ಕರಡಿ ಮೇಲೆ ಮೃಗದಂತೆ ಮುಗಿಬಿದ್ದ ಮನುಷ್ಯರು

ಚಿತ್ರದುರ್ಗ ಜಿಲ್ಲೆಯಲ್ಲಿ ಮಾನವ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ಆಹಾರ, ನೀರು ಸಿಗದೆ ಕರಡಿಗಳು ನಾಡಿಗೆ ದಾಳಿ ಇಡುತ್ತಿದ್ದರೆ, ಜನರೂ ಸಹ ಕಾಡು ಪ್ರಾಣಿಗಳ ಮೇಲೆ ಪ್ರತಿದಾಳಿ ನಡೆಸುತ್ತಿದ್ದಾರೆ...
ಕರಡಿ ಮೇಲೆ ಗ್ರಾಮಸ್ಥರಿಂದ ಹಲ್ಲೆ (ಸಂಗ್ರಹ ಚಿತ್ರ)
ಕರಡಿ ಮೇಲೆ ಗ್ರಾಮಸ್ಥರಿಂದ ಹಲ್ಲೆ (ಸಂಗ್ರಹ ಚಿತ್ರ)

ಚಿತ್ರದುರ್ಗ: ಚಿತ್ರದುರ್ಗ ಜಿಲ್ಲೆಯಲ್ಲಿ ಮಾನವ ಹಾಗೂ ವನ್ಯಜೀವಿಗಳ ನಡುವಿನ ಸಂಘರ್ಷ ತಾರಕಕ್ಕೇರಿದೆ. ಆಹಾರ, ನೀರು ಸಿಗದೆ ಕರಡಿಗಳು ನಾಡಿಗೆ ದಾಳಿ ಇಡುತ್ತಿದ್ದರೆ, ಜನರೂ ಸಹ ಕಾಡು  ಪ್ರಾಣಿಗಳ ಮೇಲೆ ಪ್ರತಿದಾಳಿ ನಡೆಸುತ್ತಿದ್ದಾರೆ.

ಹತ್ತಾರು ಜನರ ಮೇಲೆ ದಾಳಿ ನಡೆಸಿ ಗಂಭೀರ ಗಾಯಗೊಳಿಸಿದ ಚಿರತೆ ಹಾಗೂ ಕರಡಿಯನ್ನು ಜನರು ಅಟ್ಟಾಡಿಸಿ ಹೊಡೆದು ಕೊಂದ ಪ್ರಕರಣ ಇನ್ನೂ ಹಸಿರಾಗಿರುವಾಗಲೇ ಬುಧವಾರ ಜನರು  ಮತ್ತೊಂದು ಕರಡಿಯನ್ನು ಥಳಿಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪಿಎಸ್‍ಐ ಹಾಗೂ ಗ್ರಾಮಸ್ಥರನ್ನು ಕಚ್ಚಿ ಗಾಯಗೊಳಿಸಿದ ಕರಡಿಯನ್ನು ಉಪ್ಪನಾಯಕನಹಳ್ಳಿ ಗ್ರಾಮಸ್ಥರು ಮನಬಂದಂತೆ  ಥಳಿಸಿದ್ದಾರೆ. ಕರಡಿ ಕಚ್ಚಿದ್ದರಿಂದ ಚಿತ್ರದುರ್ಗ ಗ್ರಾಮಾಂತರ ಪೊಲೀಸ್ ಸಬ್‍ಇನ್‍ಸ್ಪೆಕ್ಟರ್ ಸತೀಶಕುಮಾರ್ ಸೇರಿ ಐವರು ಗಾಯಗೊಂಡು ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಉಪ್ಪನಾಯಕನಹಳ್ಳಿ ಜನರು ಅಕ್ಷರಶಃ ಆಕ್ರೋಶಿತರಾಗಿದ್ದರು. ಸಿಟ್ಟಿನ ಪರಮಾವಧಿ ತಲುಪಿದ ಜನರು ಸೈಜು ಕಲ್ಲು, ದೊಣ್ಣೆಗಳಿಂದ ಕರಡಿಯನ್ನು ಮನಬಂದಂತೆ ಹೊಡೆದು ತಮ್ಮ ಆಕ್ರೋಶ  ತೀರಿಸಿಕೊಂಡರು. ಮಂಗಳವಾರ ಕರಡಿ ಕಾಣಿಸಿಕೊಂಡು ರೈತ ರಾಮಚಂದ್ರಪ್ಪ ಎಂಬವರ ಮೇಲೆ ಹಲ್ಲೆ ನಡೆಸಿತ್ತು. ಬುಧವಾರ ಗ್ರಾಮದ ಹೊಲವೊಂದರಲ್ಲಿ ಅವಿತು ಕುಳಿತಿದ್ದ ಕರಡಿ ಬಗ್ಗೆ  ಮಾಹಿತಿ ಅರಿತ ಗ್ರಾಮಸ್ಥರು ಪೊಲೀಸ್, ಅರಣ್ಯ ಇಲಾಖೆಗೆ ವಿಷಯ ಮುಟ್ಟಿಸಿದ್ದರು. ಗ್ರಾಮಾಂತರ ಪಿಎಸ್‍ಐ ಸತೀಶ್ ಕರಡಿ ಹಿಡಿಯುವ ಕಾರ್ಯಾಚರಣೆಯಲ್ಲಿ ತೊಡಗಿದ್ದ ವೇಳೆ ಕರಡಿ ಏಕಾಏಕಿ  ದಾಳಿ ನಡೆಸಿತು. ಇದರಿಂದ ರೊಚ್ಚಿಗೆದ್ದ ಗ್ರಾಮಸ್ಥರು ಕಲ್ಲು, ದೊಣ್ಣೆಗಳಿಂದ ಕರಡಿ ಮೇಲೆ ಹಲ್ಲೆ ನಡೆಸಿದ್ದಾಗಿ ಗ್ರಾಮಸ್ಥ ಪರಮೇಶ್ವರಪ್ಪ `ಕನ್ನಡಪ್ರಭ'ಕ್ಕೆ ತಿಳಿಸಿದರು.

