
ಅಹಮದಾಬಾದ್: ಅದು ಅಹಮದಾಬಾದ್ ನ ಕಲ್ಯಾಣ ಮಂಟಪ. ಅಲ್ಲಿ ಸಂಪ್ರದಾಯಸ್ಥ ಮನೆತನದ ಮದುವೆ ನಡೆಯುತ್ತಿತ್ತು. ಇನ್ನೇನು ವಧುವಿನ ಆಗಮನವಾಗಬೇಕಿತ್ತು. ಸಹಜವಾಗಿ ವಧು ಗಂಭೀರ ವದನಳಾಗಿ, ಮನದಲ್ಲಿ ದುಗುಡ ತುಂಬಿ, ಸುತ್ತಲೂ ಸ್ನೇಹಿತೆಯರ ದಂಡಿನೊಂದಿಗೆ, ಅಕ್ಕಪಕ್ಕದಲ್ಲಿ ತಾಯಿತಂದೆ, ಹಿರಿಯರೊಂದಿಗೆ, ತಲೆ ತಗ್ಗಿಸಿ, ಹಗುರ ಹೆಜ್ಜೆ ಹಾಕುತ್ತ ಸಿಂಗಾರಗೊಂಡು ಬರುತ್ತಿರಬಹುದು ಎಂದು ಅಲ್ಲಿ ಸೇರಿದ್ದ ಬಂಧು ಬಾಂಧವರು ನಿರೀಕ್ಷೆಯಲ್ಲಿದ್ದರು.
ಅಷ್ಟರಲ್ಲೇ ಡುಬುಡುಬು ಡುಬು ಎಂದು ಬುಲೆಟ್ ಬೈಕ್ ಸದ್ದು ಕೇಳಿಸಿತು. ಕಲ್ಯಾಣ ಮಂಟಪದ ಬಾಗಿಲ ಕಡೆ ತಿರುಗಿ ನೋಡಿದ ಅತಿಥಿಗಳಿಗೆ ಅಚ್ಚರಿಯೋ ಅಚ್ಚರಿ. ಸಂಪ್ರದಾಯಸ್ಥಳಂತೆ ಸಿಂಗಾರಗೊಂಡಿದ್ದರೂ. ಕರಿ ಕನ್ನಡಕ ಧರಿಸಿಕೊಂಡು. ಯಮಭಾರದ ಬುಲೆಟ್ ಸವಾರಿ ಮಾಡುತ್ತ ಬಂದ ವಧುವನ್ನು ಕಂಡು ಅವರೆಲ್ಲರೂ ಅವಾಕ್ಕಾದರು.
ಅಂದ ಹಾಗೆ, ಅಕೆಯ ಹೆಸರು ಆಯೆಷಾ ಉಪಾಧ್ಯಾಯ. ರಕ್ಷಾಬಂಧನದ ಉಡುಗೊರೆಯಾಗಿ, ಮದುವೆಗೆ ಕೆಲವೇ ದಿನಗಳ ಹಿಂದೆಯಷ್ಟೇ ಸೋದರ ಆಕಗೆ 350 ಸಿಸಿಯ ರಾಯಲ್ ಎನ್ ಫೀಲ್ಡ್ ಬೈಕ್ ಅನ್ನು ಕೊಡಿಸಿದ್ದ. ಅದನ್ನೇರಿ ಕಲ್ಯಾಣ ಮಂಟಪ ಪ್ರವೇಶಿದ್ದ ಆಯೆಷಾ, ಭಾವಿ ಪತಿ ಸೇರಿದಂತೆ ಎಲ್ಲರ ಅಚ್ಚರಿಗೂ ಕಾರಣಳಾದಳು.
ಅಷ್ಟಕ್ಕೂ ಆಕೆಗೆ 13ನೇ ವಯಸ್ಸಿನಿಂದಲೇ ಬೈಕ್ ರೈಡಿಂಗ್ ಗೊತ್ತು. ಅಷ್ಟೇ ಅಲ್ಲ, ಬೈಕ್ ಗಳೆಂದರೆ ಆಕೆಗೆ ಎಲ್ಲಿಲ್ಲದ ಪ್ರೀತಿ.
ಆಯೆಷಾ ವರಿಸಿದ್ದೂ ಕೆನಡಾದಲ್ಲಿ ನೆಲೆಸಿರುವ ಲೌಕಿಕ್ ವ್ಯಾಸ್ ಎಂಬುವವರನ್ನು. ಆತ ಆಯೇಷಾಳ ಬೈಕ್ ರೈಡಿಂಗ್ ಅನ್ನು ಇಷ್ಟ ಪಟ್ಟಿದ್ದಾರಂತೆ. ಬೈಕ್ ರೈಡಿಂಗ್ ವಿಚಾರದಲ್ಲಿ ನಾನು ಹಿಂಬದಿ ಸವಾರ. ಆಯೆಷಾ ಸಂಪ್ರದಾಯಸ್ಥಳಂತೆ ಮಂಟಪಕ್ಕೆ ಬರುತ್ತಾಳೆ ಎಂದುಕೊಂಡಿದ್ದೆ. ಆದರೆ, ಆಕೆ ಬುಲೆಟ್ ಏರಿ ಬಂದಳು. ಅವಳ ಈ ಬಗೆ ವಿಶಿಷ್ಟವಾಗಿತ್ತು. ನನಗೆ ಇಷ್ಟವಾಯಿತು. ಅವಳ ಬೈಕ್ ರೈಡಿಂಗ್ ಗೆ ನನ್ನ ಸಹಮತವಿದೆ ಎಂದು ಹೇಳಿದ್ದಾರೆ.
ನನ್ನ ಸೋದರ ಮಾವನ ಬುಲೆಟ್ ಪಡೆದು, ಬುಲೆಟ್ ರೈಡರ್ ಗಳೊಂದಿಗೆ ಆಗಾಗ ದೂರದ ಪ್ರಯಾಣ ಹೋಗುವುದೆಂದರೆ ನನಗೆ ಎಲ್ಲಿಲ್ಲದ ಖೂಷಿ. ಒಂದು ಬಾರಿ ಗೋವಾಕ್ಕೂ ಹೋಗಿ ಬಂದಿದ್ದೇನೆ. ಅಷ್ಟೇ ಅಲ್ಲ, ಬುಲೆಟ್ ಬಾಬಾ ದೇವಾಲಯ ಎಂದೇ ಕರೆಸಿಕೊಳ್ಳುವ ಓಂ ಬಣ್ಣಾ ದೇವಾಲಯಕ್ಕೂ ಹೋಗಿ ಬಂದಿದ್ದೇನೆ. ಎಂದು ತನ್ನ ಬುಲೆಟ್ ಸವಾರಿಯ ಮೇಲಿನ ಪ್ರೀತಿಯನ್ನು ಆಯೆಷಾ ಹಂಚಿಕೊಂಡಿದ್ದಾಳೆ. ಕೆನಡಕ್ಕೆ ಹೋದಮೇಲೂ ನಾನು ಬೈಕ್ ರೈಡಿಂಗ್ ಮುಂದುವರಿಸುವುದಾಗಿ ಆಯೆಷಾ ಹೇಳಿಕೊಂಡಿದ್ದಾಳೆ.
Advertisement