ವಿದೇಶಿ ವಿದ್ಯಾರ್ಥಿಗಳ ಮೇಲೆ ಕಣ್ಣಿಡಲು ತಂಡ ರಚಿಸಿ: ಸದಾನಂದ ಗೌಡ

ವಿದೇಶಿ ವಿದ್ಯಾರ್ಥಿಗಳ ಚಲನವಲಗಳ ಮೇಲೆ ಕಣ್ಣಿಡಲು ರಾಜ್ಯ ಸರ್ಕಾರ ವಿಶೇಷ ತಂಡವೊಂದನ್ನು ರಚಿಸುವಂತೆ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರು ರಾಜ್ಯ ಸರ್ಕಾರಕ್ಕೆ ಶುಕ್ರವಾರ ಸೂಚಿಸಿದ್ದಾರೆ...
ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ (ಸಂಗ್ರಹ ಚಿತ್ರ)
ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ (ಸಂಗ್ರಹ ಚಿತ್ರ)

ಬೆಂಗಳೂರು: ವಿದೇಶಿ ವಿದ್ಯಾರ್ಥಿಗಳ ಚಲನವಲಗಳ ಮೇಲೆ ಕಣ್ಣಿಡಲು ರಾಜ್ಯ ಸರ್ಕಾರ ವಿಶೇಷ ತಂಡವೊಂದನ್ನು ರಚಿಸುವಂತೆ ಕೇಂದ್ರ ಕಾನೂನು ಸಚಿವ ಡಿ.ವಿ.ಸದಾನಂದ ಗೌಡ ಅವರು ರಾಜ್ಯ ಸರ್ಕಾರಕ್ಕೆ ಶುಕ್ರವಾರ ಸೂಚಿಸಿದ್ದಾರೆ.

ಹೆಸರುಘಟ್ಟ ಬಳಿ ವಿದೇಶಿ ವಿದ್ಯಾರ್ಥಿಗಳು ಮಾಡಿದ ಕಾರು ಅಪಘಾತದಲ್ಲಿ ಸಾವನ್ನಪ್ಪಿದ್ದ ಪಾದಚಾರಿ ಶಬನಾ ತಾಜ್ ಮನೆಗೆ ಭೇಟಿ ನೀಡಿ ಬಳಿಕ ಮಾತನಾಡಿರುವ ಅವರು, ವಿದೇಶಿ ವಿದ್ಯಾರ್ಥಿಗಳು ಕುಡಿದು ಮಾಡಿದ ಪುಂಡಾಟದಿಂದಾಗಿ ಈ ಘಟನೆ ನಡೆದಿದೆ. ವಿದೇಶಿ ವಿದ್ಯಾರ್ಥಿಗಳು ತಮ್ಮ ವೀಸಾದ ಅವಧಿ ಮುಗಿದಿದ್ದರೂ ಸಹ ರಾಜ್ಯದಲ್ಲಿ ಸ್ವತಂತ್ರವಾಗಿ ಓಡಾಡಿಕೊಂಡಿರುತ್ತಾರೆ. ಅವರನ್ನು ಶೀಘ್ರವೇ ಗಡಿಪಾರು ಮಾಡಬೇಕು. ಅಪಘಾತದಲ್ಲಿ ಸತ್ತ ಮಹಿಳೆ ಸಾವಿಗೆ ರಾಜ್ಯ ಸರ್ಕಾರವೇ ನೇರ ಹೊಣೆ. ಸರ್ಕಾರ ಕೂಡಲೇ ಮಹಿಳೆ ಕುಟುಂಬಸ್ಥರಿಗೆ ರು.25 ಲಕ್ಷ ಪರಿಹಾರ ಘೋಷಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣವಾಗಿ ಕುಸಿದಿದ್ದು, ಇಂದು ಸಾಮಾನ್ಯ ವ್ಯಕ್ತಿಗಳು ರಾತ್ರಿವೇಳೆ ರಸ್ತೆಯಲ್ಲಿ ಸ್ವತಂತ್ರವಾಗಿ ನಡೆದಾಡಲು ಸಾಧ್ಯವಿಲ್ಲದಂತಹ ಪರಿಸ್ಥಿತಿ ಎದುರಾಗಿದೆ. ವಿದೇಶಿಗರು ತಮಗೆ ಯಾವುದೇ ಕಾನೂನುಗಳಿಲ್ಲ ಎಂಬಂತೆ ವರ್ತಿಸುತ್ತಿದ್ದಾರೆ. ವಿದೇಶಿಗರೂ ಸಹ ಕಾನೂನು ಹಾಗೂ ನಿಯಮಗಳನ್ನು ಕಾಪಾಡುವಂತೆ ಸರ್ಕಾರ ಅವರಿಗೆ ಸೂಚನೆ ನೀಡಬೇಕು ಎಂದು ಹೇಳಿದ್ದಾರೆ.  

ಇದೇ ವೇಳೆ ನಗರದಲ್ಲಿ ತಾಂಜೇನಿಯಾ ವಿದ್ಯಾರ್ಥಿನಿ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅವರು, ಇದೊಂದು ನಿಜಕ್ಕೂ ಖಂಡನೀಯ ಘಟನೆ. ಕಾಂಗ್ರೆಸ್ ಉಪಾಧ್ಯಕ್ಷ ರಾಹುಲ್ ಗಾಂಧಿ ಬಂದಾಗ ಮಾತ್ರ ಪೊಲೀಸರು ಅವರ ಸುತ್ತಲೂ ತಿರುಗಾಡುತ್ತಿರುತ್ತಾರೆ. ಆದರೆ, ಸಾಮನ್ಯ ಜನರಿಗೆ ರಕ್ಷಣೆ ನೀಡುವಲ್ಲಿ ಸರ್ಕಾರ ವಿಫಲವಾಗಿದೆ. ತಾಂಜೇನಿಯಾ ವಿದ್ಯಾರ್ಥಿನಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಅಮಾಯಕ ವಿದ್ಯಾರ್ಥಿಗಳನ್ನು ಬಂಧಿಸಲಾಗಿದ್ದು, ಕೂಡಲೇ ಅವರನ್ನು ಬಿಡುಗಡೆ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com