ಟೆಕ್ಕಿ ಸ್ವಾತಿ ಹತ್ಯೆ; ತಿರುನಲ್ವೇಲಿಯಲ್ಲಿ ಶಂಕಿತ ಆರೋಪಿ ಬಂಧನ

ನುಂಗಂಬಕ್ಕಂ ರೈಲ್ವೇ ನಿಲ್ದಾಣದಲ್ಲಿ ನಡೆದಿದ್ದ ಟೆಕ್ಕಿ ಸ್ವಾತಿ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚೆನ್ನೈ ಪೊಲೀಸರು ಶುಕ್ರವಾರ ತಡರಾತ್ರಿ ಶಂಕಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ...
ಸ್ವಾತಿ ಹತ್ಯೆ ನಡೆದ ಪ್ರದೇಶ ಮತ್ತು ಶಂಕಿತ ಆರೋಪಿ ರಾಮ್ ಕುಮಾರ್ (ಸಂಗ್ರಹ ಚಿತ್ರ)
ಸ್ವಾತಿ ಹತ್ಯೆ ನಡೆದ ಪ್ರದೇಶ ಮತ್ತು ಶಂಕಿತ ಆರೋಪಿ ರಾಮ್ ಕುಮಾರ್ (ಸಂಗ್ರಹ ಚಿತ್ರ)

ಚೆನ್ನೈ: ನುಂಗಂಬಕ್ಕಂ ರೈಲ್ವೇ ನಿಲ್ದಾಣದಲ್ಲಿ ನಡೆದಿದ್ದ ಟೆಕ್ಕಿ ಸ್ವಾತಿ ಹತ್ಯೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿರುವ ಚೆನ್ನೈ ಪೊಲೀಸರು ಶುಕ್ರವಾರ ತಡರಾತ್ರಿ ಶಂಕಿತ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹಾಡಹಗಲೇ ಅದೂ ಕೂಡ ಜನನಿಭಿಡ ಪ್ರದೇಶದಲ್ಲಿ ಟೆಕ್ಕಿ ಸ್ವಾತಿಯನ್ನು ಕ್ರೂರವಾಗಿ ಇರಿದು ಕೊಂದು ಪರಾರಿಯಾಗಿದ್ದ ದುಷ್ಕರ್ಮಿ ಬಂಧನಕ್ಕೆ ವ್ಯಾಪಕ ಬಲೆ ಬೀಸಿದ್ದ ಚೆನ್ನೈ ಪೊಲೀಸರು ಆರೋಪಿ ಬಂಧನಕ್ಕಾಗಿ 8 ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಆರೋಪಿ ಬಂಧನಕ್ಕೆ ವ್ಯಾಪಕ ಬಲೆ ಬೀಸಿದ್ದ ಪೊಲೀಸರು ಅಂತಿಮವಾಗಿ ಓರ್ವ ಶಂಕಿತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಪೊಲೀಸ್ ಮೂಲಗಳ ಪ್ರಕಾರ ಬಂಧಿತ ಶಂಕಿತ ದುಷ್ಕರ್ಮಿಯನ್ನು 24 ವರ್ಷದ ಪಿ ರಾಮ್ ಕುಮಾರ್ ಎಂದು ಗುರುತಿಸಲಾಗಿದ್ದು, ಈತನ್ನು ಮೀನಾಕ್ಷಿಪುರಂ ಗ್ರಾಮದಲ್ಲಿ ಶುಕ್ರವಾರ ತಡರಾತ್ರಿ ಬಂಧಿಸಲಾಗಿದೆ ಎಂದು ತಿಳಿದುಬಂದಿದೆ.

ಶಂಕಿತ ದುಷ್ಕರ್ಮಿ ತಿರುನಲ್ವೇಲಿಯ ಮೀನಾಕ್ಷಿಪುರಂ ಸಮೀಪದಲ್ಲಿರುವ ಕುರಿತು ಖಚಿತ ಮಾಹಿತಿ ಪಡೆದ ಪೊಲೀಸರು ರಾಮ್ ಕುಮಾರ್ ನನ್ನು ವಶಕ್ಕೆ ಪಡೆದಿದ್ದಾರೆ. ಶಂಕಿತ ವ್ಯಕ್ತಿಯ ಮೊಬೈಲ್ ಫೋನ್ ಅನ್ನು ಟ್ರ್ಯಾಕ್ ಮಾಡುತ್ತಿದ್ದ ಪೊಲೀಸರು ಆತ ಉಳಿದುಕೊಳ್ಳುತ್ತಿದ್ದ ಪ್ರದೇಶವನ್ನು ಪತ್ತೆ ಮಾಡಿ ರಾತ್ರೋ-ರಾತ್ರಿ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಂತೆಯೇ ಕೊಲೆ ನಡೆದ ದಿನ ಸಿಸಿಟಿವಿಯಲ್ಲಿ ತೋರಿಸಿರುವಂತೆ ಆತ ಧರಿಸಿದ್ದ ಟೀ-ಶರ್ಟ್ ಕೂಡ ಮ್ಯಾಚ್ ಆಗಿದ್ದು, ಈತನೇ ಆ ಕೊಲೆಗಾರ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.

