ಆರು ಒಪ್ಪಂದಗಳಿಗೆ ಭಾರತ - ಕಿರ್ಗಿಸ್ತಾನ ಸಹಿ

ಪ್ರವಾಸೋದ್ಯಮ, ಕೃಷಿ, ಗಣಿಗಾರಿಕೆ ಸೇರಿದಂತೆ ಆರು ಒಪ್ಪಂದಗಳಿಗೆ ಭಾರತ ಹಾಗೂ ಕಿರ್ಗಿಸ್ತಾನ ಮಂಗಳವಾರ ಸಹಿ ಹಾಕಿವೆ.
ಕಿರ್ಗಿಸ್ತಾನ ಅಧ್ಯಕ್ಷ ಪುಸ್ತಕ ಕಾಣಿಕೆಯಾಗಿ ನೀಡುತ್ತಿರುವ ಪ್ರಧಾನಿ ಮೋದಿ
ಕಿರ್ಗಿಸ್ತಾನ ಅಧ್ಯಕ್ಷ ಪುಸ್ತಕ ಕಾಣಿಕೆಯಾಗಿ ನೀಡುತ್ತಿರುವ ಪ್ರಧಾನಿ ಮೋದಿ
ನವದೆಹಲಿ: ಪ್ರವಾಸೋದ್ಯಮ, ಕೃಷಿ, ಗಣಿಗಾರಿಕೆ ಸೇರಿದಂತೆ ಆರು ಒಪ್ಪಂದಗಳಿಗೆ ಭಾರತ ಹಾಗೂ ಕಿರ್ಗಿಸ್ತಾನ ಮಂಗಳವಾರ ಸಹಿ ಹಾಕಿವೆ.
ಇಂದು ದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಕಿರ್ಗಿಸ್ತಾನ ಅಧ್ಯಕ್ಷ ಅಲ್ಮಾಜ್​ಬೆಕ್ ಅತಂಬಾಯೆವ್ ಅವರು ದ್ವಿಪಕ್ಷೀಯ ಮಾತುಕತೆ ನಡೆಸಿದ್ದು, ಸುಸ್ಥಿರ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿಗೆ ಒತ್ತು ನೀಡುವುದರ ಜೊತೆಗೆ ರಕ್ಷಣೆ, ಆರೋಗ್ಯ, ಐಟಿ, ಪ್ರವಾಸೋದ್ಯಮ, ಕೃಷಿ, ಗಣಿಗಾರಿಕೆ ಮತ್ತು ಇಂಧನ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ವರ್ಧನೆಗೆ ಉಭಯ ದೇಶಗಳ ನಾಯಕರು ಒಪ್ಪಿಕೊಂಡಿರುವುದಾಗಿ ವಿದೇಶಾಂಗ ಸಚಿವಾಲಯದ ವಕ್ತಾರ ವಿಕಾಸ್ ಸ್ವರೂಪ್ ಅವರು ಟ್ವೀಟ್ ಮಾಡಿದ್ದಾರೆ.
ಆರು ಒಪ್ಪಂದಗಳಿಗೆ ಸಂಬಂಧಿಸಿದ ದಾಖಲೆಗಳನ್ನು ವಿನಿಮಯ ಮಾಡಿಕೊಂಡ ನಂತರ ಅಲ್ಮಾಜ್​ಬೆಕ್ ಅತಂಬಾಯೆವ್ ಅವರೊಂದಿಗೆ ಜಂಟಿ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಪ್ರಧಾನಿ ಮೋದಿ ಅವರು, ಕೇಂದ್ರ ಏಷ್ಯಾ ಪ್ರದೇಶದಲ್ಲಿ ಸುಸ್ಥಿರ ಶಾಂತಿ, ಸ್ಥಿರತೆ ಮತ್ತು ಸಮೃದ್ಧಿ ಸಾಧಿಸುವ ಸಮಾನ ಯತ್ನದಲ್ಲಿ ಕಿರ್ಗಿಸ್ತಾನ ಗಣರಾಜ್ಯ ನಮ್ಮ ಪ್ರಮುಖ ಪಾಲುದಾರ ಎಂದು ಹೇಳಿದರು.
