ತಾಪಂ, ಜಿಪಂ ಗೆಲುವಿಗೆ ತಂತ್ರ

ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧರಾಗಿರುವ ಬಿಜೆಪಿ ಸಾಮೂಹಿಕ ನಾಯಕತ್ವದಲ್ಲಿ ಹೋರಾಟ ನಡೆಸಲು ನಿರ್ಧರಿಸಿದೆ. ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸುವ ಬಿಜೆಪಿಯ ಎಲ್ಲಾ ಶಾಸಕರು,ಸಂಸದರು ಒಗ್ಗೂಡಿ ಹೋರಾಟ...
ಸಂಗ್ರಹ ಚಿತ್ರ
ಸಂಗ್ರಹ ಚಿತ್ರ

ಬೆಂಗಳೂರು: ಜಿಲ್ಲಾ ಮತ್ತು ತಾಲೂಕು ಪಂಚಾಯಿತಿ ಚುನಾವಣೆಗೆ ಸಿದ್ಧರಾಗಿರುವ ಬಿಜೆಪಿ ಸಾಮೂಹಿಕ ನಾಯಕತ್ವದಲ್ಲಿ ಹೋರಾಟ ನಡೆಸಲು ನಿರ್ಧರಿಸಿದೆ. ಈ ಚುನಾವಣೆಯನ್ನು ಸವಾಲಾಗಿ ಸ್ವೀಕರಿಸುವ ಬಿಜೆಪಿಯ ಎಲ್ಲಾ ಶಾಸಕರು,ಸಂಸದರು ಒಗ್ಗೂಡಿ ಹೋರಾಟ ನಡೆಯಲು ನಿಶ್ಯಯಿಸಿದ್ದು, ಸ್ಥಳೀಯವಾಗಿ ನಾಯಕತ್ವಕ್ಕೂ ಆದ್ಯತೆ ನೀಡಲು ತೀರ್ಮಾನಿಸಲಾಗಿದೆ.

ಚುನಾವಣೆ ಹಿನ್ನೆಲೆಯಲ್ಲಿ ಭಾನುವಾರ ನಗರದಲ್ಲಿ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಪಕ್ಷದ ನಾಯಕರಾದ ಯಡಿಯೂರಪ್ಪ, ಜಗದೀಶ್ ಶೆಟ್ಟರ್, ಶೋಭಾ ಕರಂದ್ಲಾಜೆ., ಶ್ರೀರಾಮಲು ಸೇರಿದಂತೆ ಅನೇಕರು ಭಾಗವಹಿಸಿ ಚುನಾವಣಾ ತಂತ್ರಗಳನ್ನು ಚರ್ಚಿಸಿದರು. ಸಭೆ ನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಗ್ರಾಮೀಣ ಸಮಸ್ಯೆಗಳ ಬಗೆಹರಿಸುವ ನಿಟ್ಟಿನಲ್ಲಿ ಚುನಾವಣಾ ಪ್ರಣಾಳಿಕೆ ಸಿದ್ಧಪಡಿಸಲಾಗುತ್ತಿದ್ದು, ಜನಪರ ಸಮಸ್ಯೆಗಳ ಮೇಲೆ ಬೆಳಕು ಚೆಲ್ಲುವ ಕಾರ್ಯ ಮಾಡಲಾಗುತ್ತಿದೆ ಎಂದರು.

ಚುನಾವಣೆ ಹಿನ್ನೆಲೆಯಲ್ಲಿ ಜ.11ರಿಂದ ರಾಜ್ಯದ ನಾಯಕರು 9 ತಂಡಗಳನ್ನು ರಚಿಸಿ ವಿವಿಧ ಜಿಲ್ಲೆಗಳಿಗೆ ಪ್ರವಾಸ ಕೈಗೊಳ್ಳಲಿದ್ದು, ಅದೇ ವೇಳೆ ತಾಪಂ ಮತ್ತು ಜಿಪಂ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ ಎಂದು ಹೇಳಿದರು. ಶ್ವೇತಪತ್ರ ಹೊರಡಿಸಲಿ: 2013ರಲ್ಲಿ ಗ್ರಾಮ ವಿಕಾಸ್ ಯೋಜನೆ ಘೋಷಣೆ ಮಾಡಿದ ರಾಜ್ಯ ಸರ್ಕಾರ ಇಲ್ಲಿವರೆಗೆ ಹಣ ಬಿಡುಗಡೆ ಮಾಡಿರಲಿಲ್ಲ. ಕಳೆದ 4 ದಿನಗಳ ಹಿಂದೆ ರು.189 ಕೋಟಿ ಮಾತ್ರ ಬಿಡುಗಡೆ ಮಾಡಿದೆ. ಪ್ರತಿ ನಗರಕ್ಕೆ ರು.75 ಲಕ್ಷ ಅಂದರೂ ಸುಮಾರು ರು.750 ಕೋಟಿ ಅನುದಾನ ಬಿಡುಗಡೆ ಮಾಡಬೇಕಿತ್ತು. ಅಲ್ಪ ಹಣ ಬಿಡುಗಡೆ ಮಾಡಿ ಜಾಹೀರಾತುಗಳ ಮೂಲಕವೇ ಅಭಿವೃದ್ಧಿ ಬಿಂಬಿಸಿಕೊಳ್ಳುತ್ತಿರುವ ರಾಜ್ಯ ಸರ್ಕಾರಕ್ಕೆ ನಾಚಿಕೆಯಾಗಬೇಕು. ಕೂಡಲೇ 14ನೇ ಹಣಕಾಸು ಯೋಜನೆಯ ಶ್ವೇತಪತ್ರ ಹೊರಡಿಸಲು ಎಂದು ಸಿ.ಟಿ.ರವಿ ಆಗ್ರಹಿಸಿದರು.