ಮನುಷ್ಯತ್ವ ಮರೆತರು: ಬರಗಾಲದಿಂದಾಗಿ ಆಹಾರ, ನೀರು ಸಿಗದೆ ಪ್ರಾಣಿಗಳು ನಾಡಿನತ್ತ ನುಗ್ಗುತ್ತಿವೆ. ಎದುರಿಗೆ ಸಿಕ್ಕವರ ಮೇಲೆ ದಾಳಿ ನಡೆಸುತ್ತಿವೆ. ಅರಣ್ಯ ಇಲಾಖೆ ಸಿಬ್ಬಂದಿ  ಸೌಕರ್ಯಗಳಿಲ್ಲದೆ ಸಮಸ್ಯೆ ನಿಯಂತ್ರಿಸಲಾಗದ ಅಸಹಾಯಕತೆ ಪ್ರದರ್ಶಿಸುತ್ತಿದ್ದಾರೆ. ಉಪ್ಪನಾಯಕನ ಹಳ್ಳಿ ಜನ ಮನುಷ್ಯತ್ವವನ್ನೂ ಬಿಟ್ಟು ಮೃಗಗಳಂತೆ ವರ್ತಿಸಿದರು. ಪ್ರಾಣಿಗಳ  ರೀತಿಯಲ್ಲೇ ಆ ಘಟನೆಗೆ ಪ್ರತಿಕ್ರಿಯಿಸಿದರು. ಕರಡಿಯನ್ನು ಅಟ್ಟಾಡಿಸಿ ಹೊಡೆದಿದ್ದಾರೆ. ಕರಡಿ ಸೇರಿದಂತೆ ನಾನಾ ಪ್ರಾಣಿಗಳ ಜಾಗಗಳನ್ನು ನಾವು ಅತಿಕ್ರಮಿಸಿಕೊಂಡಿದ್ದೇವೆ. ಆ ಪ್ರಾಣಿಗಳಿಗೆ ಇರುವ ಪುಟ್ಟ ಪುಟ್ಟ ವಾಸಸ್ಥಳಗಳನ್ನೇ ದೋಚಿದ್ದೇವೆ. ಅದಕ್ಕೆ ಆಹಾರ ಸಿಗದೇ ಊರಿಗೆ ಬಂದುಬಿಟ್ಟರೆ, ನಾವು ಮನುಷ್ಯರು ಎನ್ನುವುದನ್ನೂ ಮರೆತು ಕೋಲು, ದೊಣ್ಣೆ, ಮಚ್ಚು, ಕಲ್ಲುಗಳಿಂದ  ಹೊಡೆದು ಸಾಯಿಸುತ್ತೇವೆ. ಇದ್ಯಾವ ನ್ಯಾಯ...? ವನ್ಯಜೀವಿ ಸಂರಕ್ಷಣಾ ಕಾಯ್ದೆ 1972ರ ಪ್ರಕಾರ ಕರಡಿ ಷೆಡ್ಯೂಲ್ 1ರಲ್ಲಿ ಬರುವ ಪ್ರಾಣಿ. ಅಂದರೆ, ಸಂರಕ್ಷಣೆಗೆ ಅತಿ ಹೆಚ್ಚು ಮಹತ್ವ ನೀಡಬೇಕು  ಎನ್ನುವ ವರ್ಗಕ್ಕೆ ಬರುತ್ತದೆ.