ಅಧ್ಯಕ್ಷ ಅಲ್ಮಾಜ್​ಬೆಕ್ ಮತ್ತು ನಾನು ರಕ್ಷಣಾ ಕ್ಷೇತ್ರದಲ್ಲಿ ಪರಸ್ಪರ ಸಹಕಾರ ನಿಟ್ಟಿನಲ್ಲಿ ಪರಿಶೀಲಿಸಿದ್ದೇವೆ. ಭಯೋತ್ಪಾದನೆ, ಉಗ್ರವಾದಗಳ ಸವಾಲು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ನಮ್ಮ ಯುವಕರು ಮತ್ತು ಸಮಾಜವನ್ನು ಅದರ ವಿರುದ್ಧ ಸಜ್ಜಾಗಿಸುವ ಬಗ್ಗೆ ನಾವು ರ್ಚಚಿಸಿದೆವು ಎಂದು ಪ್ರಧಾನಿ ತಿಳಿಸಿದರು.
ಉಭಯ ರಾಷ್ಟ್ರಗಳ ಆರ್ಥಿಕತೆಯನ್ನು ಸಂಪರ್ಕಿಸುವ ಅಗತ್ಯವನ್ನು ನಾವಿಬ್ಬರೂ ಒಪ್ಪಿದ್ದೇವೆ. ದ್ವಿಪಕ್ಷೀಯ ವ್ಯಾಪಾರ ಮತ್ತು ಆರ್ಥಿಕ ಸಂಪರ್ಕದ ಮೂಲಕ ಜನರಿಗೆ ಹೆಚ್ಚಿನ ಸವಲತ್ತು ಒದಗಿಸಲು ಮತ್ತು ಉಭಯ ರಾಷ್ಟ್ರಗಳ ಜನರ ಮಧ್ಯೆ ಹೆಚ್ಚಿನ ವಿನಿಮಯ ಸಾಧ್ಯವಾಗಿಸುವ ನಿಟ್ಟಿನಲ್ಲಿ ಶ್ರಮಿಸಲು ನಾವು ತೀರ್ಮಾನಿಸಿದ್ದೇವೆ ಎಂದು ಮೋದಿ ಹೇಳಿದರು. ತರಬೇತಿ ಸಾಮರ್ಥ್ಯ ಹೆಚ್ಚಿಸಿಕೊಳ್ಳುವ ನಿಟ್ಟಿನಲ್ಲಿ ಪರಸ್ಪರ ಸಹಕಾರ, ಯುವಕರಿಗೆ ಹೆಚ್ಚಿನ ತರಬೇತಿ ಕಲ್ಪಿಸುವುದರ ಜೊತೆಗೆ ಆರೋಗ್ಯ, ಪ್ರವಾಸೋದ್ಯಮ, ಐಟಿ, ಕೃಷಿ, ಗಣಿಗಾರಿಕೆ ಮತ್ತು ಇಂಧನ ಕ್ಷೇತ್ರಗಳಲ್ಲಿ ಹೆಚ್ಚಿನ ಸಹಕಾರ ವರ್ಧನೆಗೆ ಪ್ರೋತ್ಸಾಹಿಸಲು ನಾವು ತೀರ್ಮಾನಿಸಿದ್ದೇವೆ ಎಂದು ಅವರು ನುಡಿದರು.
ಭಾರತಕ್ಕೆ ಸ್ವಾಗತಿಸಿದ್ದಕ್ಕಾಗಿ ಮತ್ತು ಆತ್ಮೀಯ ಆತಿಥ್ಯ ನೀಡಿದ್ದಕ್ಕಾಗಿ ಆಭಾರಿಯಾಗಿದ್ದೇನೆ ಎಂದು ಕಿರ್ಗಿಸ್ತಾನದ ಅಧ್ಯಕಷ ಅಲ್ಮಾಜ್​ಬೆಕ್ ಅತಂಬಾಯೆವ್ ಹೇಳಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com