ಗ್ರಾಮೀಣಾಭಿವೃದ್ಧಿ ಸಚಿವರು ಸದನದಲ್ಲಿ ಹೇಳಿದಂತೆ ನಡೆದುಕೊಳ್ಳಲಿ. ಹೈಟೆಕ್ ಶೌಚಾಲಯ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಶುದ್ಧಿ ನೀರು ಘಟಕಗಳನ್ನು ಪೂರ್ಣಗೊಳಿಸಲು ಸಾಧ್ಯವಾಗದಿದ್ದರೆ ರಾಜಿನಾಮೆ ನೀಡಲು ಸಿದ್ಧಿರಾಗಲಿ ಎಂದು ಹೇಳಿದರು. ಕೇಂದ್ರ ಸರ್ಕಾರ ಕಳೆದ ಎರಡು ತಿಂಗಳ ಹಿಂದೆಯೇ ಬರ ಪರಿಹಾರಕ್ಕೆ ರು.1546 ಕೋಟಿ ಹಣ ಬಿಡುಗಡೆ
ಮಾಡಿದೆ. ಆದರೆ ರಾಜ್ಯ ಸರ್ಕಾರ ಬರಪೀಡಿತ ಪ್ರದೇಶವೆಂಬ ಘೋಷಣೆ ಹೊರತುಪಡಿಸಿ ಉಳಿದಂತೆ ಪರಿಹಾರ ಕಾರ್ಯಗಳನ್ನು ಕೈಗೊಂಡಿಲ್ಲ. ಬರಪೀಡಿತ ಪ್ರದೇಶಗಳನ್ನು ನಿರ್ಲಕ್ಷ್ಯ ಮಾಡಿರುವ ಸರ್ಕಾರ ರಾಜ್ಯದ ಜನ ಮತ್ತು ಜಾನುವಾರುಗಳ ಪರಿಸ್ಥಿತಿ ಅರಿಯಲಿ. ಕುಡಿಯುವ ನೀರು ಸರಬರಾಜು, ಗೋಶಾಲೆ, ಮೇವು ಬ್ಯಾಂಕ್‍ಗಳನ್ನು ತೆರೆಯುವ ಆಸಕ್ತಿ ತೋರಿಲ್ಲ.
ಆರೋಪಕ್ಕೂ ಮುನ್ನ ಕೇಂದ್ರದ ಅನುದಾನ ಸದ್ಬಳಕೆ ಮಾಡಿಕೊಂಡು ನಂತರ ಮಾತನಾಡಲಿ ಎಂದರು.

ಮುಖ್ಯ ಕಾರ್ಯದರ್ಶಿಗೆ ಕೌನ್ಸೆಲಿಂಗ್ ಮಾಡಲಿ
ಮುಖ್ಯ ಕಾರ್ಯದರ್ಶಿಗಳ ನಡೆ ರಾಜ್ಯದ ಆಡಳಿತಕ್ಕೆ ಮಾಡಿದ ಅಪಮಾನ. ಮಾಧ್ಯಮಗಳಿಗೆ ಹೆದರಿ ಮುಖ್ಯ ಕಾರ್ಯದರ್ಶಿಗಳೇ ಓಡಿಹೋದ ಮೇಲೆ ಅವರ ಕೈಕೆಳಗೆ ಕಾರ್ಯ ನಿರ್ವಹಿಸುವ ಜಿಲ್ಲಾಧಿಕಾರಿಗಳ ಕತೆ ಏನು. ಮುಖ್ಯ ಕಾರ್ಯ ದರ್ಶಿಗಳಿಗೆ ಭಯವಿದೆಯೇ ಎಂಬ ಬಗ್ಗೆ ಮುಖ್ಯಮಂತ್ರಿಗಳಿಗೆ ಹೇಳಿ ಒಂದು ಕೌನ್ಸೆಲಿಂಗ್ ನಡೆಸಬೇಕು. ಹಿರಿಯ ಐಎಎಸ್ ಅಧಿಕಾರಿಯಾಗಿರುವ ಅವರಿಗೆ ಮಾಧ್ಯಮಗಳನ್ನು ನಿಭಾಯಿಸುವ ಸಾಮರ್ಥ್ಯವಿಲ್ಲ ಎಂದ ಮೇಲೆ ಸಮಸ್ಯೆಗಳನ್ನು ಹೇಗೆ ಎದುರಿಸಲಿದ್ದಾರೆ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಪ್ರಶ್ನಿಸಿದರು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com