ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಸರ್ಕಾರದ ಪ್ರಧಾನ ಕಾರ್ಯದರ್ಶಿ ರಾಜೇಂದ್ರ ಕುಮಾರ್ ಅವರನ್ನು ಐದು ದಿನಗಳ ಸಿಬಿಐ ವಶಕ್ಕೆ ನೀಡಿ ಕೋರ್ಟ್ ಆದೇಶ ಹೊರಡಿಸಿದೆ.
ಅಧಿಕಾರ ದುರುಪಯೋಗ ಪಡಿಸಿಕೊಂಡು ಟೆಂಡರ್ ನೀಡಿದ 9.5 ಕೋಟಿ ರುಪಾಯಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜೇಂದ್ರ ಕುಮಾರ್ ಹಾಗೂ ಎಂಡೊವರ್ ಸಿಸ್ಟಮ್ಸ್ ಪ್ರೈವೇಟ್ ಲಿ. ಕಂಪನಿಯ ನಿರ್ದೇಶಕಾರನ್ನು ಸೇರಿದಂತೆ ಐವರನ್ನು ಸಿಬಿಐ ಅಧಿಕಾರಿಗಳು ನೆನ್ನೆ ವಶಕ್ಕೆ ಪಡೆದಿದ್ದರು.
ಕುಮಾರ್ ಅವರು 2006ರಲ್ಲಿ ಎಂಡೊವರ್ ಸಿಸ್ಟಮ್ಸ್ ಪ್ರೈವೇಟ್ ಲಿ. ಎಂಬ ಕಂಪನಿಯನ್ನು ಸ್ಥಾಪಿಸಿ, ಸರ್ಕಾರಕ್ಕೆ ಸಾಫ್ಟವೇರ್ ಒದಗಿಸುವ ಗುತ್ತಿಗೆ ನೀಡಿದ ಆರೋಪ ಎದುರಿಸುತ್ತಿದ್ದಾರೆ.
ಕುಮಾರ್ ಅವರು 1989ರ ಬ್ಯಾಚ್ ಐಎಎಸ್ ಅಧಿಕಾರಿಯಾಗಿದ್ದು, ಕೇಜ್ರಿವಾಲ್ ಅವರು ಎರಡನೇ ಬಾರಿ ಅಧಿಕಾರಕ್ಕೆ ಬಂದ ನಂತರ ಕಳೆದ ಫೆಬ್ರವರಿಯಲ್ಲಿ ತಮ್ಮ ಪ್ರಧಾನ ಕಾರ್ಯದರ್ಶಿಯನ್ನಾಗಿ ನೇಮಕ ಮಾಡಿದ್ದರು.