ಬಂಧಿತ ಆರೋಪಿ ರಾಮ್ ಕುಮಾರ್ ಕೂಡ ಸಾಫ್ಟ್ ವೇರ್ ಉದ್ಯೋಗಿಯಾಗಿದ್ದು, ಪೊಲೀಸರು ಆತನ ಬಂಧನಕ್ಕೆ ಯತ್ನಿಸುತ್ತಿದ್ದಂತೆಯೇ ಈತ ಆತ್ಮಹತ್ಯೆಗೆ ಯತ್ನಿಸಿದ್ದ. ತನ್ನ ಬಳಿ ಇದ್ದ ಬ್ಲೇಡ್ ನಿಂದ ತನ್ನ ಕತ್ತನ್ನು ಸೀಳಿಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಈ ವೇಳೆ ಕೂಡಲೇ ಆತನನ್ನು ಪೊಲೀಸರು ಆಸ್ಪತ್ರೆಗೆ ದಾಖಲು ಮಾಡಿದ್ದು, ಪ್ರಾಣಾಪಾಯದಿಂದ ಪಾರಾಗಿದ್ದಾನೆ ವೈದ್ಯರು ತಿಳಿಸಿದ್ದಾರೆ ಎಂದು ತಿರುನಲ್ವೇಲಿ ಎಸ್ ಪಿ ವಿಕ್ರಮನ್ ಮಾಧ್ಯಮಗಳಿಗೆ ಮಾಹಿತಿ ನೀಡಿದ್ದಾರೆ.

ಉದ್ಯೋಗಕ್ಕಾಗಿ ಶೋಧ ನಡೆಸಿದ್ದ ರಾಮ್ ಕುಮಾರ್ ಈ ಬಗ್ಗೆ ಸ್ವಾತಿ ಅವರೊಂದಿಗೆ ಸಂಪರ್ಕದಲ್ಲಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಈತನ ತಂದೆಯ ಹೆಸರು ಪರಮಶಿವನ್ ಎಂದು ತಿಳಿದುಬಂದಿದ್ದು, ಅವರು ವೃತ್ತಿಯಲ್ಲಿ ದಿನಗೂಲಿ ನೌಕರರಂತೆ. ಪರಮಶಿವನ್ ಮೂಲತಃ ಶೆಂಗೋಟೈ ಗ್ರಾಮದವರಾಗಿದ್ದು, ಸ್ವಾತಿ ನಿವಾಸದ ಎದುರುಮನೆಯಲ್ಲೇ ಆರೋಪಿ ರಾಮ್ ಕುಮಾರ್ ರೂಂ ಮಾಡಿಕೊಂಡಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಅಂತೆಯೇ ಕೊಲೆಗೆ ವೈಯುಕ್ತಿಕ ಕಾರಣಗಳಿರಬಹುದೇ ಎಂದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ನಿನ್ನೆಯಷ್ಟೇ ಪೊಲೀಸರು ಬಿಡುಗಡೆ ಮಾಡಿದ್ದ ನೂತನ ಸಿಸಿಟಿವಿ ದೃಶ್ಯಾವಳಿಯಲ್ಲಿ ಸ್ವಾತಿ ಹತ್ಯೆಯಾದ ಕೆಲವೇ ಕ್ಷಣಗಳ ಬಳಿಕ ಮೊಟಾರ್ ಬೈಕ್ ನಲ್ಲಿ ಶಂಕಿತ ವ್ಯಕ್ತಿಯೋರ್ವ ಹಾದುಹೋಗಿದ್ದ. ಇದು ಈ ವರೆಗಿನ ಪ್ರಮುಖ ತಿರುವು ಎಂದು ಭಾವಿಸಲಾಗಿತ್ತು. ಇದೀಗ ಪೊಲೀಸರು ದಿಢೀರ್ ಕಾರ್ಯಾಚರಣೆ ನಡೆಸಿ ಶಂಕಿತ ಆರೋಪಿ ರಾಮ್ ಕುಮಾರ್ ನನ್ನು ಬಂಧಿಸಿದ್ದಾರೆ.

ಪ್ರಸ್ತುತ ರಾಮ್ ಕುಮಾರ್ ಬಂಧನದೊಂದಿಗೆ ಇಡೀ ದೇಶಾದ್ಯಂತ ವ್ಯಾಪಕ ಚರ್ಚೆಗೆ ಕಾರಣವಾಗಿದ್ದ ಟೆಕಿ ಸ್ವಾತಿ ಹತ್ಯೆ ಪ್ರಕರಣಕ್ಕೆ ಪ್ರಮುಖ ತಿರುವು ದೊರೆತಿದ್ದು, ಆತನ ವಿಚಾರಣೆ ಬಳಿಕವಷ್ಟೇ ಕೊಲೆಗೆ ನಿಖರವಾದ ಕಾರಣ ತಿಳಿದುಬರಲಿದೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com