಡಿಸಿಎನ್ಎಸ್, ದಿ ಆಸ್ಟ್ರೇಲಿಯನ್ ಪತ್ರಿಕೆ ಬಳಿ ಇರುವ  ಜಲಾಂತರ್ಗಾಮಿ ದಾಖಲೆಗಳನ್ನು ತನಗೆ ಹಸ್ತಾಂತರಿಸುವಂತೆ ಸೂಚಿಸುವಂತೆ ಮನವಿ ಮಾಡಿದೆ. ಅಲ್ಲದೆ ಭಾರತದ ಸ್ಕಾರ್ಪೀನ್‌ ಜಲಾಂತರ್ಗಾಮಿ ನೌಕೆ ಕುರಿತ ಯಾವುದೇ ಮಾಹಿತಿ ಅಥವಾ  ಸೋರಿಕೆಯಾಗಿರುವ ದಾಖಲೆಗಳನ್ನು ಪ್ರಕಟಿಸದಂತೆ ‘ದಿ ಆಸ್ಟ್ರೇಲಿಯನ್‌’ ಪತ್ರಿಕೆಗೆ ಸೂಚಿಸಬೇಕು ಎಂದು  ಫ್ರಾನ್ಸ್‌ ಮೂಲದ ಹಡಗು ತಯಾರಿಕಾ ಸಂಸ್ಥೆ ಡಿಸಿಎನ್‌ಎಸ್ ಆಸ್ಟ್ರೇಲಿಯಾದ  ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ.

"ಪತ್ರಿಕೆಯಲ್ಲಿ ಸ್ಕಾರ್ಪಿನ್ ಕುರಿತ ದಾಖಲೆಗಳು ಪ್ರಸಾರವಾಗುತ್ತಿರುವುದರಿಂದ ಡಿಸಿಎನ್ಎಸ್ ಸಂಸ್ಥೆ ಹಾಗೂ ಅದರ ಗ್ರಾಹಕರ ಮೇಲೆ ಗಂಭೀರ ಪರಿಣಾಮ ಬೀರುತ್ತಿದೆ. ಅತ್ಯಂತ ಸೂಕ್ಷ್ಮ  ದಾಖಲೆಗಳು ನಿರ್ಬಂಧಿತ ಮಾಹಿತಿಗಳು ಸೋರಿಕೆಯಾಗಿದೆ ಎಂದು ಹೇಳುವ ಮೂಲಕ ಪತ್ರಿಕೆ ಸಂಸ್ಥೆಯ ಘನತೆಗೆ ಹಾಗೂ ಸಂಸ್ಥೆಗೌಪ್ಯತೆಗೆ ಚ್ಯುತಿ ಬರುವಂತೆ ಮಾಡುತ್ತಿದೆ. ಹೀಗಾಗಿ ಪತ್ರಿಕೆ  ಬಳಿ ಇರುವ ಸ್ಕಾರ್ಪಿನ್ ಜಲಾಂತರ್ಗಾಮಿ ನೌಕೆಯ ಎಲ್ಲ ದಾಖಲೆಗಳನ್ನು ಹಸ್ತಾಂತರಿಸುವಂತೆ ಸೂಚನೆ ನೀಡಬೇಕು ಹಾಗೂ ಪ್ರಸ್ತುತ ಪತ್ರಿಕೆ ಬಳಿ ಇರುವ ದಾಖಲೆಗಳನ್ನು ನಮಗೆ  ಹಸ್ತಾಂತರಿಸಬೇಕು ಮತ್ತು ಈ ಯೋಜನೆ ಬಗ್ಗೆ ಪತ್ರಿಕೆಯ ವೆಬ್‌ಸೈಟ್‌ನಲ್ಲಿ ಹಾಕಿರುವ ಮಾಹಿತಿಗಳುನ್ನೂ ಕೂಡಲೇ ಅಳಿಸಬೇಕು ಎಂದೂ ಡಿಸಿಎನ್ಎಸ್ ಕೋರಿದೆ.

ಇತ್ತೀಚೆಗಷ್ಟೇ ಸ್ಕಾರ್ಪಿನ್ ಮಾಹಿತಿ ಸೋರಿಕೆ ಸಂಬಂಧ ಭಾರತ ನೀಡಿದ್ದ ಪ್ರತಿಕ್ರಿಯೆಗೆ ಸಂಬಂಧಿಸಿದಂತೆ ಮಾತನಾಡಿದ್ದ ಪತ್ರಿಕೆಯ ತನಿಖಾ ವರದಿಗಾರರು, ಭಾರತ ಸೋರಿಕೆ ವಿಚಾರವನ್ನು  ಲಘುವಾಗಿ ಪರಿಗಣಿಸಿದೆ. ತನ್ನ ಬಳಿ ಇರುವ ಮಾಹಿತಿ ಪ್ರಮುಖವಲ್ಲ ಎಂದು ಭಾರತ ಭಾವಿಸಿದ್ದರೆ, ನೌಕೆಯ ಅತೀ ಸೂಕ್ಷ್ಮ ದಾಖಲೆಗಳಾದ ಶಸ್ತ್ರಾಸ್ತ್ರ ವ್ಯವಸ್ಥೆ ಕುರಿತಂತೆ ವರದಿ ಪ್ರಕಟಿಸಲು  ತಾನು ಸಿದ್ಧ ಎಂದು ಪತ್ರಿಕೆ ಸವಾಲು ಹಾಕಿತ್ತು.

ಅಲ್ಲದೆ ಇಂದು ನೌಕೆಯ ಮಾಹಿತಿ ಸೋರಿಕೆಯಾಗಿರುವ ವಿಚಾರವನ್ನು ಜಗಜ್ಜಾಹಿರು ಮಾಡಿದ್ದ ಮಾಹಿತಿದಾರ ತನ್ನ ಬಳಿ ಇರುವ ಮಾಹಿತಿಯನ್ನು ಆಸ್ಚ್ರೇಲಿಯಾ ಸರ್ಕಾರಕ್ಕೆ  ಹಸ್ತಾಂತರಿಸಲಿದ್ದಾನೆ ಎಂದು ಪತ್ರಿಕೆ ವರದಿ ಮಾಡಿತ್ತು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com