ಮಾತೃಭಾಷೆ ಇಲ್ಲವೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ: ಜ್ಞಾನ ಆಯೋಗ ಶಿಫಾರಸು

1ರಿಂದ 4ನೇ ತರಗತಿವರೆಗೆ ಮಾತೃಭಾಷೆ ಇಲ್ಲವೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು. ಈ ಹಂತದಲ್ಲಿ ಇಂಗ್ಲಿಷ್‌ ಅನ್ನು ದ್ವಿತೀಯ...
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ
ಬೆಂಗಳೂರು: 1ರಿಂದ 4ನೇ ತರಗತಿವರೆಗೆ ಮಾತೃಭಾಷೆ ಇಲ್ಲವೆ ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು. ಈ ಹಂತದಲ್ಲಿ ಇಂಗ್ಲಿಷ್‌ ಅನ್ನು ದ್ವಿತೀಯ ಭಾಷೆಯಾಗಿ ಕಲಿಸಬೇಕು ಎಂದು ಡಾ.ಕೆ. ಕಸ್ತೂರಿರಂಗನ್‌ ನೇತೃತ್ವದ ‘ಕರ್ನಾಟಕ ಜ್ಞಾನ ಆಯೋಗ’ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದೆ.
ಕರ್ನಾಟಕ ಜ್ಞಾನ ಆಯೋಗ ಸಿದ್ಧಪಡಿಸಿರುವ ಶಿಕ್ಷಣ ನೀತಿ ಕರಡನ್ನು ಕಸ್ತೂರಿರಂಗನ್‌ ಅವರು ಶನಿವಾರ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ತನ್ವೀರ್‌ ಸೇಠ್‌ ಅವರಿಗೆ ಸಲ್ಲಿಸಿದರು.
ಪ್ರಾಥಮಿಕ ಶಿಕ್ಷಣ ಮಾತೃಭಾಷೆಯಲ್ಲೇ ಇರಬೇಕು. 5ನೇ ತರಗತಿಯಿಂದ ಶಿಕ್ಷಣ ಮಾಧ್ಯಮದ ಆಯ್ಕೆ ಸ್ವಾತಂತ್ರ್ಯ ವಿದ್ಯಾರ್ಥಿಗಳಿಗೆ ಇರಬೇಕು. ಅಲ್ಲದೆ, ಮಕ್ಕಳ ಆಯ್ಕೆಗೆ ಅನುಗುಣವಾಗಿ ಇನ್ನೆರಡು ಭಾಷೆಗಳನ್ನು ಹೆಚ್ಚುವರಿಯಾಗಿ ಕಲಿಯಲು ಅವಕಾಶ ಕೊಡಬೇಕು ಎಂದು ಶಿಫಾರಸು ಮಾಡಲಾಗಿದೆ.
ಪ್ರಾಥಮಿಕ ಶಿಕ್ಷಣ ಮಾತೃಭಾಷೆ ಅಥವಾ ರಾಜ್ಯ ಭಾಷೆಯಲ್ಲಿ ಇರಬೇಕು ಎಂದು ರಾಜ್ಯ ಸರ್ಕಾರ ಹೊರಡಿಸಿದ್ದ ಆದೇಶ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತ್ತು. ‘ಮಗುವಿನ ಶಿಕ್ಷಣ ಮಾಧ್ಯಮ ಕುರಿತು ಪಾಲಕರೇ ನಿರ್ಧರಿಸಬೇಕು. ಇದರಲ್ಲಿ ಸರ್ಕಾರ ಹಸ್ತಕ್ಷೇಪ ಮಾಡಬಾರದು’ ಎಂದು ಸುಪ್ರೀಂಕೋರ್ಟ್‌ 2014ರ ಮೇ ನಲ್ಲಿ  ತೀರ್ಪು ನೀಡಿತ್ತು. ಬಳಿಕ ಶಿಕ್ಷಣ ನೀತಿ ರೂಪಿಸುವಂತೆ ರಾಜ್ಯ ಸರ್ಕಾರ 2015ರ ಮೇ ನಲ್ಲಿ ಕರ್ನಾಟಕ ಜ್ಞಾನ ಆಯೋಗಕ್ಕೆ ಕೋರಿತ್ತು. ಅದರಂತೆ ಆಯೋಗದ ಸದಸ್ಯರು ಹಲವು ಸಲ ಸಭೆ ಸೇರಿ ಚರ್ಚಿಸಿದ ಬಳಿಕ ವರದಿ ಸಿದ್ಧಪಡಿಸಿ ಸರ್ಕಾರಕ್ಕೆ ಸಲ್ಲಿಸಿದ್ದಾರೆ.