ಹಾಗಾಗಿ ಕರಡಿ ಹತ್ಯೆಗೆ ಯತ್ನಿಸಿರುವುದು ಕಾಯ್ದೆ ಪ್ರಕಾರ ಶಿಕ್ಷಾರ್ಹ ಅಪರಾಧ. ಸೆಕ್ಷನ್ 9, 39 ಹಾಗೂ 50ರ ಪ್ರಕಾರ 3 ವರ್ಷ ಜೈಲು ಶಿಕ್ಷೆಗೆ ಅವಕಾಶವಿದೆ. ಅದೇ ರೀತಿ ಐಪಿಸಿ 429ರ ಪ್ರಕಾರ 6  ತಿಂಗಳ ಕಾಲ ಜೈಲು ಶಿಕ್ಷೆ ವಿಧಿಸಬಹುದು. ಕಾಯ್ದೆ ಪ್ರಕಾರ ಯಾವುದೇ ವನ್ಯ ಜೀವಿಯನ್ನು ಕೊಲ್ಲುವುದಿರಲಿ, ಮುಟ್ಟುವುದೂ ಅಪರಾಧ. ಆತ್ಮರಕ್ಷಣೆಗೆ ಕರಡಿ ಮೇಲೆ ವ್ಯಕ್ತಿ ದಾಳಿ ನಡೆಸಿದ್ದಲ್ಲಿ  ಅಂತಹ ಪ್ರಕರಣವನ್ನು ಮಾನವೀಯತೆ ಆಧಾರದ ಮೇಲೆ ಪರಿಗಣಿಸಿ ಕ್ಷಮಾದಾನ ನೀಡಬಹುದು. ರಾಜ್ಯ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ, ಮುಖ್ಯ ವನ್ಯಜೀವಿ ಪರಿಪಾಲಕರಿಗೆ ಮಾತ್ರ  ಈ ಅಧಿಕಾರ ನೀಡಲಾಗಿದೆ.

ಕರಡಿಗೆ ದೂರದೃಷ್ಟಿ ಸರಿಯಾಗಿಲ್ಲ. ಹಾಗಾಗಿ ಹಠಾತ್ ಗಾಬರಿಗೊಳಗಾಗುತ್ತದೆ. ವನ್ಯ ಜೀವಿಗಳ ಹತ್ಯೆಗೆ ಯತ್ನಿಸುವುದು ಅಪರಾಧ. ಆತ್ಮರಕ್ಷಣೆ ವೇಳೆ ಅನಾಹುತ ಸಂಭವಿಸಿದಲ್ಲಿ ಕ್ಷಮೆಗೆ  ಅವಕಾಶವಿದೆ. ಆದರೆ, ಇಂದಿನ ಸ್ಥಿತಿಯಲ್ಲಿ ಮಾನವವನ್ಯಜೀವಿ ಒಟ್ಟಿಗೆ ಬಾಳುವ ಸೌಹಾರ್ದತೆ ಬೆಳೆಸಿಕೊಳ್ಳುವ ಅವಶ್ಯಕತೆ ಇದೆ.
-ಶರತ್ ಬಾಬು, ವನ್ಯಜೀವಿ ಹೋರಾಟಗಾರ

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com