ಆಯೋಗದ ವರದಿಯಲ್ಲಿ ಶಾಲಾ ಶಿಕ್ಷಣಕ್ಕೆ ಸಂಬಂಧಿಸಿದ 70, ಉನ್ನತ ಶಿಕ್ಷಣ ಕುರಿತು 79 ಮತ್ತು ಶಿಕ್ಷಣ ಆಡಳಿತಕ್ಕೆ ಸಹಕಾರಿಯಾಗುವ  16 ಶಿಫಾರಸುಗಳನ್ನು ಸೇರಿಸಲಾಗಿದೆ.
ವರದಿ ಸಲ್ಲಿಸಿದ ನಂತರ ಮಾಧ್ಯಮ ಪ್ರತಿನಿಧಿಗಳ ಜತೆ ಮಾತನಾಡಿದ ಡಾ.ಕಸ್ತೂರಿ ರಂಗನ್‌, ಮಕ್ಕಳಿಗೆ ರಾಷ್ಟ್ರೀಯ ಮತ್ತು ಜಾಗತಿಕ ಗುಣಮಟ್ಟದ ಶಿಕ್ಷಣ ಮಾತೃಭಾಷೆಯಲ್ಲಿಯೇ ಸಿಗಬೇಕು ಎಂದು ಅಭಿಪ್ರಾಯಪಟ್ಟರು.
ಜ್ಞಾನ ಆಯೋಗದ ಕೆಲವು ಪ್ರಮುಖ ಶಿಫಾರಸುಗಳು
ಪ್ರತಿ ಮಗು/ವಿದ್ಯಾರ್ಥಿಗೆ ಅತ್ಯುನ್ನತ ಗುಣಮಟ್ಟದ ಶಿಕ್ಷಣ ದೊರೆಯಬೇಕು. ಅದೇ ರೀತಿ ಖಾಸಗಿ ಶಿಕ್ಷಣ ವಲಯದಲ್ಲೂ ಸರ್ಕಾರ ತನ್ನ ಜವಾಬ್ದಾರಿ ಸಮರ್ಥವಾಗಿ ನಿಭಾಯಿಸಬೇಕು.
ರಾಜ್ಯದಲ್ಲಿ ಲಿಂಗತಾರತಮ್ಯ ಹೋಗಲಾಡಿಸಲು ವಿದ್ಯಾರ್ಥಿನಿಯರಿಗೆ ಪದವಿವರೆಗಿನ ಶಿಕ್ಷಣವನ್ನು  ಖಾತ್ರಿ ಮಾಡಬೇಕು.
ಪಿಯುವರೆಗೆ (12ನೇ ತರಗತಿ) ಎಲ್ಲ ವಿದ್ಯಾರ್ಥಿಗಳಿಗೂ ಗುಣಮಟ್ಟದ ಶಿಕ್ಷಣ ಸಿಗಬೇಕು. ವಿದ್ಯಾರ್ಥಿಗಳ ಹುಟ್ಟು ಅಥವಾ ಭೌಗೋಳಿಕ ಕಾರಣಕ್ಕೆ ಶಿಕ್ಷಣ ಹಕ್ಕಿನಿಂದ ವಂಚನೆ ಆಗಬಾರದು.
ಸಿಬಿಎಸ್‌ಇ ಪಠ್ಯಕ್ರಮ ಅಳವಡಿಸಬೇಕು. ಆದರೆ, ಅದರಲ್ಲಿ ರಾಜ್ಯದ ಇತಿಹಾಸ, ಸಂಸ್ಕೃತಿ, ಭೌಗೋಳಿಕ ಪರಿಚಯ ಕಡ್ಡಾಯವಾಗಿ ಇರಬೇಕು.
ಶಿಕ್ಷಕರಾಗಿ ನೇಮಕ ಆಗುವವರು ಕನಿಷ್ಠ ಬಿ.ಇಡಿ ಪದವಿ ಪಡೆದಿರಬೇಕು.  ಈಗಿರುವ ಶಿಕ್ಷಕರಿಗೂ ಬಿ.ಇಡಿ ಪದವಿ ಪಡೆಯಲು ಅವಕಾಶ ನೀಡಬೇಕು.
ಆಡಳಿತ, ಶಿಕ್ಷಣ ಮತ್ತು ಹಣಕಾಸು ವಿಷಯದಲ್ಲಿ ವಿಶ್ವವಿದ್ಯಾಲಯಗಳಿಗೆ ಸಂಪೂರ್ಣ ಸ್ವಾಯತ್ತತೆ ಇರಬೇಕು.
ವಿಶ್ವವಿದ್ಯಾಲಯ/ ಸಂಸ್ಥೆಗಳ ಕಾರ್ಯಕ್ಷಮತೆ ಆಧಾರದ ಮೇಲೆ ರಾಜ್ಯ ಸರ್ಕಾರ ಹಣ ಬಿಡುಗಡೆ ಮಾಡಬೇಕು.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com